ADVERTISEMENT

ಬೀದಿನಾಯಿಗಳಿಗೆ ಸಂಕ್ರಮಣ ಭೋಜನ!

ವಲಸೆ ಕುಟುಂಬಗಳವಿಶಿಷ್ಟ ಪದ್ಧತಿ, ಭೋಗಿ ದಿನ ನಾಯಿಗಳೇ ಅತಿಥಿಗಳು

​ಪ್ರಜಾವಾಣಿ ವಾರ್ತೆ
Published 14 ಜನವರಿ 2019, 15:05 IST
Last Updated 14 ಜನವರಿ 2019, 15:05 IST
ಕಾರಟಗಿ ಸಮೀಪದ ಸೋಮನಾಳಕ್ಯಾಂಪ್‌ನಲ್ಲಿ ಸಂಕ್ರಾಂತಿ ಭೋಗಿ ಹಬ್ಬವಾದ ಸೋಮವಾರ ತೆಲಂಗಾಣ ಮೂಲದ ಕುಟುಂಬವೊಂದು ಬೀದಿನಾಯಿಗಳಿಗೆ ಭೋಜನ ಬಡಿಸುತ್ತಿರುವುದು
ಕಾರಟಗಿ ಸಮೀಪದ ಸೋಮನಾಳಕ್ಯಾಂಪ್‌ನಲ್ಲಿ ಸಂಕ್ರಾಂತಿ ಭೋಗಿ ಹಬ್ಬವಾದ ಸೋಮವಾರ ತೆಲಂಗಾಣ ಮೂಲದ ಕುಟುಂಬವೊಂದು ಬೀದಿನಾಯಿಗಳಿಗೆ ಭೋಜನ ಬಡಿಸುತ್ತಿರುವುದು   

ಕಾರಟಗಿ (ಕೊಪ್ಪಳ ಜಿಲ್ಲೆ): ಸಂಕ್ರಾಂತಿ ದಿನ ಎಣ್ಣೆಮಜ್ಜನ ಮಾಡಿ ಎಳ್ಳು–ಬೆಲ್ಲ ಬೀರುವುದು ಸಂಪ್ರದಾಯ. ಆದರೆ, ಇಲ್ಲಿ ಕೆಲವು ಕುಟುಂಬಗಳಿವೆ. ಸಂಕ್ರಾಂತಿ ದಿನ ಬೀದಿನಾಯಿಗಳಿಗೆ ಬಾಳೆಲೆಯಲ್ಲಿ ಭರ್ಜರಿ ಭೋಜನ ಮಾಡಿಸುತ್ತವೆ! ಸಂಕ್ರಾಂತಿಗೆ ನಾಯಿಗಳೇ ಇವರ ವಿಶೇಷ ಅತಿಥಿಗಳು!

ತಾಲ್ಲೂಕಿನ ಸೋಮನಾಳಕ್ಯಾಂಪ್‌ನಲ್ಲಿ ಸುಮಾರು 30ಕ್ಕೂ ಹೆಚ್ಚು ವಲಸೆ ಕುಟುಂಬಗಳು ಇವೆ. ಇವರೆಲ್ಲ ಐದು ದಶಕಗಳಿಂದಲೂ ಇಲ್ಲೇ ವಾಸವಾಗಿದ್ದಾರೆ. ‌ಆಂಧ್ರ ಹಾಗೂ ತೆಲಂಗಾಣ ಮೂಲದವರಾದ ಈ ಜನ; ಸಂಕ್ರಾಂತಿಗೆ ತಮ್ಮ ಪರಂಪರೆ ಮುಂದುವರಿಸಿದ್ದಾರೆ.

ಈ ಬಾರಿ ಕೂಡ ಸೋಮವಾರ ಭೋಗಿ ದಿನ. ಕುಟುಂಬದ ಸದಸ್ಯರೆಲ್ಲ ಎಣ್ಣೆ ಸ್ನಾನ ಮಾಡಿ, ಮನೆ ಸ್ವಚ್ಛಗೊಳಿಸಿ ವಿವಿಧ ಸಿಹಿ ತಿನಿಸು, ಅನ್ನ–ಸಾರು, ಹಪ್ಪಳ, ಸಂಡಿಗೆ ಮುಂತಾದ ಖಾದ್ಯಗಳನ್ನು ಮಾಡಿದರು. ಈ ಭಾಗದಲ್ಲಿ ಇದಕ್ಕೆ ’ಸುಗ್ರಾಸ ಭೋಜನ‘ ಎನ್ನುತ್ತಾರೆ.

