ADVERTISEMENT

ಗಂಗಾವತಿ: ಬಂದ್ ಸಂಪೂರ್ಣ ಯಶಸ್ವಿ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 9:27 IST
Last Updated 13 ಜನವರಿ 2018, 9:27 IST
ಬಂದ್‌ ಆಚರಣೆ ಹಿನ್ನೆಲೆಯಲ್ಲಿ ಗಂಗಾವತಿ ಕೇಂದ್ರ ಬಸ್‌ ನಿಲ್ದಾಣದ ಆವರಣವು ಶುಕ್ರವಾರ ಬಣಗುಡುತಿತ್ತು.
ಬಂದ್‌ ಆಚರಣೆ ಹಿನ್ನೆಲೆಯಲ್ಲಿ ಗಂಗಾವತಿ ಕೇಂದ್ರ ಬಸ್‌ ನಿಲ್ದಾಣದ ಆವರಣವು ಶುಕ್ರವಾರ ಬಣಗುಡುತಿತ್ತು.   

ಗಂಗಾವತಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರಗತಿಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಗಂಗಾವತಿ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬೆಳಗ್ಗೆಯಿಂದ ಸಂಜೆವರೆಗೂ ನಗರದ ಬಹುತೇಕ ಅಂಗಡಿಗಳು ಮುಚ್ಚಿದ್ದವು.

ಹೋಟೆಲ್, ಉಪಾಹಾರ ಮಂದಿರ ಮುಂತಾದವು ಮುಚ್ಚಿದ್ದರಿಂದ ಸಾರ್ವಜನಿಕರು ಪರದಾಡಿದರು. ಕಾರ್ಯನಿಮಿತ್ತ ಪಟ್ಟಣಕ್ಕೆ ಬಂದಿದ್ದ ಗ್ರಾಮೀಣ ಪ್ರದೇಶದ ಜನರು ಉಪಾಹಾರ, ಉಪಾಹಾರ ಸಿಗದೇ ತೊಂದರೆ ಅನುಭವಿಸಿದರು.

ಶಾಲಾಕಾಲೇಜು, ಕೋರ್ಟ್‌, ಆಸ್ಪತ್ರೆ, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ವಾಹನಗಳ ಸಂಚಾರ ವಿರಳವಾಗಿದ್ದರಿಂದ ರೋಗಿಗಳಿಗೆ ಆಸ್ಪತ್ರೆಗೆ ಹೋಗಲು ಸಾಧ್ಯವಾಗಲಿಲ್ಲ. ಬಸ್‌ ಸಂಚಾರವೂ ಇರದ ಕಾರಣ ಸಾರ್ವಜನಿಕರು ನಡೆದುಕೊಂಡೇ ಹೋಗಬೇಕಾಯಿತು.

ADVERTISEMENT

ಸದಾ ಜನರಿಂದ ತುಂಬಿರುತ್ತಿದ್ದ ಕೇಂದ್ರ ಬಸ್ ನಿಲ್ದಾಣವು ಜನರಿಲ್ಲದೇ ಬಣಗುಡುತಿತ್ತು. ಬಸ್‌ಗಳ ಸಂಚಾರವಿಲ್ಲದೇ ನಿಲ್ದಾಣದ ಆವರಣವು ಖಾಲಿಯಿದ್ದ ಕಾರಣ ಶಾಲಾಮಕ್ಕಳು ಕ್ರಿಕೆಟ್‌ ಆಟವಾಡಿದರು. ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಮಹಾತ್ಮಗಾಂಧಿ ವೃತ್ತ, ಮಹಾವೀರ, ಓಎಸ್ಬಿ ರಸ್ತೆ, ಜುಲಾಯಿನಗರ, ಸಿಬಿಎಸ್ ವೃತ್ತಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರಿಂದ ಜನರ ಓಡಾಟ ವಿರಳವಾಗಿತ್ತು.

ಲಿಂಗಸಗೂರು ಭಾಗದ ವಾಹನಗಳಿಗೆ ಕೃಷಿ ವಿಜ್ಞಾನ ಕೇಂದ್ರ, ಕೊಪ್ಪಳದ ವಾಹನಗಳಿಗೆ ವಡ್ಡರಹಟ್ಟಿ, ಹುಲಿಗಿ ವಾಹನಗಳಿಗೆ ಆನೆಗೊಂದಿ ರಾಯಚೂರು ಮಾರ್ಗದ ವಾಹನಗಳಿಗೆ ವಿದ್ಯಾನಗರ ಹಾಗೂ ಬಳ್ಳಾರಿಯ ವಾಹನಗಳಿಗೆ ಕಂಪ್ಲಿ ಮೂಲಕ ಪರ್ಯಾಯ ಮಾರ್ಗದ ಮೂಲಕ ತೆರಳಲು ವ್ಯವಸ್ಥೆ ಮಾಡಲಾಗಿತ್ತು.

