ADVERTISEMENT

ಚಿರತೆ ಸೆರೆಗೆ ಮುಂದಾದ ತಜ್ಞರ ತಂಡ

ಆನೆಗೊಂದಿ ಭಾಗದಲ್ಲಿ ಹೆಚ್ಚಿದ ಉಪಟಳ: ಜನ-–ಜಾನುವಾರುಗಳ ಮೇಲೆ ದಾಳಿ

ಸಿದ್ದನಗೌಡ ಪಾಟೀಲ
Published 18 ಡಿಸೆಂಬರ್ 2020, 2:09 IST
Last Updated 18 ಡಿಸೆಂಬರ್ 2020, 2:09 IST
ಕೊಪ್ಪಳದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಗುಡ್ಡದ ಪ್ರದೇಶದಲ್ಲಿ ಬೋನು ಅಳವಡಿಸಿರುವ ಪ್ರದೇಶಕ್ಕೆ ವನ್ಯಜೀವಿ ಸಂರಕ್ಷಣಾ ತಂಡದ ತಜ್ಞರು ಭೇಟಿ ನೀಡಿ ಪರಿಶೀಲಿಸಿದರು
ಕೊಪ್ಪಳದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಗುಡ್ಡದ ಪ್ರದೇಶದಲ್ಲಿ ಬೋನು ಅಳವಡಿಸಿರುವ ಪ್ರದೇಶಕ್ಕೆ ವನ್ಯಜೀವಿ ಸಂರಕ್ಷಣಾ ತಂಡದ ತಜ್ಞರು ಭೇಟಿ ನೀಡಿ ಪರಿಶೀಲಿಸಿದರು   

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಆನೆಗೊಂದಿ ಭಾಗದಲ್ಲಿ ಚಿರತೆ ಹಾವಳಿಯಿಂದ ಬೆಚ್ಚಿಬಿದ್ದಿರುವ ಜನ ಹೊರ ಹೋಗಲು ಭಯಪಡುವಂತೆ ಆಗಿದೆ. ಕಳೆದ ಎರಡು ತಿಂಗಳಿಂದ ಚಿರತೆಗಳ ಹಾವಳಿ ಅಧಿಕವಾಗಿದ್ದು, ಅವುಗಳನ್ನು ಸೆರೆ ಹಿಡಿಯುವುದು ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಚಿರತೆ ದಾಳಿಗೆ ಒಬ್ಬ ಯುವಕ ಬಲಿಯಾಗಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಜಾನುವಾರು, ಕುರಿ, ಮೇಕೆ ಮೇಲೆ ದಾಳಿ ಮಾಡಿ ಹೊತ್ತುಕೊಂಡು ಹೋಗಿವೆ. ಅಲ್ಲದೆ ಮೇಲಿಂದ ಮೇಲೆ ಗ್ರಾಮಗಳಲ್ಲಿ ಕಾಣಿಸುವ ಮೂಲಕ ಮತ್ತಷ್ಟು ಆತಂಕ ಮೂಡಿಸಿವೆ.

ಚಿರತೆ ಮತ್ತು ಕರಡಿಗಳ ಆವಾಸ ಸ್ಥಾನಗಳಾದ ಅಂಜನಾದ್ರಿ, ಆನೆಗೊಂದಿ, ಸಣಾಪುರ, ದುರ್ಗಾದೇವಾಲಯ, ಮ್ಯಾಗೋಟಿ ಪ್ರದೇಶಗಳಿಂದ ಚಿರತೆಗಳು ಗ್ರಾಮದತ್ತ ಏಕೆ ನುಸುಳುತ್ತಿವೆ ಎಂಬುವುದೇ ಅರಣ್ಯ ಇಲಾಖೆಗೆ ತಿಳಿಯದೆ ಗೊಂದಲ ಮೂಡಿಸಿದೆ. ಒಬ್ಬನನ್ನು ಬಲಿ ತೆಗೆದುಕೊಂಡ ಚಿರತೆ ಸೆರೆಗೆ ಅಲ್ಲಲ್ಲಿ ಬೋನು ಅಳವಡಿಸಿದರೂ ಬೋನಿಗೆ ಬೀಳುತ್ತಿಲ್ಲ.

