ADVERTISEMENT

12ರಂದು ಶ್ರೀಯಲ್ಲಮ್ಮ ದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 6:40 IST
Last Updated 11 ಫೆಬ್ರುವರಿ 2012, 6:40 IST

ಮಾನ್ವಿ: ತಾಲ್ಲೂಕಿನ ನೀರಮಾನ್ವಿ ಗ್ರಾಮದ ಸುಪ್ರಸಿದ್ಧ ಶ್ರೀಯಲಮ್ಮ ದೇವಿಯ ಜಾತ್ರೆ ಹಾಗೂ ರಥೋತ್ಸವ ಫೆ.12 ಭಾನುವಾರದಂದು ಜರುಗಲಿದ್ದು ಜಿಲ್ಲಾಡಳಿತದ ಸಹಯೋಗದಲ್ಲಿ ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
 
ಪ್ರತಿ ವರ್ಷ ಭರತ ಹುಣ್ಣಿಮೆ ಪಂಚಮಿ ದಿನದಂದು ರಥೋತ್ಸವ ನೆರವೇರುವ   ಶ್ರೀಯಲ್ಲಮ್ಮ ದೇವಿಯ ಜಾತ್ರೆಗೆ ರಾಜ್ಯ ಸೇರಿದಂತೆ ಹೊರರಾಜ್ಯದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಎಲ್ಲಾ ಜಾತಿ ಜನಾಂಗಗಳಿಗೆ ಸೇರಿದ ಜನ ಭೇದ-ಭಾವ ಇಲ್ಲದೆ ಭಾಗವಹಿಸುವ ಈ ಜಾತ್ರೆ ಭಾವೈಕ್ಯದ ಪ್ರತೀಕವಾಗಿದೆ.
 
ಭಕ್ತರ ಕಷ್ಟಗಳಿಗೆ ಪರಿಹಾರ ಒದಗಿಸುವ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ನೀರಮಾನ್ವಿ ಶ್ರೀಯಲ್ಲಮ್ಮ ದೇವಿ ಜಾತ್ರೆಯಲ್ಲಿ ಭಾಗವಹಿಸಿ ಭಕ್ತರು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಈ ಭಾನುವಾರದಂದು ಬೆಳಿಗ್ಗೆ 10ಗಂಟೆಗೆ ಸಕಲ ವೈಭವದೊಡನೆ ನೀರಮಾನ್ವಿ ಗ್ರಾಮದಿಂದ ಕಳಸವನ್ನು ಶ್ರೀದೇವಿ ಗುಡಿಗೆ ತರಲಾಗವುದು. ಸಂಜೆ 5.30ಗಂಟೆಗೆ ರಥೋತ್ಸವ ಜರುಗುವುದು ಎಂದು ದೇವಸ್ಥಾನದ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಿದ್ಧತೆ: ನೀರಮಾನ್ವಿಯ ಶ್ರೀಯಲ್ಲಮ್ಮ ದೇವಿ ಜಾತ್ರೆಯ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನ ಸಮಿತಿಯ ಅಧ್ಯಕ್ಷ ಹಾಗೂ ತಹಸೀಲ್ದಾರ್ ಎಮ್.ಗಂಗಪ್ಪ ಕಲ್ಲೂರು, ಜಾತ್ರೆಯ ಆಚರಣೆಗೆ ಸಕಲ ಕ್ರಮ ಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
 
ಜಾತ್ರೆಗೆ ಆಗಮಿಸುವ ಯಾತ್ರಿಕರಿಗೆ ರಾಯಚೂರು, ಕೊಪ್ಪಳ, ಬಳ್ಳಾರಿ, ಕೊಪ್ಪಳ, ಗಂಗಾವತಿ, ಕುಷ್ಟಗಿ, ಸಿಂಧನೂರು, ಸಿರವಾರ, ಲಿಂಗಸುಗೂರುಗಳಿಂದ ವಿಶೇಷ ಸಾರಿಗೆ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ದೇವಸ್ಥಾನದ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಫೆ.12ರಿಂದ 14ರವರೆಗೆ ಮದ್ಯಮಾರಾಟ ನಿಷೇಧಿಸಲಾಗಿದೆ. ದೇವದಾಸಿಯಂತಹ ಅನಿಷ್ಟ ಪದ್ಧತಿಯನ್ನು ತಡೆಗಟ್ಟಲು ಸಮಾಜ ಕಲ್ಯಾಣಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ತಿಳಿಸಿದರು.
 
ಜಾತ್ರೆ ಸಂದರ್ಭದಲ್ಲಿ ಸಗಟು ತೆಂಗಿನ ಕಾಯಿ ವ್ಯಾಪಾರಸ್ಥರಿಗೆ ಒಂದು ಕಾಯಿಗೆ ರೂ.11.50 ಹಾಗೂ ಚಿಲ್ಲರೆ ತೆಂಗಿನ ಕಾಯಿ ಮಾರಾಟ ಮಾಡಲು 12.00ರೂ. ನಿಗದಿಗೊಳಿಸಲಾಗಿದೆ. ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಮಾರಾಟದ ಅನುಮತಿ ರದ್ದುಪಡಿಸಲಾಗುವುದು. ಈ ಕುರಿತು ಭಕ್ತರಿಗೆ ವಂಚನೆ ತಡೆಗಟ್ಟಲು ಕಂದಾಯ ಅಧಿಕಾರಿಗಳ ತಂಡ ರಚಿಸಿ ನಿಗಾವಹಿಸಲು ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಗಂಗಪ್ಪ ಹೇಳಿದರು.
 
ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಧರ ದೊಡ್ಡಿ  ಮಾತನಾಡಿ, ಜಾತ್ರೆಯಲ್ಲಿ ಅಗತ್ಯ ಕಾನೂನು ಹಾಗೂ ಸುರಕ್ಷತೆಗಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು. ಜಿಲ್ಲೆಯ ಮಾನ್ವಿ, ಸಿಂಧನೂರು, ಲಿಂಗಸುಗೂರು ಹಾಗೂ ರಾಯಚೂರು ವಲಯಗಳಿಂದ ಪೊಲೀಸರು ಹಾಗೂ ಅಧಿಕಾರಿಗಳು ಭದ್ರತೆಗಾಗಿ ಆಗಮಿಸುವರು. 80ಜನರ ಗೃಹರಕ್ಷಕ ದಳದ  ತಂಡ ಭದ್ರತಾ ಕಾರ್ಯನಿರ್ವಹಿಸುವರು ಎಂದು ತಿಳಿಸಿದರು.
 
ವಾಹನಗಳ ಪಾರ್ಕಿಂಗ್ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ರೀಧರ ದೊಡ್ಡಿ ಹೇಳಿದರು. ಜಾತ್ರೆ ಸಂದರ್ಭದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜನತೆ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಎಮ್. ಗಂಗಪ್ಪ ಕಲ್ಲೂರು ಹಾಗೂ ಸಿಪಿಐ ಶ್ರೀಧರ ದೊಡ್ಡಿ ಕೋರಿದರು.
 
ಶ್ರೀಯಲ್ಲಮ್ಮ ದೇವಿ ದೇವಸ್ಥಾನದ ಶಿರಸ್ತೇದಾರ ಸೈಯದ್ ಮೀರ್ ಅಹ್ಮದ್, ಶಿರಸ್ತೇದಾರ ಹನುಮಂತಪ್ಪ, ನರಸಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.