ADVERTISEMENT

13 ನಾಮಪತ್ರ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 11:17 IST
Last Updated 19 ಏಪ್ರಿಲ್ 2013, 11:17 IST

ಕೊಪ್ಪಳ: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಚುನಾವಣೆಗಾಗಿ ಏ. 17ರ ವರೆಗೆ ಒಟ್ಟು 82 ಜನ ಅಭ್ಯರ್ಥಿಗಳು 152 ನಾಮಪತ್ರಗಳನ್ನು ಸಲ್ಲಿಸಿದ್ದು, ಈ ಪೈಕಿ ಗುರುವಾರ ನಡೆದ ಪರಿಶೀಲನೆ ವೇಳೆ 13 ನಾಮಪತ್ರಗಳು ತಿರಸ್ಕೃತಗೊಂಡಿವೆ. ಹೀಗಾಗಿ 53 ಜನ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾದಂತಾಗಿದೆ.

ಈ ಪೈಕಿ ಯಲಬುರ್ಗಾ ಕ್ಷೇತ್ರದಲ್ಲಿ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸಲ್ಲಿಸಿರುವ ನಾಲ್ಕು ನಾಮಪತ್ರಗಳಿಗೆ ಸಂಬಂಧಪಟ್ಟಂತೆ ಆಕ್ಷೇಪಣೆ ಸಲ್ಲಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಏ. 19ರಂದು ಈ ಆಕ್ಷೇಪಣೆ ಕುರಿತು ಪರಿಶೀಲನೆಯನ್ನು ನಡೆಯಲಿದ್ದು, ನಂತರವಷ್ಟೇ ಈ ಇಬ್ಬರು ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿರುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಮೂಲಗಳು ತಿಳಿಸಿವೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳು 29 ನಾಮಪತ್ರಗಳನ್ನು ಸಲ್ಲಿಸಿದ್ದರು. ಈ ಪೈಕಿ ಇಬ್ಬರು ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಮೂರು ನಾಮಪತ್ರಗಳು ತಿರಸ್ಕೃತಗೊಂಡಿದ್ದು, 16 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.
ಕನಕಗಿರಿ ಕ್ಷೇತ್ರದಲ್ಲಿ 19 ಅಭ್ಯರ್ಥಿಗಳಿಂದ 42 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 4 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 18 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ಗಂಗಾವತಿ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ 31 ನಾಮಪತ್ರಗಳಲ್ಲಿ 6 ತಿರಸ್ಕೃತಗೊಂಡಿವೆ. ಹೀಗಾಗಿ 16 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಕೊಪ್ಪಳ ಕ್ಷೇತ್ರದಲ್ಲಿ 13 ಜನ ಅಭ್ಯರ್ಥಿಗಳು 21 ನಾಮಪತ್ರಗಳನ್ನು ಸಲ್ಲಿಸಿದ್ದರು. ಆದರೆ, ಯಾವುದೇ ನಾಮಪತ್ರ ತಿರಸ್ಕೃತಗೊಂಡಿಲ್ಲ ಎಂದು ಇದೇ ಕಚೇರಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.