ಯಲಬುರ್ಗಾ: ತಾಲ್ಲೂಕಿನ ಹುಲೇಗುಡ್ಡ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಹತ್ತಾರು ವಿದ್ಯುತ್ ಕಂಬ ನೆಲಕ್ಕುರುಳಿದ್ದು, ಸಾಕಷ್ಟು ಮನೆಗಳ ಛಾವಣಿ ಹಾರಿಹೋದ ಪರಿಣಾಮ ಅಪಾರ ನಷ್ಟ ಉಂಟಾಗಿದೆ. ಅಲ್ಲದೇ ವಿದ್ಯುತ್ ವ್ಯತ್ಯಯದಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.
ಶನಿವಾರ ಸಂಜೆಹೊತ್ತಿಗೆ ಆರಂಭಗೊಂಡ ಬಿರುಗಾಳಿ ಮಿಶ್ರಿತ ಮಳೆಯಿಂದ ನೂರಾರು ಮರಗಳ ಟೊಂಗೆ ಮುರಿದಿವೆ. ಮತ್ತೆ ಕೆಲವು ಮರಗಳು ಬೇರು ಸಮೇತ ಕಿತ್ತು ಬಿದ್ದಿವೆ. ಮನೆ ಛಾವಣಿ ಕಿತ್ತು ಹಾರಿಹೋಗಿ ಅನೇಕ ಗುಡಿಸಲು ನೆಲಸಮಗೊಂಡಿವೆ. ಮೇಲಾಗಿ ಊರ ಹೊರವಲಯದಲ್ಲಿ ಸಂಗ್ರಹಿಸಿಟ್ಟಿದ್ದ ಮೇವಿನ ಬಣವಿಗಳು ಚಲ್ಲಾಪಿಲ್ಲಿಯಾಗಿವೆ.
ಹೀಗೆ ಸಾಕಷ್ಟು ನಷ್ಟಕ್ಕೆ ಕಾರಣವಾಗಿದೆ ಎಂದು ಗ್ರಾಪಂ ಸದಸ್ಯ ಶರಣಯ್ಯ ಚಿತ್ತರಗಿಮಠ, ಮುದಕಪ್ಪ ಕಂತಿ, ಹನಮಂತಪ್ಪ ಮುರಡಿ ಸೇರಿದಂತೆ ಅನೇಕರು ತಿಳಿಸಿದ್ದಾರೆ.
ಗ್ರಾಮದಲ್ಲಿರುವ ಆರೇಳು ಕೈಪಂಪುಗಳಲ್ಲಿ ಕೇವಲ ಒಂದು ಮಾತ್ರ ಉತ್ತಮ ಸ್ಥಿತಿಯಲ್ಲಿದ್ದು, ಉಳಿದವುಗಳು ಸಂಪೂರ್ಣ ಕೆಟ್ಟು ಹೋಗಿವೆ. ಇಲ್ಲದಂತಿವೆ. ಬಿರುಗಾಳಿಗೆ ಕಂಬಗಳು ಉರುಳಿದ ಪರಿಣಾಮ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಗುಡಿಸಲಿನಲ್ಲಿ ವಾಸವಾಗಿದ್ದ ಅನೇಕ ಕುಟುಂಬಗಳು ಬೀದಿಗೆ ಬಂದಂತಾಗಿದೆ. ಒಟ್ಟಾರೆಯಾಗಿ ಸಾಕಷ್ಟು ಸೊತ್ತುಗಳು ಗಾಳಿ ಮಳೆಗೆ ಹಾನಿಯಾಗಿವೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ನೆರವು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.