ADVERTISEMENT

ಹೊಟ್ಟೆಗೆ ಗಟ್ಟಿಕಾಳು, ಹೈನುಗಳಿಗೆ ಮೇವು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 10:55 IST
Last Updated 21 ಅಕ್ಟೋಬರ್ 2011, 10:55 IST

ಹನುಮಸಾಗರ: ಜಾನುವಾರುಗಳ ಮೇವಿನ ಸಮಸ್ಯೆ ಪರಿಹಾರಕ್ಕಾಗಿ ಹಾಗೂ ಹೈನುಗಳಿಗೆ ಬಹುತೇಕ ದಿನ ರಸಭರಿತ ಹಸಿಮೇವು ದಕ್ಕುವಂತಾಗಲೆಂದು ನೀರಾವರಿ ಸೌಲಭ್ಯ ಹೊಂದಿರುವ ಕೆಲ ರೈತರು ಹೊಸ ವಿಧಾನವೊಂದನ್ನು ಕಂಡುಕೊಂಡಿದ್ದಾರೆ.

ತಮ್ಮ ಹೊಟ್ಟೆಗೆ ಕಾಳು ದೊರಕಬೇಕು ಜೊತೆಗೆ ಬದುಕಿಗೆ ಆಸರೆಯಾಗಿರುವ ಹೈನುಗಳಿಗೆ ಬಹುತೇಕ ದಿನ ರಸಮೇವೂ ದೊರಕಬೇಕು ಎಂಬ ಉದ್ದೇಶದಿಂದ ಹೈಬ್ರಿಡ್ ಜೋಳ ಅಥವಾ ಮೆಕ್ಕೆಜೋಳದ ಬೆಳೆಗಳು ಕೊಯ್ಲಿಗೆ ಬಂದ ನಂತರ ಬೆಳೆಗಳನ್ನು ಇಡಿಯಾಗಿ ಕಟಾವ್ ಮಾಡದೇ ಮೆಕ್ಕೆಜೋಳವಾಗಿದ್ದರೆ ತೆನೆಯನ್ನು ಹಾಗೆ ಬಿಟ್ಟು ಅದರ ಮೇಲ್ಭಾಗದ ಹಸಿರು ಭಾಗವನ್ನು ಅಥವಾ ಹೈಬ್ರಿಡ್ ಜೋಳವಾಗಿದ್ದರೆ ತೆನೆಯನ್ನು ಕೊಯ್ಲು ಮಾಡಿ ಅದರ ದಂಟುಗಳನ್ನು ಹಾಗೆ ಬಿಟ್ಟು ಹಂತಹಂತವಾಗಿ ಕತ್ತರಿಸುತ್ತಾ ಹೈನುಗಳಿಗೆ ಹಸಿರು ಮೇವು ನೀಡುತ್ತಿರುವುದು ಕಂಡು ಬರುತ್ತಿದೆ.

ಹೈನುಗಳಿಗೆ ಹಸಿರು ಮೇವು ನೀಡಿದರೆ ಹೆಚ್ಚು ಹಾಲು ಕರೆಯುತ್ತವೆ ಎಂಬುದೇ ಇದರ ಹಿಂದಿರುವ ಉದ್ದೇಶ.
ಮಳೆಗಾಲ ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಹಸಿರುಮೇವು ಸಿಗುವುದು ಕಷ್ಟ ಆ ದಿನಗಳಲ್ಲೂ ಹಸಿರು ದೊರಕುವಂತಾಗಲೆಂದೆ ಈ ವಿಧಾನ ಅನುಸರಿಲಾಗುತ್ತಿದೆ ಎಂದು ರೈತ ಪಾಂಡುರಂಗ ಪಪ್ಪು ಹೇಳುತ್ತಾರೆ.
ನಿತ್ಯ ತಮಗೆ ಎಷ್ಟು ಹಸಿಮೇವು ಅವಶ್ಯವಿರುತ್ತದೆಯೋ ಅಷ್ಟು ಹಸಿ ಮೇವನ್ನು ಕತ್ತರಿಸುತ್ತಾರೆ.

ಈ ಮೊದಲು ಹೈನುಗಳಿಗೆಂದೇ ಕುಚ್ಚಿದ ಧಾನ್ಯಗಳು ನೀಡುವುದರ ಜೊತೆಗೆ ವಿವಿಧ ದ್ವಿದಳ ಧಾನ್ಯಗಳ ರಾಶಿ ಮುಗಿದ ನಂತರ ಹೊಟ್ಟು ಮಿಶ್ರಣ ಮಾಡಿ ಬಣವಿ ಹಾಕಿ ಆಗಾಗ ಜಾನುವಾರುಗಳಿಗೆ ನೀಡುವ ಪದ್ಧತಿ ಇತ್ತು. ಆದರೆ ದ್ವಿದಳ ಧಾನ್ಯಗಳ ಮಿಶ್ರ ಬೇಸಾಯ ವಿಧಾನ ಮರೆಯಾಗಿರುವುದರಿಂದ ತರಾವರಿ ಹೊಟ್ಟು ಸಿಗದೇ ಹೈನುಗಳಿಗೆ ಕೇವಲ ಒಣ ಮೇವು ಗತಿಯಾಗಿತ್ತು.

