ADVERTISEMENT

ಹರಾಜಿಗೆ ಸದಸ್ಯರ ವಿರೋಧ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 9:55 IST
Last Updated 13 ಅಕ್ಟೋಬರ್ 2012, 9:55 IST

ಕೊಪ್ಪಳ: ಹೂವಿನಾಳ ರಸ್ತೆಯ ಆಶ್ರಯ ಬಡಾವಣೆಯಲ್ಲಿರುವ ವಾಣಿಜ್ಯ ನಿವೇಶನಗಳನ್ನು ಹರಾಜು ಮಾಡಬೇಕು ಎಂಬ ಪ್ರಸ್ತಾವನೆಗೆ ನಗರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಕುರಿತ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಬಹುತೇಕ ಸದಸ್ಯರು, ಯಾವುದೇ ಕಾರಣಕ್ಕೂ ಸದರಿ ನಿವೇಶನಗಳನ್ನು ಹರಾಜು ಮಾಡಬಾರದು ಎಂದು ಹೇಳಿದರು.

ಪ್ರಸ್ತಾವನೆ ಕುರಿತಂತೆ ಮಾತನಾಡಿದ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು, ನಗರಸಭೆಗೆ ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದು, ಯಾವುದೇ ರೀತಿಯ ಹಣಕಾಸು ತೊಂದರೆ ಇಲ್ಲ. ಹೀಗಾಗಿ ಈ ವಾಣಿಜ್ಯ ನಿವೇಶನಗಳನ್ನು ಮಾರಾಟ ಮಾಡುವುದು ಬೇಡ ಎಂದು ಅಭಿಪ್ರಾಯಪಟ್ಟರು.

ಈ ನಿವೇಶನಗಳನ್ನು ಒಮ್ಮೆ ಮಾರಾಟ ಮಾಡಿದರೆ, ಮತ್ತೆ ಇಂತಹ ಆಸ್ತಿಯನ್ನು ಖರೀದಿ ಮಾಡುವುದು ಆಗುವುದಿಲ್ಲ. ಈ ನಿವೇಶನಗಳಿಗೆ ತಂತಿ ಬೇಲಿ ಹಾಕಿ ಇಲ್ಲವೇ ಭೋಗ್ಯಕ್ಕೆ ನೀಡಿ ಎಂದೂ ಸಲಹೆ ನೀಡಿದರು. ಕಾಂಗ್ರೆಸ್ ಸದಸ್ಯ ಜಾಕೀರ ಹುಸೇನ್ ಕಿಲ್ಲೇದಾರ, ಮಾನ್ವಿ ಪಾಷಾ ಸಹ ಈ ಮಾತಿಗೆ ಬೆಂಬಲ ಸೂಚಿಸಿದರು.

ಸದಸ್ಯರ ಮಾತಿಗೆ ಉತ್ತರಿಸಿದ ಅಧ್ಯಕ್ಷ ಸುರೇಶ ದೇಸಾಯಿ, ಇದು ಆಶ್ರಯ ಸಮಿತಿ ವ್ಯಾಪ್ತಿಗೆ ಬರುವ ವಿಷಯ. ಹೀಗಾಗಿ ಸಮಿತಿ ಅಧ್ಯಕ್ಷರಾಗಿರುವ ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ವಾಣಿಜ್ಯ ನಿವೇಶನಗಳಾಗಿರುವುದರಿಂದ ಬಡವರಿಗೆ ಹಂಚಲು ಬರುವುದಿಲ್ಲ ಎಂದು ಹೇಳುವ ಮೂಲಕ ಮಾನ್ವಿ ಪಾಷಾ ಸಲಹೆಯನ್ನು ತಿರಸ್ಕರಿಸಿದರು. ಕೊನೆಗೆ ಎಲ್ಲ ಸದಸ್ಯರು ಈ ನಿವೇಶನಗಳ ಹರಾಜಿಗೆ ವಿರೋಧ ವ್ಯಕ್ತಪಡಿಸಿದರೂ, ಈ ವಿಷಯವನ್ನು ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ದೇಸಾಯಿ ರೂಲಿಂಗ್ ನೀಡಿದರು.

