ಕುಷ್ಟಗಿ: ಗ್ರಾಮಗಳಲ್ಲಿ ಸಾರ್ವಜನಿಕರ ಆಸ್ತಿಗಳಿಗೆ ಸಂಬಂಧಿಸಿದಂತೆ ಇ–ಸ್ವತ್ತು ಯೋಜನೆಯಲ್ಲಿ ಆನ್‌ಲೈನ್ ದಾಖಲೆ ದೊರಕಿಸಿಕೊಡುವ ಸಂಬಂಧ ಎರಡು ದಿನಗಳಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಂತೆ ಶಾಸಕ ದೊಡ್ಡನಗೌಡ ಪಾಟೀಲ ಮಂಗಳವಾರ ಇಲ್ಲಿ ತಹಶೀಲ್ದಾರ್‌ಗೆ ತಾಕೀತು ಮಾಡಿದರು.
ಬ್ಯಾಂಕ್ ಮತ್ತಿತರೆ ಕೆಲಸಗಳಿಗೆ ಅಗತ್ಯವಾದ ಆಸ್ತಿ ವಿವರಗಳನ್ನು ಆನ್‌ಲೈನ್ ದಾಖಲೆಗಳನ್ನು ಕೇಳಲಾಗುತ್ತದೆ. ಆದರೆ ಇ–ಸ್ವತ್ತು ವೆಬ್‌ಸೈಟ್ ಕಾಲಂನಲ್ಲಿ ತಹಶೀಲ್ದಾರರ ದೃಢೀಕರಣ ಭರ್ತಿ ಮಾಡದಿದ್ದರೆ ಅರ್ಜಿ ತಿರಸ್ಕೃತಗೊಳ್ಳುತ್ತದೆ. ಹೀಗಾಗಿ ಜನರು, ರೈತರು ತೀವ್ರ ತೊಂದರೆಗೆ ಸಿಲುಕಿದ್ದಾರೆ ಎಂದು ತಾ.ಪಂ ಅಧ್ಯಕ್ಷ ಸಿದ್ದಪ್ಪ ಆವಿನ ಸಮಸ್ಯೆ ವಿವರಿಸಿದರು. ಅದಕ್ಕೆ ಉತ್ತರಿಸಿದ ತಹಶೀಲ್ದಾರ್ ಎನ್.ಬಿ.ಪಾಟೀಲ, ಈ ಬಗ್ಗೆ ಜಿಲ್ಲಾಡಳಿತದಿಂದ ಸ್ಪಷ್ಟ ಮಾರ್ಗದರ್ಶಿ ಬಾರದ ಕಾರಣ ಆಸ್ತಿ ದೃಢೀಕರಣ ನೀಡುತ್ತಿಲ್ಲ ಎಂದರು.
ಆದರೆ, ರಾಮನಗರ ಜಿಲ್ಲೆಯಲ್ಲಿ ತಹಶೀಲ್ದಾರರೇ ದೃಢೀಕರಣ ನೀಡುತ್ತಿದ್ದಾರೆ. ಅಲ್ಲಿಯ ವ್ಯವಸ್ಥೆ ಇಲ್ಲೇಕಿಲ್ಲ ಎಂದು ಸಿದ್ದಪ್ಪ ಆಕ್ಷೇಪಿಸಿದರು.
ಜಿಲ್ಲೆಗೆ ಒಂದರಂತೆ ಕಾನೂನು ಇರುವುದಿಲ್ಲ, ಯಾವುದೇ ಹೊಸ ಯೋಜನೆ ಜಾರಿಯಾದರೆ ಅದರಿಂದ ಜನರಿಗೆ ಅನುಕೂಲವಾಗಬೇಕು. ಇನ್ನಷ್ಟು ತೊಂದರೆಯಾದರೆ ಅರ್ಥ ಇರುವುದಿಲ್ಲ ಎಂದ ಶಾಸಕ ಪಾಟೀಲ, ಎರಡು ದಿನದಲ್ಲಿ ಸ್ಪಷ್ಟ ನಿರ್ಧಾರ ತಳೆಯಲು ಸೂಚಿಸಿದರು.
ಮನೆ ನಿರ್ಮಿಸಿಕೊಳ್ಳುವುದಕ್ಕೆ, ರೈತರು ಸ್ವಂತ ಕೆಲಸಕ್ಕ ಮರಳು ತೆಗೆದು ಸಾಗಿಸಿದರೆ ಅದಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಅದರಂತೆ ನೀವು ನಡೆದಕೊಳ್ಳಬೇಕು. ಬಡವರಿಗೆ ಸಾವಿರಾರು ರೂಪಾಯಿ ದಂಡ ಹಾಕಿದರೆ ಹೇಗೆ ಎಂದು ಶಾಸಕ ತಹಶೀಲ್ದಾರರನ್ನು ಪ್ರಶ್ನಿಸಿದರು.
