ADVERTISEMENT

150ಕ್ಕೂ ಅಧಿಕ ಕ್ಯಾಮೆರಾ ಬಳಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 9:45 IST
Last Updated 21 ಸೆಪ್ಟೆಂಬರ್ 2011, 9:45 IST

ಕೊಪ್ಪಳ: ಉಪಚುನಾವಣೆಯಲ್ಲಿ ಮತದಾನ ನಡೆಯುವ ಸಂದರ್ಭದಲ್ಲಿ ಸಮಗ್ರವಾಗಿ ಚಿತ್ರೀಕರಣ ನಡೆಸಲು ಇದೇ ಮೊದಲ ಬಾರಿಗೆ 150ಕ್ಕೂ ಅಧಿಕ ಸಂಖ್ಯೆಯಲ್ಲಿ ವಿಡಿಯೋ ಕ್ಯಾಮೆರಾಗಳನ್ನು ಬಳಸಲು ಚುನಾವಣಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳ ಪೈಕಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಎಂದು ಗುರುತಿಸಲಾಗಿರುವ ಮತಗಟ್ಟೆಗಳಲ್ಲಿ ಸಮಗ್ರವಾಗಿ ಚಿತ್ರೀಕರಣ ಮಾಡುವುದು. ಆ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವುದು ಹಾಗೂ ಸಂಭವಿಸುವ ಅಹಿತಕರ ಘಟನೆಗಳನ್ನು ಬಗ್ಗೆ ಸಾಕ್ಷಿಗಳನ್ನು ಸಂಗ್ರಹಿಸುವ ಉದ್ಧೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕ್ಷೇತ್ರದಲ್ಲಿ ಒಟ್ಟು 210 ಮತಗಟ್ಟೆಗಳಿವೆ. ಈ ಪೈಕಿ 94 ಅತಿ ಸೂಕ್ಷ್ಮ ಹಾಗೂ 65 ಸೂಕ್ಷ್ಮ ಮತಗಟ್ಟೆಗಳಿವೆ. ಈ 159 ಮತಗಟ್ಟೆಗಳಲ್ಲಿ ನಡೆಯುವ ಮತದಾನದ ಮೇಲೆ ನಿಗಾ ಇಡುವ ದೃಷ್ಟಿಯಿಂದ ಬಾಡಿಗೆ ಆಧಾರದ ಮೇಲೆ ಕ್ಯಾಮರಾಗಳ ಸೇವೆ ಪಡೆಯಲು ಉದ್ಧೇಶಿಸಲಾಗಿದೆ ಎಂದು ತಿಳಿದು ಬಂದಿದೆ.

ಜಿಲ್ಲೆಯಲ್ಲಿ ಲಭ್ಯವಿರುವ ಕ್ಯಾಮರಾಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ತಯಾರಿಯೂ ನಡೆದಿದೆ. ಆದರೆ, ಅಗತ್ಯವಿರುವ ಸಂಖ್ಯೆಯಷ್ಟ ಕ್ಯಾಮರಾಗಳು ಜಿಲ್ಲೆಯಲ್ಲಿ ಸಿಗುತ್ತಿಲ್ಲ. ಹೀಗಾಗಿ ನೆರೆಯ ಬಳ್ಳಾರಿ ಜಿಲ್ಲೆಯಲ್ಲಿ ಸಹ ಕ್ಯಾಮರಾಗಳ ಹುಡುಕಾಟದಲ್ಲಿ ಚುನಾವಣೆ ಕರ್ತವ್ಯ ನಿರತ ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.