ADVERTISEMENT

ಇದೆಲ್ಲವನ್ನೂ ಯಾವ ಅತಿಥಿ ಮಹೋದಯರಿಗೂ ಮಾಡಿದ್ದಲ್ಲ. ಬೀದಿ ನಾಯಿಗಳಿಗೆ ತಿನ್ನಿಸಲು ಮಾಡಿದ್ದು. ಕುಟುಂಬದ ಸದಸ್ಯರೆಲ್ಲ ಬೀದಿಬೀದಿ ಅಲೆದು ನಾಯಿಗಳನ್ನು ಹುಡುಕಿ ಅವುಗಳ ಮುಂದೆ ಬಾಳೆ ಎಲೆ ಇಟ್ಟು, ಅದರಲ್ಲಿ ತಾವು ತಂದ ತಹರೇವಾರು ಅಡುಗೆ ಬಡಿಸಿದರು. ನಾಯಿಗಳು ಅದನ್ನು ತಿನ್ನುತ್ತಿದ್ದರೆ ಇವರಿಗೆ ಖುಷಿಯೋ ಖುಷಿ.

’ತೆಲಂಗಾಣದ ಗೋದಾವರಿ ನದಿ ತೀರದ ಗ್ರಾಮಗಳಲ್ಲಿ ಇಂಥ ಸಂಪ್ರದಾಯ ಇನ್ನೂ ಜೀವಂತ ಇದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಭಾಗದಲ್ಲಿ ನೆಲೆ ನಿಂತಿರುವ ನಾವು ನಮ್ಮ ಹಿರಿಯರ ಪದ್ಧತಿ ಬಿಟ್ಟಿಲ್ಲ‘ ಎನ್ನುತ್ತಾರೆ ಪೆದ್ದವೀರರಾಜು.

’ಮನೆಯಲ್ಲಿಯೇ ಮಡಿಕೆಯಲ್ಲಿ ಅಕ್ಕಿ, ತುಪ್ಪ, ಹೆಸರುಬೇಳೆ, ಬೆಲ್ಲ, ತರಾವರಿ ತರಕಾರಿಗಳಿಂದ ಸಂಕ್ರಮಣ ಭೋಜನ ಸಿದ್ಧಪಡಿಸುತ್ತೇವೆ. ಭೋಗಿ ದಿನ ಸೂರ್ಯೋದಯ ಆಗುತ್ತಿದ್ದಂತೆಯೇ ಅಡುಗೆಯನ್ನು ಹೆಗಲ ಮೇಲೆ ಹೊತ್ತು ನಾಯಿಗಳನ್ನು ಹುಡುಕಿಕೊಂಡು ಹೋಗುತ್ತೇವೆ‘ ಎನ್ನುತ್ತಾರೆ ಅವರು.

ಅಗ್ನಿಕುಂಡವೂ ವಿಶೇಷ: ಸಾಂಕ್ರಾಮಿಕ ರೋಗ ಬಾರದಂತೆ ಮಾಡುವ ಅಗ್ನಿಕುಂಡ ಈ ಕುಟುಂಬಗಳ ಇನ್ನೊಂದು ವಿಶೇಷ ಆಚರಣೆ.

ಮನೆಯ ಅಂಗಳವನ್ನು ಸಗಣಿಯಿಂದ ಸಾರಿಸಿ, ರಂಗೋಲಿ ಹಾಕಿ, ತಳಿರು– ತೋರಣಗಳಿಂದ ಸಿಂಗರಿಸುತ್ತಾರೆ. ಹಬ್ಬಕ್ಕಾಗಿ ವಾರದಿಂದ ಸಂಗ್ರಹಿಸಿದ ಕಟ್ಟಿಗೆ, ಹಸುವಿನ ಸಗಣಿಯ ಕುಳ್ಳುಗಳನ್ನು ಒಂದೆಡೆ ಗುಡ್ಡೆ ಹಾಕಿ ಅಗ್ನಿಕುಂಡ ನಿರ್ಮಿಸುತ್ತಾರೆ.

ಜೀವನದಲ್ಲಿ ಕಷ್ಟಗಳು ಹಾಗೂ ಸಾಂಕ್ರಾಮಿಕ ರೋಗಗಳು ಬಾರದಿರಲಿ ಎಂದು ಪ‍್ರಾರ್ಥಿಸಿ ಮಕ್ಕಳ ಕೊರಳಿಗೆ ಈ ಕುಳ್ಳುಗಳ ಮಾಲೆ ಹಾಕುತ್ತಾರೆ. ಮಕ್ಕಳು ಅಗ್ನಿಕುಂಡ ಸುತ್ತಿ, ನಮಸ್ಕರಿಸಿ ಹಾರವನ್ನು ಅದಕ್ಕೆ ಹಾಕವುದು ವಾಡಿಕೆ. ಇದರಿಂದ ಹಿಂದಿನ ಪಾಪಕರ್ಮಗಳೂ ನಾಶವಾಗುತ್ತವೆ ಎಂಬುದು ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.