ADVERTISEMENT

ಬಳ್ಳಾರಿ ಜಿಲ್ಲೆಯ ಕಮಲಾಪುರದ ವೈಲ್ಡ್‌ ಲೈಫ್‌ ಕನರ್ಜವೇಶನ್‌ ತಂಡದ ನಾಲ್ವರು ಸದಸ್ಯರ ತಂಡ ಗುರುವಾರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಅವರ ನೇತೃತ್ವದಲ್ಲಿ ಆನೆಗೊಂದಿ ಪ್ರದೇಶಕ್ಕೆ ಭೇಟಿ ನೀಡಿದ್ದು, ಚಿರತೆಗಳ ಚಲನವಲನ ಬಗ್ಗೆ ಎರಡು ದಿನಗಳ ಅಧ್ಯಯನ ನಡೆಸಿ ಬೋನು ಅಳವಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಈ ಭಾಗದಲ್ಲಿ 16ರಿಂದ 20 ಚಿರತೆಗಳು ಇವೆ ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆ ಅಳವಡಿಸಿರುವ ಕ್ಯಾಮೆರಾಗಳಲ್ಲಿ ಟ್ರ್ಯಾಪ್‌ ಆಗಿವೆ. ಆದರೆ ನರಹಂತಕ ಚಿರತೆಯನ್ನು ಸೆರೆ ಹಿಡಿಯುವುದೇ ಇಲಾಖೆಗೆ ಸವಾಲಾಗಿದೆ. ‘ಸಂಜೆ 5ರ ನಂತರ ತುರ್ತು ಕೆಲಸವಿದ್ದರೆ ಮಾತ್ರ ಸಂಚರಿಸುವಂತೆ ಮತ್ತು ಗುಂಪಾಗಿ ಹೋಗಬೇಕು' ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಭೀತಿ ಹುಟ್ಟಿಸುವ ವದಂತಿ: ತೋಳ ಬಂತು, ತೋಳ ಎಂಬ ಕಥೆಯಂತೆ ಚಿರತೆ ಅಲ್ಲಿ ಕಂಡು ಬಂತು, ಇಲ್ಲಿ ಇತ್ತು ಎಂಬ ದೃಶ್ಯಾವಳಿಗಳ ವಿಡಿಯೋಗಳುಕೂಡಾ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿವೆ. ಜನರ ಓಡಾಟ ಹೆಚ್ಚಿರುವ ಪ್ರದೇಶದಲ್ಲಿಯೇ ಜೋಡಿ ಚಿರತೆಗಳು ಕಾಣಿಸಿಕೊಂಡಿದ್ದು, ಸುದ್ದಿಯಾಗಿತ್ತು. ಪಂಪಾಸರೋವರ ಬಳಿ, ದುರ್ಗಾದೇಗುಲದ ಗೋಶಾಲೆ ಬಳಿ ಚಿರತೆಗಳು ಕಂಡು ಬಂದಿವೆ ಎನ್ನಲಾಗುತ್ತಿದೆ. ಆದರೆ ವಿಡಿಯೋಗಳ ಸತ್ಯಾಸತ್ಯತೆ ಬಗ್ಗೆ ಇಲಾಖೆಗೆ ಶೇ 90ರಷ್ಟು ಅನುಮಾನ ಇದೆ.

ಚಿರತೆ ಹೊರ ಬರಲು ಕಾರಣವೇನು?: ಈ ಭಾಗ ಮೊದಲಿನಿಂದಲೂ ಚಿರತೆಗಳ ಆವಸ ಸ್ಥಾನ. ಬೆಟ್ಟಗುಡ್ಡಗಳು, ಗುಹೆ, ಸಮೃದ್ಧ ನೀರು, ಸಸ್ತನಿ ಪ್ರಾಣಿಗಳಾದ ಮೊಲ,ಜಿಂಕೆಗಳು ಇವೆ. ಇದರಿಂದ ಸಹಜವಾಗಿ ಚಿರತೆಗಳು ಕಂಡು ಬರುತ್ತವೆ. ಆದರೆ ಬೆಟ್ಟ, ಗುಡ್ಡಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಗಣಿಗಾರಿಕೆ, ಮಾನವ ಹಸ್ತಕ್ಷೇಪ, ಅವುಗಳ ಆವಾಸ ಸ್ಥಾನ ಅತಿಕ್ರಮಿಸಿದ್ದರಿಂದ ಜನವಸತಿ ಪ್ರದೇಶಗಳತ್ತ ದಾಳಿ ಇಡುತ್ತಿವೆ ಎನ್ನುತ್ತಾರೆ ಗ್ರಾಮಸ್ಥರು ಮತ್ತು ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.