ADVERTISEMENT

ಕೊಪ್ಪಳ: 3 ವರ್ಷದಿಂದ ಸಮವಸ್ತ್ರ ಧರಿಸದ ವಿದ್ಯಾರ್ಥಿ!

ಹೈಕೋರ್ಟ್‌ಗೆ ಮೊರೆ ಹೋಗಿದ್ದ ಮಾಸ್ಟರ್‌ ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 5:43 IST
Last Updated 4 ಫೆಬ್ರುವರಿ 2023, 5:43 IST
ಮಾಸ್ಟರ್‌ ಮಂಜುನಾಥ್‌
ಮಾಸ್ಟರ್‌ ಮಂಜುನಾಥ್‌   

ಕೊಪ್ಪಳ: ‘ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲುಚೀಲ ನೀಡಬೇಕು ಎನ್ನುವ ಆದೇಶ ಪಾಲನೆಯಾಗಿಲ್ಲ’ ಎಂದು ಹೈಕೋರ್ಟ್ ಮೊರೆ ಹೋಗಿದ್ದ ವಿದ್ಯಾರ್ಥಿ ಮಾಸ್ಟರ್‌ ಮಂಜುನಾಥ್‌ ಮೂರು ವರ್ಷಗಳಿಂದ ಸಮವಸ್ತ್ರವನ್ನೇ ಧರಿಸಿಲ್ಲ!

ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದ ಕುವೆಂಪು ಶತಮಾನೋತ್ಸವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿ ಓದುತ್ತಿರುವ ಮಂಜುನಾಥ್‌ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಫೆ. 2ರಂದು ಹೈಕೋರ್ಟ್‌ ವಿಚಾರಣೆ ನಡೆಸಿ ಸರ್ಕಾರಕ್ಕೆ ಚಾಟಿ ಬೀಸಿತ್ತು.

‘ವರ್ಷಕ್ಕೆ ಎರಡು ಜೊತೆ ಸಿದ್ಧ ಸಮವಸ್ತ್ರ ಕೊಡುವುದಾಗಿ ಸರ್ಕಾರ ಹೇಳಿತ್ತು. 2019ರ ಬಳಿಕ ಪೂರ್ಣ‍ ಪ್ರಮಾಣದಲ್ಲಿ ಕೊಟ್ಟಿಲ್ಲ. ಆದ್ದರಿಂದ ಈಗಲೂ ಸಮವಸ್ತ್ರವಿಲ್ಲದೇ ಶಾಲೆಗೆ ಹೋಗುತ್ತಿದ್ದೇನೆ. ಸಿದ್ಧಪಡಿಸದೇ ಕೊಟ್ಟ ಸಮವಸ್ತ್ರ ವಾಪಸ್‌ ಕೊಟ್ಟಿದ್ದೇನೆ. ನನ್ನಂಥ ಅನೇಕ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹೊಲಿಸಿಕೊಳ್ಳುವಷ್ಟು ಆರ್ಥಿಕ ಚೈತನ್ಯವಿಲ್ಲ. ಸರ್ಕಾರ ಸಿದ್ಧ ಸಮವಸ್ತ್ರ ಕೊಡುವ ತನಕ ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿಯೇ ಶಾಲೆಗೆ ಹೋಗುವೆ’ ಎಂದು ಮಂಜುನಾಥ್‌ ಹೇಳಿದ. ಈ ಕುರಿತು ಜಿಲ್ಲೆಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಇಒ ಮತ್ತು ಡಿಡಿಪಿಐಗೆ ಪತ್ರ ಬರೆದಿದ್ದಾರೆ.

ADVERTISEMENT

ಅರ್ಜಿದಾರ ವಿದ್ಯಾರ್ಥಿ ತಂದೆ ದೇವರಾಜ್‌ ಪ್ರತಿಕ್ರಿಯಿಸಿ, ‘ವಿದ್ಯಾರ್ಥಿಗಳಿಗೆ ಸಿದ್ಧ ಸಮವಸ್ತ್ರ ಕೊಡುವ ಬಗ್ಗೆ 2016ರಿಂದಲೇ ದಾಖಲೆಗಳನ್ನು ಪಡೆದಿದ್ದೇವೆ. ಸರ್ಕಾರ ತನ್ನ ಆದೇಶದ ಪ್ರಕಾರ ನಡೆದುಕೊಂಡಿಲ್ಲ. ಹೈಕೋರ್ಟ್‌ ಎಚ್ಚರಿಕೆ ನೀಡಿದರೂ ಎಚ್ಚೆತ್ತುಕೊಂಡಿಲ್ಲ. ಈ ವರ್ಷವೂ ಸಿದ್ಧಗೊಳಿಸದ ಒಂದು ಜೊತೆ ಬಟ್ಟೆ ಬಂದಿವೆ. ಶೂ ಹಾಗೂ ಸಾಕ್ಸ್‌ ಬಂದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.