ADVERTISEMENT

ಇಂದು ಸಿಗಲಿದೆ ಸಿರಿಧಾನ್ಯ ತಿನಿಸು

ಶರತ್‌ ಹೆಗ್ಡೆ
Published 29 ಜನವರಿ 2018, 9:01 IST
Last Updated 29 ಜನವರಿ 2018, 9:01 IST
ಕೊಪ್ಪಳದಲ್ಲಿ ಭಾನುವಾರ ಸಿರಿಧಾನ್ಯಗಳ ಆಹಾರ ಮೇಳ, ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯ ಮಂಟಪ ತಯಾರಿಕೆಯಲ್ಲಿ ತೊಡಗಿರುವ ಕುಷ್ಟಗಿ ತಾಲ್ಲೂಕಿನ ಸಿಬ್ಬಂದಿ
ಕೊಪ್ಪಳದಲ್ಲಿ ಭಾನುವಾರ ಸಿರಿಧಾನ್ಯಗಳ ಆಹಾರ ಮೇಳ, ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯ ಮಂಟಪ ತಯಾರಿಕೆಯಲ್ಲಿ ತೊಡಗಿರುವ ಕುಷ್ಟಗಿ ತಾಲ್ಲೂಕಿನ ಸಿಬ್ಬಂದಿ   

ಕೊಪ್ಪಳ: ನಗರದಲ್ಲಿ ಮೊದಲ ಬಾರಿಗೆ ಸಿರಿಧಾನ್ಯಗಳ ಆಹಾರ ಮೇಳ ನಡೆಯುತ್ತಿದೆ. ಸಿರಿಧಾನ್ಯದ ಖಾದ್ಯಗಳು ಆಹಾರಪ್ರಿಯರ ಬಾಯಲ್ಲಿ ನೀರೂರಿಸಲು ಸಿದ್ಧವಾಗಿವೆ.

ನಗರದ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಗರಸಭೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಜ.29 ಮತ್ತು 30ರಂದು ನಡೆಯಲಿರುವ ಸಿರಿಧಾನ್ಯಗಳ ಆಹಾರ ಮೇಳ, ಪ್ರದರ್ಶನ ಮತ್ತು ಮಾರಾಟ, ಜಿಲ್ಲಾಮಟ್ಟದ ಮಹಿಳಾ ಸಮಾವೇಶ ಕಾರ್ಯಕ್ರಮದ ಕಿರು ಪರಿಚಯ.

ನಗರದಲ್ಲಿ ಇದುವರೆಗೆ ಸಿರಿಧಾನ್ಯಗಳ ಪರಿಚಯ ಮತ್ತು ಪ್ರದರ್ಶನವಷ್ಟೇ ನಡೆದಿತ್ತು. ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಅವುಗಳಿಂದ ತಯಾರಿಸಬಹುದಾದ ಖಾದ್ಯಗಳು ಮತ್ತು ಸೇವನೆಯಿಂದಾ ಗುವ ಪರಿಣಾಮಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ಈ ಮೇಳ ತಿಳಿಹೇಳಲಿದೆ.

ADVERTISEMENT

ಏನೇನು ಇರಲಿವೆ: ನವಣೆ, ಸಾವೆ, ಊದಲು, ಹಾರಕ, ಕೊರಲೆ, ಸಜ್ಜೆ, ಜೋಳ, ಬರಗು ಮತ್ತು ರಾಗಿ ಧಾನ್ಯಗಳ ಖಾದ್ಯಗಳನ್ನು ಮೇಳದಲ್ಲಿ ಕಾಣಬಹುದು. ದೇಹಕ್ಕೆ ಬೇಕಾಗುವ ನಾರು, ಪಿಷ್ಟ, ಕಬ್ಬಿಣ, ಸುಣ್ಣ  ಇತ್ಯಾದಿ ಅಂಶಗಳನ್ನು ಸಿರಿಧಾನ್ಯಗಳು ವ್ಯವಸ್ಥಿತವಾಗಿ ಪೂರೈಸುತ್ತವೆ ಎಂಬುದು ಸಂಘಟಕರ ಹೇಳಿಕೆ.

