ADVERTISEMENT

9,200 ಜನರಿಗೆ ಮಾತ್ರ ಆಧಾರ್‌!

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:51 IST
Last Updated 2 ಜನವರಿ 2014, 6:51 IST

ಗಂಗಾವತಿ: ತಾಲ್ಲೂಕಿನಲ್ಲಿ ಸುಮಾರು 35,450ಕ್ಕೂ ಹೆಚ್ಚು ಅಡುಗೆ ಅನಿಲ ಸಂಪರ್ಕ ಹೊಂದಿದ ಗ್ರಾಹಕರಿದ್ದು, ಈ ಪೈಕಿ ಕೇವಲ 9,200 ಜನ ಮಾತ್ರ ಆಧಾರ್‌ ಲಿಂಕ್‌ ಹೊಂದಿದ್ದಾರೆ.

ಕೇಂದ್ರ ಸರ್ಕಾರದ ರಿಯಾಯಿತಿ ಪಡೆ­ಯಲು 2014ರ ಫೆ. 28ಕ್ಕೆ ಅಂತಿಮ ಗಡುವು ವಿಧಿಸಿರುವುದು ಇನ್ನುಳಿದ ಗ್ರಾಹಕರಲ್ಲಿ ಆತಂಕ್ಕೆ ಕಾರಣವಾಗಿದೆ. 

ನಗರದ ಗುಂಡಮ್ಮ ಕ್ಯಾಂಪಿನಲ್ಲಿ­ರುವ ಮಾರುತಿ ಮತ್ತು ಬೈಪಾಸ್‌ ರಸ್ತೆಯಲ್ಲಿರುವ ಬಾಲಾಜಿ ಗ್ಯಾಸ್‌ ಕಂಪೆನಿಗಳಲ್ಲಿ ನೋಂದಾಯಿತ 35,­450 ಗ್ರಾಹಕರಲ್ಲಿ ಇನ್ನೂ 25 ಸಾವಿ­ರಕ್ಕೂ ಅಧಿಕ ಗ್ರಾಹಕರ ನೋಂದಣಿ ಬಾಕಿ ಉಳಿದಿದ್ದು ನಿಗದಿತ ಕಾಲಾ­ವಧಿಯೊಳಗೆ ಗುರಿ ತಲುಪು­ವುದು ಸವಲಾಗಿದೆ.

ಡಿ.15ರಿಂದ ತಾಲ್ಲೂಕಿನಲ್ಲಿ ಏಳಕ್ಕೂ ಹೆಚ್ಚು ಕೇಂದ್ರಗಳಲ್ಲಿ ಆಧಾರ್‌ ನೋಂದಣಿ ಪುನರಾರಂಭವಾಗಲಿದೆ ಎಂಬ ತಹಶೀಲ್ದಾರ್‌ ಎಂ. ಗಂಗಪ್ಪ ಕಲ್ಲೂರು ಅವರ ಆದೇಶ ಕೇವಲ ಕಾಗದಕ್ಕಷ್ಟೆ ಸೀಮಿತವಾಗಿದ್ದು, ಆಧಾರ್‌­­ಗಾಗಿ ಸಾರ್ವಜನಿಕರು ಹಾಗೂ ಗ್ರಾಹಕರು ಪರದಾಡುವಂ­ತಾಗಿದೆ ಎಂದು ಜನರು ದೂರಿದ್ದಾರೆ.

ಗುರಿ ಸಾಧನೆ ಅಸಾಧ್ಯ: ಸಿಲಿಂಡರ್‌ ಸಬ್ಸಿಡಿ ಪಡೆಯಲು ಗ್ರಾಹಕರು ಕಡ್ಡಾ­ಯ­ವಾಗಿ ತಮ್ಮ ಸಂಖ್ಯೆಗೆ ಆಧಾರ್‌ ಲಿಂಕ್‌ ಮಾಡಿಕೊಳ್ಳಲು ಕೊಪ್ಪಳ ಜಿಲ್ಲೆಗೆ 2014ರ ಫೆ.28 ಕೊನೆಯ ದಿನ ನೀಡಲಾಗಿದ್ದು, ಉದ್ದೇಶಿತ ಗುರಿ ತಲುಪಲು ಸಾಧ್ಯವಿಲ್ಲ ಎಂದು ವಿತರಕ ಮೋಹನ ಹೇಳಿದ್ದಾರೆ.

