ADVERTISEMENT

3.72 ಲಕ್ಷ ಮಕ್ಕಳಿಗೆ ಮಾತ್ರೆ ವಿತರಣೆ ಗುರಿ

ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 12:23 IST
Last Updated 26 ಜನವರಿ 2018, 12:23 IST
ಕೊಪ್ಪಳದದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅಧ್ಯಕ್ಷತೆಯಲ್ಲಿ ಜಂತುಹುಳ ನಿವಾರಣಾ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆ ಈಚೆಗೆ ನಡೆಯಿತು
ಕೊಪ್ಪಳದದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅಧ್ಯಕ್ಷತೆಯಲ್ಲಿ ಜಂತುಹುಳ ನಿವಾರಣಾ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆ ಈಚೆಗೆ ನಡೆಯಿತು   

ಕೊಪ್ಪಳ: ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆಗೆ ಜಂತುಹುಳುವಿನ ಕಾಟವೇ ಪ್ರಮುಖ ಕಾರಣ. ಇದರ ನಿವಾರಣೆಗೆ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಅಡಿ ಜಿಲ್ಲೆಯ 1ರಿಂದ 19 ವರ್ಷದೊಳಗಿನ 3. 72 ಲಕ್ಷ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ಸೇವನೆ ಮಾಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ವೆಂಕಟರಾಜಾ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿಯ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಆಯೋಜನೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಹಸಿವಾಗದಿರುವುದು, ಹೊಟ್ಟೆನೋವು, ರಕ್ತಹೀನತೆ, ಪದೇ ಪದೇ ವಾಂತಿಬೇಧಿ ಮುಂತಾದ ಸಮಸ್ಯೆಗಳಿಗೆ ಜಂತುಹುಳುವಿನ ಕಾಟ ಪ್ರಮುಖ ಕಾರಣ. ಮಕ್ಕಳಲ್ಲಿ ಜಂತುಹುಳು ಬಾಧೆಗೆ ಅನೈರ್ಮಲ್ಯ ಮತ್ತು ಬಯಲು ಶೌಚ ಬಹುಮುಖ್ಯ ಕಾರಣ. ಬರಿಗಾಲಲ್ಲಿ ಮಲವನ್ನು ತುಳಿದು ನಡೆದಾಡುವ ಮಕ್ಕಳಿಗೆ ಜಂತುಹುಳುವಿನ ಬಾಧೆ ಕಾಡುತ್ತದೆ. ಹೀಗಾಗಿ ಬಯಲು ಬಹಿರ್ದೆಸೆ ಸಂಪೂರ್ಣ ನಿರ್ಮೂಲನೆಗೊಳಿಸುವುದು ಅಗತ್ಯ. ಮಕ್ಕಳಲ್ಲಿನ ರಕ್ತಹೀನತೆ ನಿವಾರಣೆ ನಿಟ್ಟಿನಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಫೆ. 12ರಂದು ಜಿಲ್ಲೆಯಲ್ಲಿ ನಡೆಯಲಿದೆ ಎಂದರು.

ADVERTISEMENT

ಅಲ್ಬೆಂಡಾಜೋಲ್ ಮಾತ್ರೆ ಸೇವನೆ ಅತ್ಯಂತ ಸುರಕ್ಷಿತವಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಅಂಗನವಾಡಿಗಳು, ಹಾಸ್ಟೆಲ್‍ಗಳಲ್ಲಿನ 1ರಿಂದ 19 ವರ್ಷದೊಳಗಿನ ಮಕ್ಕಳಿಗೆ ಆಯಾ ಶಾಲೆ, ಕಾಲೇಜಿನಲ್ಲಿಯೇ ಮಾತ್ರೆ ಸೇವನೆ ಮಾಡಿಸಬೇಕು. ಯಾವುದೇ ಕಾರಣಕ್ಕೂ ಮಾತ್ರೆಯನ್ನು ಮಕ್ಕಳಿಗೆ ಮನೆಗೆ ಒಯ್ಯಲು ಅವಕಾಶ ಕೊಡಬಾರದು. ಈ ಬಾರಿ ಸರ್ಕಾರಿ ಮತ್ತು ಖಾಸಗಿ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.

ಶಾಲೆಗಳಲ್ಲಿ ಶಿಕ್ಷಕರು ಜಂತುಹುಳುಗಳ ಸಮಸ್ಯೆ ಹಾಗೂ ಇದಕ್ಕೆ ಕಾರಣ ಹಾಗೂ ಮಾತ್ರೆ ಸೇವನೆಯಿಂದ ಆಗುವ ಅನುಕೂಲದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಕಾರ್ಯಕ್ರಮ ಯಶಸ್ವಿಗೊಳಿಸಲು ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಿಗೆ ಅಗತ್ಯ ಸೂಚನೆ ನೀಡಬೇಕು ಎಂದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಅಲಕಾನಂದ ಮಳಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.