ತೋಟ ಹೊಂದಿದವರು ಹೀಗೆ ಹಂತ-ಹಂತವಾಗಿ ರಸವತ್ತಾಗಿರುವ ಈ ಹಸಿ ಮೇವು ರಾಸುಗಳಿಗೆ ಹಾಕುತ್ತಾ ಹೋದರೆ ಸುಮಾರು ಒಂದು ತಿಂಗಳ ಕಾಲ ಹೆಚ್ಚು ಹಲು ಕರೆಯಬಹುದೆಂದು ಬಹುತೇಕ ರೈತರು ಇದೇ ವಿಧಾನ ಅನುಸರಿಸುತ್ತಿದ್ದಾರೆ ಎಂದು ದ್ಯಾಮಣ್ಣ ಮೇಟಿ ಹೇಳುತ್ತಾರೆ.

ಕೆಲ ರೈತರು ಒಂದು ಬೆಳೆ ಮುಗಿಯುವುದರೊಳಗೆ ಮತ್ತೊಂದು ಬೆಳೆಯ ಹಸಿರು ಮೇವು ಕೈಗೆ ಬರುವಂತೆ ಯೋಜನಾಕ್ರಮವಾಗಿ ಬಿತ್ತನೆ ಮಾಡಿರುವುದು ಕಂಡು ಬರುತ್ತಿದೆ. ಈ ವಿಧಾನದಿಂದ ನಿರಂತರ ಹೈನುಗಳಿಗೆ ರಸವತ್ತಾದ ಮೇವು ದೊರಕಿದರೆ ಅತ್ತ ರೈತರಿಗೆ ವರ್ಷಕ್ಕಾಗುವಷ್ಟು ಧಾನ್ಯವೂ ದೊರಕಿದಂತಾಗುತ್ತದೆ ಇತ್ತ ಹಸಿ ಮೇವು ನಿಡಿದಂತಗುತ್ತದೆ.

ತೋಟಗಾರಿಕೆ ಇಲಾಖೆ ಹೈನುಗಾರಿಕೆಗೆಂದೆ ನೇಪಿಯರ್, ಪ್ಯಾರಾ ಹುಲ್ಲು, ಗಿನಿ ಹುಲ್ಲು, ಆಫ್ರೀಕನ್ ಟಾಲ್ ಎಂಬ ವಿವಿಧ ಮೇವಿನ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಆ ಮೇವುಗಳನ್ನು ಹೈನುಗಳಿಗೆ ನೀಡಿದರೆ ಹೆಚ್ಚಿಗೆ ಹಾಲು ಕರೆಯುತ್ತವೆ. ಅಂತಹ ಮೇವಿನ ತಳಿಗಳನ್ನು ಸಾಕಷ್ಟು ರೈತರು ಅನುಸರಿಸುತ್ತಿದ್ದಾರೆ.
 
ಆದರೆ ಕೆಲ ರೈತರು ಮಾತ್ರ ತಮ್ಮ ಲೆಕ್ಕಾಚಾರ ಪ್ರಕಾರ ಆ ಮೇವುಗಳು ಕೇವಲ ಜಾನುವಾರುಗಳಿಗೆ ಮೇವು ಒದಗಿಸುತ್ತವೆ ಹೊರತು ತೆನೆ ಬಿಟ್ಟು ರೈತರಿಗೆ ಧಾನ್ಯ ನೀಡುವುದಿಲ್ಲ. ಸ್ವಲ್ಪೇ ಜಮೀನು ಹೊಂದಿರುವ ರೈತರು ಅಂತಹ ಮೇವು ಹಾಕಿಕೊಂಡರೆ ಹೊಟ್ಟೆಗೇನು ಮಾಡಬೇಕು ಎಂದು ಮಲ್ಲಯ್ಯ ಹಿರೇಮಠ ಕೇಳುತ್ತಾರೆ.

ಮೊದ ಮೊದಲು ಕೆಲವರು ಹೀಗೆ ತೆನೆ ಇಲ್ಲದ ಬೆಳೆಗಳನ್ನು ಜಮೀನಿನಲ್ಲಿ ಹಾಗೆ ಬಿಟ್ಟರೆ ಮುಂದಿನ ಬೆಳೆಗಳನ್ನು ಬಿತ್ತಲು ಅವಧಿ ಮುಗಿದು ಹೋಗಿರುತ್ತದೆ ಎಂದು ಮೂಗು ಮುರಿದಿದ್ದರು. ಆದರೆ ಇದರ ಲಾಭ ಗಮನಿಸಿದ ರೈತರು ಈ ವಿಧಾನಕ್ಕೆ ಅಂಟಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.