ಕೇವಲ ಎರಡು ತಿಂಗಳಲ್ಲಿ 25 ಸಾವಿರಕ್ಕೂ ಹೆಚ್ಚು ಗ್ರಾಹಕರು ಆಧಾರ್‌ ನೋಂದಣಿ ಮಾಡಿಸಬೇಕಿದೆ. ಈ ಬಗ್ಗೆ ಜನ ಜಾಗೃತಿ ಮೂಡಿಸಲು ಗ್ಯಾಸ್‌ ಕಂಪೆನಿಗಳು ಮತ್ತು ಜಿಲ್ಲಾ­ಡಳಿತ ತಕ್ಷಣ ಕಾರ್ಯಕ್ರಮ ಹಮ್ಮಿ­ಕೊಳ್ಳ­ಬೇಕಿದೆ ಎಂದು ಗ್ರಾಹಕ ಸತ್ಯ­ನಾರಾ­ಯಣ ಕಮ್ಮಾರಪೇಟೆ ತಿಳಿಸಿದರು. 

ಯಾವ ಕಂಪೆನಿಯಲ್ಲಿ ಎಷ್ಟು:  ಗುಂಡಮ್ಮಕ್ಯಾಂಪಿನಲ್ಲಿರುವ  ಮಾರುತಿ ಗ್ಯಾಸ್‌ ಕಂಪೆನಿಯಲ್ಲಿ 8,380 ಗ್ರಾಹಕ­ರಿದ್ದಾರೆ. ಕೇವಲ 1,900 ಜನ ಮಾತ್ರ ಆಧಾರ್‌ ಲಿಂಕ್‌ ಮಾಡಿಕೊಂಡರೆ, ಮಾರುತಿಯಲ್ಲಿ 27,519 ಗ್ರಾಹಕರ ಪೈಕಿ ಕೇವಲ 7300 ಜನ ಮಾತ್ರ ಲಿಂಕ್‌ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

2014 ಮಾರ್ಚ್ 1ರಿಂದ ಸಿಲಿಂಡ­ರ್‌ಗೆ ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆ ಆರಂಭವಾಗಲಿದ್ದು, ಆಧಾರ್‌ ನೋಂದಣಿ ಮಾಡಿಕೊಂಡ ಗ್ರಾಹಕರ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ ಯೋಜನೆಯಡಿ ಸಬ್ಸಿಡಿ ಹಣ ಜಮೆಯಾಗಲಿದೆ. ಈ ಹಿನ್ನೆಲೆ ಗ್ರಾಹಕರು ಆಧಾರ್‌ಗಾಗಿ ಮುಗಿ ಬೀಳುತ್ತಿದ್ದಾರೆ.

ಗ್ರಾಹಕರು ಸಿಲಿಂಡರ್‌ ಬುಕ್‌ ಮಾಡಿದ ಬಳಿಕ ಅವರ ಖಾತೆಗೆ ಸರ್ಕಾರ ₨435 ಹಣ ಜಮೆ ಮಾಡುತ್ತದೆ. ಸಿಲಿಂಡರ್ ನೀಡಿದ ಹತ್ತು ದಿನದೊಳಗೆ ಮತ್ತೆ ₨ 613 ಹಾಕುತ್ತದೆ. ಆ ಬಳಿಕ ಪ್ರತಿ ಸಿಲಿಂಡರ್‌ ಬುಕ್ಕಿಂಗ್‌ ಮಾಡಿದಾಗ ₨435 ನೀಡುತ್ತದೆ ಎಂದು ಬಾಲಾಜಿ ಕಂಪೆನಿಯ ವ್ಯವಸ್ಥಾಪಕ ಗೋಪಾಲ ಹೇಳಿದರು.
–ಎಂ.ಜೆ. ಶ್ರೀನಿವಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.