ಅರ್ಜಿದಾರರಲ್ಲಿ ಒಬ್ಬರು ನಿಧನರಾದರೆ ಭೂ ಮಾಪನ ಕೆಲಸ ನಡೆಸುವುದಿಲ್ಲ, ಮತ್ತು ಶುಲ್ಕವನ್ನೂ ಮರಳಿಸುವುದಿಲ್ಲ. ಗ್ರಾಮಠಾಣಾಗಳ ಸರ್ವೆ ನಡೆಸದ ಕಾರಣ ಅಕ್ಕಪಕ್ಕದ ಹೊಲದ-ವರು ಒತ್ತುವರಿ ಮಾಡುತ್ತಿದ್ದಾರೆ. ಸಾಕಷ್ಟು ಅರ್ಜಿಗಳು ಇತ್ಯರ್ಥವಾಗಿಲ್ಲ ಎಂಬುದಕ್ಕೆ ಭೂಮಾಪನ ಸಿಬ್ಬಂದಿ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಯಿತು.
ನಿವೇಶನ ಕೊರತೆಯಿಂದ ಹಿರೇಗೊಣ್ಣಾಗರ, ಹಿರೇಮನ್ನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ವಸತಿ ಗೃಹ ನಿರ್ಮಾಣಗೊಂಡಿಲ್ಲ. ಜುಮಲಾಪುರ. ಹಿರೇಬನ್ನಿಗೋಳ ಮತ್ತತರೆ ಗ್ರಾಮದಲ್ಲಿ ಎಎನ್‌ಎಂ ವಸತಿಗೃಹ ನಿರ್ಮಾಣಗೊಂಡಿಲ್ಲ. ಹಾಗೇ ಬಿಟ್ಟರೆ ಅನುದಾನ ಬೇರೆ ಜಿಲ್ಲೆಗೆ ಹೋಗುತ್ತದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಆನಂದ ಗೋಟೂರು ಹೇಳಿದರು.
ಪರಿವರ್ತಕಗಳ ಬ್ಯಾಂಕ್ ಸ್ಥಾಪನೆಯಾಗದ ಕಾರಣ ಸುಟ್ಟ ಟಿ.ಸಿ ಬದಲಾಯಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಜೆಸ್ಕಾಂ ಸಹಾಯಕ ಎಂಜಿನಿಯರ್ ಪ್ರಕಾಶ್ ತಿಳಿಸಿದರು.
ಅಲ್ಲದೇ, ರೈತರ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿಯೇ 7 ತಾಸು 3 ಫೇಸ್ ವಿದ್ಯುತ್ ಪೂರೈಸುತ್ತರುವುದಾಗಿ ತಿಳಿಸಿದರು. ಆದರೆ, ಗಂಗಾಕಲ್ಯಾಣ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ವಿಳಂಬವಾಗುತ್ತಿದೆ, ಹಿಂದಿನ ಅವಧಿಯಲ್ಲಿ ಶಾಸಕನಾಗಿದ್ದಾಗ ನೀಡಿದ ಪ್ರಸ್ತಾವನೆಗಳು ಇನ್ನೂ ಬಾಕಿ ಇವೆ ಎಂದು ಶಾಸಕ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿರುವ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಹದಗೆಟ್ಟಿರುವ ವ್ಯವಸ್ಥೆ ಸರಿಪಡಿಸುವಂತೆ ಜಿ.ಪಂ. ಸದಸ್ಯ ವಿನಯಕುಮಾರ ಮೇಲಿನಮನಿ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದರು.
ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಶಾಸಕ ಪಾಟೀಲ, ಪಂಯತ್ ರಾಜ್ ಎಂಜಿನಿಯರಿಂಗ್ ಮತ್ತು ಜೆಸ್ಕಾಂ ಮತ್ತು ತಾ.ಪಂ ಅಧಿಕಾರಿಗಳಿಗೆ ಹೇಳಿದರು. ಉಪಾಧ್ಯಕ್ಷೆ ನಿಂಗಪ್ಪ ಮಾಲಿಪಾಟೀಲ. ಕಾರ್ಯನಿರ್ವಾಹಣಾಧಿಕಾರಿ ಎಂ.ವಿ.ಬದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.