ಏಕೆ ಬೇಡಿಕೆ? ‘ಪ್ರಸ್ತುತ ಜೀವನಶೈಲಿ ಯಿಂದ ಸಹಜವಾಗಿ ಆವರಿಸುವ ಕಾಯಿಲೆಗಳಿಂದ ದೂರವಿರಲು ಸಿರಿ ಧಾನ್ಯಗಳ ಬಳಕೆಯಿಂದ ಸಾಧ್ಯ ಎಂದು ಸಂಶೋಧನೆಗಳು ದೃಢಪಡಿಸಿವೆ. ರಕ್ತದಲ್ಲಿನ ಕೊಲೆಸ್ಟ್ರಾಲ್‌, ಟ್ರೈಗ್ಲಿಸರೈಡ್‌ ಅಂಶಗಳನ್ನು ಈ ಧಾನ್ಯಗಳು ಕಡಿಮೆ ಮಾಡುತ್ತವೆ. ಸಂಸ್ಕರಣೆ, ಮೌಲ್ಯವರ್ಧನೆಯ ಕೊರತೆಯಿಂದ ಈ ಧಾನ್ಯಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಪರಿಚಯಿಸುವ ಉದ್ದೇಶ ವಿದೆ. ನಮ್ಮ ಸ್ವಸಹಾಯ ಸಂಘಗಳ ಸದಸ್ಯರ ಸಾಧನೆಯು ಉಳಿದವರಿಗೂ ಮಾದರಿ ಆಗಬೇಕು. ಇಲ್ಲಿ ವಿಚಾರ ವಿನಿಮಯ ಆಗಬೇಕು. ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ಕೊಡಬೇಕು. ರೈತ ಉತ್ಪಾದಕ ಸಂಸ್ಥೆಯನ್ನು ತೆರೆದು ಅವುಗಳ ತಿಂಡಿ ತಿನಿಸುಗಳ ಮಾಹಿತಿ ಕೊಡುವುದು ಮೇಳದಲ್ಲಿ ನಡೆಯುತ್ತದೆ' ಎಂದು ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮುರಳೀಧರ ಎಚ್‌.ಎಲ್‌. ವಿವರಿಸಿದರು.

‘ಮೇಳದಲ್ಲಿ 50 ಸ್ಟಾಲ್‍ಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಸ್ಟಾಲ್‍ಗಳು ಈಗಾಗಲೇ ಬುಕ್‍ ಆಗಿವೆ. ಇದರಲ್ಲಿ ಒಂದು ಪೋಲಿಯೊ ಲಸಿಕೆ ಕೇಂದ್ರ, ಕೃಷಿ ಯಂತ್ರಧಾರೆ, ಸ್ವ ಉದ್ಯೋಗ ಮಾದರಿ ಕೇಂದ್ರ ಇರಲಿವೆ. ಎರಡು ದಿನಗಳ ಕಾಲ ನಡೆಯಲಿರುವ ಮೇಳಕ್ಕೆ ಪ್ರತಿ ದಿನ 10 ಸಾವಿರ ಜನ ಭೇಟಿ ನೀಡುವ ನಿರೀಕ್ಷೆ ಇದೆ. ಮೇಳದ ನಿರ್ವಹಣೆಗೆ 10 ಸಮಿತಿಗಳನ್ನು ರಚಿಸಲಾಗಿದೆ’ ಎಂದು ಯೋಜನೆಯ ಸೇವಾನಿರತ ಮಂಜುನಾಥ ಹೇಳಿದರು.   

ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಮಹಿಳಾ ಸಮಾವೇಶವೂ ಸೇರಿದೆ. ಜ.30ರಂದು ಸಿರಿಧಾನ್ಯ ಸಂವಾದ ಕುರಿತ ಎರಡು ಗೋಷ್ಠಿಗಳು ನಡೆಯಲಿವೆ. ಸಿರಿಧಾನ್ಯ ಬೇಸಾಯ ಕ್ರಮಗಳು, ಸಿರಿಧಾನ್ಯ ಆಹಾರ ಉತ್ಪನ್ನಗಳು ಮತ್ತು ಮಾರುಕಟ್ಟೆ ಕುರಿತು ಪರಿಣತರು ಅನುಭವ ಹಂಚಿಕೊಳ್ಳಲಿದ್ದಾರೆ. ಜತೆಗೆ ಜನಪದ ನೃತ್ಯ, ಸಂಗೀತ ಕಾರ್ಯಕ್ರಮಗಳು ಮನತಣಿಸಲಿವೆ. ಮಾಹಿತಿಗೆ ಮುರಳೀಧರ ಅವರ ಮೊಬೈಲ್‌: 94827 04025 ಸಂಪರ್ಕಿಸಬಹುದು.

ಏನೇನು ತಿನಿಸು

ಸಿರಿಧಾನ್ಯಗಳ ಉಪ್ಪಿಟ್ಟು, ಇಡ್ಲಿ, ಪಲಾವ್‌, ಬಿಸಿಬೇಳೆ ಬಾತ್‌, ರಾಗಿ ಹಾಲು, ಸಜ್ಜೆ ಹಾಲು, ದೋಸೆ, ಕೇಸರಿ ಬಾತ್‌, ಹೋಳಿಗೆ, ಪಾಯಸ, ಮೊಸರನ್ನ, ಬರ್ಫಿ, ಚಕ್ಕುಲಿ, ಕೋಡುಬಳೆ, ಮಾಲ್ಟ್‌, ಲಾಡು, ಬಿರಿಯಾನಿ... ಇವನ್ನೆಲ್ಲಾ ತಯಾರಿಸುವ ಪ್ರಾತ್ಯಕ್ಷಿಕೆಯೂ ಮೇಳದಲ್ಲಿದೆ.

ಸಮಾವೇಶದಲ್ಲಿ ಇಂದು

ಸಶಕ್ತ ಮಹಿಳೆ ಸಮೃದ್ಧ ಕುಟುಂಬ ಜಾಗೃತಿ ಜಾಥಾ. ಈಶ್ವರ ಪಾರ್ಕ್‌ ಆವರಣ. ಉದ್ಘಾಟನೆ: ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಬೆಳಿಗ್ಗೆ 10. ವೇದಿಕೆ ಕಾರ್ಯಕ್ರಮ: ಶಿವಶಾಂತವೀರ ಮಂಗಲ ಭವನ. ಉದ್ಘಾಟನೆ: ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಧ್ಯಕ್ಷತೆ ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ,

ರೈತ ಉತ್ಪಾದಕ ಕಂಪನಿಗೆ ಚಾಲನೆ: ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್‌.ಎಚ್‌.ಮಂಜುನಾಥ್‌. ವಸ್ತು ಪ್ರದರ್ಶನ ಉದ್ಘಾಟನೆ: ಸಂಸದ ಸಂಗಣ್ಣ ಕರಡಿ. ಉಪಸ್ಥಿತಿ: ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್‌, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಡಿ.ಗೀತಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ, ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ್‌, ಯೋಜನೆಯ ಪ್ರಾದೇಶಿಕ ಪಿ.ಗಂಗಾಧರ ರೈ, ಮಧುರಾ ಕರಣಂ, ಪ್ರತಿಮಾ ಪಟ್ಟಣಶೆಟ್ಟಿ ಬೆಳಿಗ್ಗೆ 11.

* * 

ಕಾಯಿಲೆಗಳಿಂದ ದೂರವಿರಲು ಸಿರಿಧಾನ್ಯಗಳ ಬಳಕೆ ಅಗತ್ಯ. ಈ ನಿಟ್ಟಿನಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಪರಿಚಯಿಸುವ <br/>ಪ್ರಯತ್ನ ಮೇಳದ್ದು.
ಮುರಳೀಧರ ಎಚ್‌.ಎಲ್‌. ಜಿಲ್ಲಾ ನಿರ್ದೇಶಕ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ</span>
          </p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.