ಎರಡು ಸಸಿಗಳನ್ನು ನೆಟ್ಟ ನಂತರವಷ್ಟೇ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಬೇಕು ಎಂಬ ಠರಾವು ಎಷ್ಟರ ಮಟ್ಟಿಗೆ ಜಾರಿಗೆ ಬಂದಿದೆ ಎಂದು ಕೇಳುವ ಮೂಲಕ ಮಹಿಬೂಬ ಹುಸೇನ್ ನಾಲಬಂದ್ ಮಹತ್ವದ ಚರ್ಚೆಗೆ ನಾಂದಿ ಹಾಡಿದರು.

ಚಂದ್ರಶೇಖರ ಕವಲೂರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಈ ಕುರಿತಂತೆ ನಗರಸಭೆ ಗೊತ್ತುವಳಿ ಸ್ವೀಕರಿಸಿತ್ತು. ಆದರೆ, ಈ ನಿರ್ಣಯ ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ. ನಗರದಲ್ಲಿ ಈ ರೀತಿ ಹಸಿರೇ ಮಾಯವಾದ ಕಾರಣ ಮಳೆಯಾಗುತ್ತಿಲ್ಲ ಎಂದು ಹೇಳಿದರು.

ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು ಅವರೇ ತಮ್ಮ ಮನೆ ಮುಂದೆ ಸಸಿಗಳನ್ನು ನೆಟ್ಟಿಲ್ಲ ಎಂದು ಹೇಳುವ ಮೂಲಕ ಅಧ್ಯಕ್ಷ ದೇಸಾಯಿ ಚುಚ್ಚಿದರು. ಈ ಮಾತನ್ನು ನಿರಾಕರಿಸಿದ ಚಂದ್ರಶೇಖರ ಕವಲೂರು, ತಮ್ಮ ಮನೆ ಮುಂದೆ ಗಿಡಗಳಿವೆ ಎಂದು ಸಮಜಾಯಿಷಿ ನೀಡಿದರು.

ಹಲವು ಸುತ್ತಿನ ಚರ್ಚೆ, ಅಧಿಕಾರಿಗಳ ವಿವರಣೆ ನಂತರ ಮಾತನಾಡಿದ ನಾಲಬಂದ್, ಈ ವರೆಗೆ ನಡೆದ ನಗರಸಭೆಯ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳು ಯಾವವು, ಅವು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬಂದಿವೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಆಗ್ರಹಿಸಿದರು.

ನಗರೋತ್ಥಾನ ಯೋಜನೆಯಡಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳುವ ಕಾಮಗಾರಿ ಕನಿಷ್ಠ 20 ವರ್ಷಗಳಷ್ಟು ಬಾಳಿಕೆ ಬರುತ್ತವೆಯೇ? ಈ ಯೋಜನೆಯಡಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ನಗರಸಭೆ ಈಗಾಗಲೇ ಅಭಿವೃದ್ಧಿಪಡಿಸಿರುವ ರಸ್ತೆ, ಚರಂಡಿ, ನೀರಿನ ಪೈಪ್‌ಲೈನ್‌ಗಳನ್ನು ಹಾಳು ಮಾಡುವುದು ಎಷ್ಟು ಸರಿ ಎಂದು ಜೆಡಿಎಸ್ ಸದಸ್ಯ ಮಹಾದೇವಪ್ಪ ಜವಳಿ ಪ್ರಶ್ನಿಸಿದರು.

ನಗರದ ಯಾವ ಭಾಗದಲ್ಲಿ ಒಳಚರಂಡಿ, ನೀರು ಪೂರೈಕೆಗೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ನಡೆದಿದೆಯೋ ಅಂತಹ ಕಾಮಗಾರಿ ಪೂರ್ಣಗೊಂಡ ನಂತರವೇ ನಗರೋತ್ಥಾನ ಯೋಜನೆ ಕಾಮಗಾರಿ ಕೈಗೊಳ್ಳುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಉಪಾಧ್ಯಕ್ಷ ಅಮ್ಜದ್ ಪಟೇಲ್, ಸದಸ್ಯರಾದ ಇಂದಿರಾ ಭಾವಿಕಟ್ಟಿ, ಗವಿಸಿದ್ಧಪ್ಪ ಮುಂಡರಗಿ, ವಿಷ್ಣುತೀರ್ಥ ಗುಬ್ಬಿ, ಕಾಟನ್‌ಪಾಷಾ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.