ADVERTISEMENT

‘ವಿಶ್ವಕರ್ಮರು ಮುಖ್ಯ ವಾಹಿನಿಗೆ ಬರಲಿ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 8:57 IST
Last Updated 29 ಜನವರಿ 2018, 8:57 IST

ಗಂಗಾವತಿ: ‘ಕ್ರಿಯಾಶೀಲ ವೃತ್ತಿ ನೈಪುಣ್ಯದಿಂದ ಭಾರತೀಯ ಇತಿಹಾಸ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ವಿಶಿಷ್ಟ ಗುರುತು ಪಡೆದಿರುವ ವಿಶ್ವಕರ್ಮ ಸಮುದಾಯವು ಮುಖ್ಯವಾಹಿನಿಗೆ ಬರಬೇಕಿದೆ’ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.

ನಗರದ ಶ್ರೀಕಾಳಿಕಾದೇವಿ ದೇವಸ್ಥಾನದ ವಜ್ರಮಹೋತ್ಸವದ (75ನೇ ವಾರ್ಷಿಕೋತ್ಸವ) ಅಂಗವಾಗಿ ಬಸವಣ್ಣ ವೃತ್ತದಲ್ಲಿ ಶನಿವಾರ ಅಮರಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ವೇದ, ಪುರಾಣಗಳ ಕಾಲದಿಂದಲೂ ವಿಶ್ವಕರ್ಮ ಸಮುದಾಯದವರು ತಮ್ಮದೇ ಆದ ಸಾಂಸ್ಕೃತಿಕ ಹಿನ್ನೆಲೆ ಹೊಂದಿದ್ದು, ಒಂದೊಮ್ಮೆ ಇಡೀ ವಿಶ್ವದಲ್ಲಿ ವಿಶ್ವಕರ್ಮರು ಪೂಜ್ಯನೀಯರಾಗಿದ್ದರು. ಆದರೆ ಕಾಲಘಟ್ಟದಲ್ಲಿ ಬದಲಾವಣೆ ಪರ್ವದಲ್ಲಿ ಸಮುದಾಯ ನಿರ್ಲಕ್ಷ್ಯಕ್ಕೊಳಪಟ್ಟಿದೆ. ಈ ಹಿನ್ನೆಲೆ ಸಮುದಾಯದವರು ಮತ್ತೆ ಮುನ್ನೆಲೆಗೆ ಬರಲು ತಮ್ಮ ಯುವ ಪೀಳಿಗೆಗೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಕೊಡಿಸಬೇಕು. ಸಮುದಾಯಕ್ಕೆ ಅಗತ್ಯವಿರುವ ರಾಜಕೀಯ ಸ್ಥಾನಮಾನಕ್ಕೆ ನಾನು ಬೆಂಬಲಿಸುವೆ’ ಎಂದು ಹೇಳಿದರು.

ADVERTISEMENT

ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರಪ್ಪ ಮಾತನಾಡಿ ದರು. ಗಿಣಿಗೇರದ ಸರಸ್ವತಿ ಪೀಠದ ದೇವೇಂದ್ರ ಸ್ವಾಮೀಜಿ, ಲೇಬಗಿರಿಯ ನಾಗಮೂರ್ತೇಂದ್ರ ಸ್ವಾಮೀಜಿ, ಶಾಡ್ಲಗೇರಿಯ ವಿರೂಪಾಕ್ಷಯ್ಯ ಸ್ವಾಮಿ, ಜವಳಗೇರಾದ ಸೂರ್ಯನಾರಾಯಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ನಗರಸಭೆಯ ಅಧ್ಯಕ್ಷ ಸಣ್ಣ ಹುಲಿಗೆಮ್ಮ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಮನೋಹರಸ್ವಾಮಿ ಮುದೇನೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜ್, ಮುಖಂಡರಾದ ದೇವಪ್ಪ ಕಾಮದೊಡ್ಡಿ, ವೀರಭದ್ರಪ್ಪ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.