ADVERTISEMENT

ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹ

10ನೇ ಬಾರಿ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ: ಸೋಲಿಲ್ಲದ ಸರದಾರ

ಸಿದ್ದನಗೌಡ ಪಾಟೀಲ
Published 17 ಡಿಸೆಂಬರ್ 2020, 7:00 IST
Last Updated 17 ಡಿಸೆಂಬರ್ 2020, 7:00 IST
ರಡ್ಡಿ ವೀರರಾಜು
ರಡ್ಡಿ ವೀರರಾಜು   

ಕೊಪ್ಪಳ: ಚುನಾವಣೆ ರಾಜಕಾರಣದಲ್ಲಿ ದಣಿವರಿಯದೇತಮ್ಮ 80ನೇ ವಯಸ್ಸಿನಲ್ಲೂ10ನೇ ಬಾರಿ ಸ್ಪರ್ಧಿಸುವ ಮೂಲಕ ಪಂಚಾಯಿತಿ ಚುನಾವಣೆಗೆ ವೃದ್ಧರೊಬ್ಬರು ರಂಗು ತಂದಿದ್ದಾರೆ.

ಕನಕಗಿರಿ ಮತ ಕ್ಷೇತ್ರದ ಶ್ರೀರಾಮನಗರ ಗ್ರಾಮದ 7ನೇ ವಾರ್ಡ್‌ನಿಂದ ಮತ್ತೆ ಸ್ಪರ್ಧೆ ಬಯಸಿರಡ್ಡಿ ವೀರರಾಜು ಎಂಬುವರು ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ. ಸತತ 9 ಬಾರಿ ವಿಜೇತರಾಗಿ ದಾಖಲೆ ಬರೆದಿದ್ದಾರೆ.

ಅಲ್ಲದೆ ಗ್ರಾಮದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸದಾ ಚಿಂತಿಸುವ ಇವರು ವಾರ್ಡ್‌ನ ಎಲ್ಲ ಜನರೊಂದಿಗೆ ಸೌಹಾರ್ದವಾಗಿ ಬದುಕಿದ್ದಾರೆ. ಜನರ ಸಮಸ್ಯೆಗೆ ಸದಾ ತುಡಿವಇವರನ್ನು ಗ್ರಾಮದ ಜನತೆ 6 ಬಾರಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಎರಡು ಬಾರಿ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.ಗ್ರಾಮದ ರಾಜಕೀಯ ಬಿಟ್ಟು ಬೇರೆನೂ ಆಶೆ ಇಟ್ಟುಕೊಳ್ಳದೆ ಪಂಚಾಯಿತಿ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ.

ADVERTISEMENT

ಪುತ್ರ ರಡ್ಡಿ ಶ್ರೀನಿವಾಸ್‌ಕನಕಗಿರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ.

ಚುನಾವಣೆ ರಾಜಕಾರಣ: ದೇಶದಲ್ಲಿ ಗ್ರಾಮದ ಜನರಿಗೆ ಅಧಿಕಾರ ನೀಡುವ ಕ್ರಾಂತಿಕಾರಕ ಪಂಚಾಯತ್‌ ರಾಜ್‌ ಕಾಯ್ದೆ ಜಾರಿಯಾದಗಿನಿಂದ ಸ್ಪರ್ಧೆ ಮಾಡುತ್ತಾ ಬಂದಿದ್ದಾರೆ. 1972ರಲ್ಲಿ ಅಂದಿನ ಮಂಡಲ ಪಂಚಾಯಿತಿಗೆ ಗೆದ್ದು ಇಲ್ಲಿಯವರೆಗೆ ಹಿಂತಿರುಗಿ
ನೋಡಿಲ್ಲ.

ಜನರಿಗೆ ಸರ್ಕಾರದ ಸೌಲಭ್ಯ, ಮೂಲಸೌಕರ್ಯ,ಕುಡಿಯುವ ನೀರು, ಸ್ವಚ್ಛತೆ, ಪಂಚಾಯಿತಿಂದ ನೇರವಾಗಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಗ್ರಾಮದ ಜನತೆ ಅಭಿಮಾನದಿಂದ ಹೇಳುತ್ತಾರೆ.

ವೀರರಾಜು ಇಂದಿನ ಚುನಾವಣೆ ವ್ಯವಸ್ಥೆಯ ಬಗ್ಗೆ ಮರುಕು ಪಡುತ್ತಾರೆ. ‘ಹಿಂದೆ ವ್ಯಕ್ತಿಗಳನ್ನು ನೋಡಿ ಮತ ಹಾಕುತ್ತಿದ್ದರು. ಈಗ ಜಾತಿ, ಹಣ, ಮದ್ಯ, ಮಾಂಸದೂಟಕ್ಕಾಗಿ ನಿತ್ಯ ಢಾಬಾಗಳಿಗೆ ಅಲೆಯುತ್ತಿರುವ ಅಭ್ಯರ್ಥಿಗಳು ಅವರ ಹಿಂಬಾಲಕರನ್ನು ಕಂಡು ಮರುಕು ಹುಟ್ಟುತ್ತದೆ’ ಎನ್ನುತ್ತಾರೆ ಅವರು

ಈ ಚುನಾವಣೆಯಲ್ಲಿ ಪಕ್ಷದ ಹೆಸರು, ಚಿನ್ಹೆ ಇರುವುದಿಲ್ಲ. ವೀರರಾಜು ಕಾಂಗ್ರೆಸ್‌ ಪಕ್ಷದ ಕಟ್ಟಾ ಮತ್ತು ಹಳೆಯ ಕಾರ್ಯಕರ್ತರಾಗಿದ್ದಾರೆ. ಪಕ್ಷಾತೀತವಾಗಿ ಗ್ರಾಮದ ಜನರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸುವ ಮೂಲಕ ಹಳ್ಳಿ ರಾಜಕಾರಣದ ಚುನಾವಣೆ ಕಣಕ್ಕೆ ರಂಗು ತಂದಿದ್ದು, ಪ್ರಜಾಪ್ರಭುತ್ವದ ಸೌಂದರ್ಯ ಎಂದು ಹಿರಿಯರು ಸಂತಸದಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.