ಪೊಲೀಸ್, ಸಂಘಟಕರ ಮಧ್ಯೆ ಚಕಮಕಿ: ನಗರದ ಕೆಲೆವೆಡೆ ಅಂಗಡಿಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುಸುವುದು ಸರಿಯಲ್ಲ ಎಂದು ಕನ್ನಡಪರ ಸಂಘಟನೆಯ ಸೈಯದ್ ಜಿಲಾನಿ ಪಾಷಾ ಅವರನ್ನು ನಗರಠಾಣೆಯ ಪಿಐ ರಾಜಕುಮಾರ ವಾಜಂತ್ರಿ ತರಾಟೆ ತೆಗೆದುಕೊಂಡರು.  ಇದರಿಂದ ವಿಚಲಿತರಾದ ಕೆಲ ಮುಖಂಡರು ಪಾಷಾ ಬೆಂಬಲಕ್ಕೆ ನಿಂತರು.

‘ನೀವು ಸ್ವಯಂ ಪ್ರೇರಿತ ಬಂದ್ ಕರೆ ನೀಡಿದ್ದೀರಿ. ಆದರೆ ಪಾಷಾ ಮತ್ತೆ ಕೆಲವರು ಒತ್ತಾಯ ಪೂರ್ವಕ ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವುದು ನೋಡಿದ್ದೇನೆ. ಸಂಘಟನೆಯವರು ಈ ರೀತಿ ಮಾಡುವುದು ಸರಿಯಲ್ಲ.

ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ರಾಜಕುಮಾರ ವಾದಿಸಿದರು. ಇದರಿಂದ ಕೆಲ ಹೊತ್ತು ಸಂಘಟನೆಯವರು ಮತ್ತು ಪೊಲೀಸರ ನಡುವೆ ಮಾತಿನ ಚಕಿಮಕಿ ನಡೆಯಿತು. ಇದರಿಂದ ಕೆಲ ಹೊತ್ತು ಆತಂಕ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸರ್ಕಾರದ ನೀತಿಗಳಿಂದ ಕೋಮು ಸೌಹಾರ್ದಕ್ಕೆ ಧಕ್ಕೆ: ಭಾರದ್ವಾಜ್

ಗಂಗಾವತಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಯಿಂದ ದೇಶದೆಲ್ಲೆಡೆ ಕೋಮು ಸೌಹಾರ್ದಕ್ಕೆ ಧಕ್ಕೆಯಾಗಿದೆ. ನೈತಿಕ ಹೊಣೆ ಹೊತ್ತು ಎರಡೂ ಸರ್ಕಾರಗಳ ಗೃಹ ಸಚಿವರು ರಾಜೀನಾಮೆ ನೀಡಬೇಕು’ ಎಂದು ಹಿರಿಯ ಕಾರ್ಮಿಕ ಮುಖಂಡ ಜೆ. ಭಾರದ್ವಾಜ್ ಒತ್ತಾಯಿಸಿದರು.

ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕೇಂದ್ರದ ಬಿಜೆಪಿ ಸರ್ಕಾರ ಆರ್ಎಸ್ಎಸ್ ಕೈಗೊಂಬೆಯಂತಾಗಿದ್ದು, ಮತೀಯ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ. ಇತ್ತ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಹಿಂದೂಗಳ ವಿರುದ್ದ ಎತ್ತಿ ಕಟ್ಟುತ್ತಿದೆ’ ಎಂದು ಆರೋಪಿಸಿದರು.

ದಲಿತ ಮುಖಂಡ ಆರತಿ ತಿಪ್ಪಣ್ಣ ಮಾತನಾಡಿ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಸಿದ್ದರಾಮಯ್ಯ ಆಡಳಿತಕ್ಕೆ ಹೆಚ್ಚು ಒತ್ತು ಕೊಡುವುದು ಬಿಟ್ಟು ಚುನಾವಣೆ ಹತ್ತಿರ ಇರುವ ಕಾರಣ ಪಕ್ಷ ಸಂಘಟನೆಗೆ ಆದ್ಯತೆ ನೀಡುತ್ತಿದ್ದಾರೆ’ ಎಂದರು.

ದಲಿತ ಮುಖಂಡ ಮರಿಯಪ್ಪ ಕುಂಟೋಜಿ ಮಾತನಾಡಿದರು. ಪಾಪ್ಯುಲರ್‌ ಫ್ರಂಟ್ ಆಫ್‌ ಇಂಡಿಯಾ, ಕ್ಯಾಂಪಸ್ ಫ್ರಂಟ್ ಆಪ್ ಇಂಡಿಯಾ, ಮುಸ್ಲಿಂ ಸಮಾಜದ ವಿವಿಧ ಸಂಘಟನೆ, ಸಿಐಟಯು, ಸಿಪಿಐಎಂ, ಸಿಪಿಐಎಂಎಲ್, ದಲಿತ ಸಂಘರ್ಷ ಸಮಿತಿ ವಿವಿಧ ಬಣ, ಕನ್ನಡಪರ ಸಂಘಟನೆಗಳು ಮುಂತಾದವು ಬಂದ್‌ ಆಚರಣೆಯಲ್ಲಿ ಪಾಲ್ಗೊಂಡಿದ್ದವು.

* * 

ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿದ್ದರೂ ಬೆಳಗ್ಗೆ 8ರಿಂದ ಕೆಲ ಸಂಘಟನೆಯ ಯುವಕರು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದ್ದಾರೆ. ಇದರಿಂದ ಬೀದಿ ಬದಿಯ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ
ಶಾಮಣ್ಣ ನಾಯಕ್
ವ್ಯಾಪಾರಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.