ADVERTISEMENT

ಕಾಂಗ್ರೆಸ್‌ನಿಂದ ದ್ವಿಮುಖ ನಡೆ; ಜೆಡಿಎಸ್‌ ಟೀಕೆ

ಶಾದಿಮಹಲ್‌ ನಿರ್ಮಾಣಕ್ಕೆ ನೀಡಿದ ಹಣ ವಾಪಸ್‌ ಪಡೆದರೆ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 12:42 IST
Last Updated 18 ಜುಲೈ 2022, 12:42 IST

ಕೊಪ್ಪಳ: ‘ನಗರದಲ್ಲಿ ಶಾದಿಮಹಲ್‌ ನಿರ್ಮಾಣಕ್ಕೆ ನಗರಸಭೆಯಿಂದ ₹50 ಲಕ್ಷ ಅನುದಾನ ನೀಡಿದ ಶಾಸಕ ರಾಘವೇಂದ್ರ ಹಿಟ್ನಾಳ ವಿರುದ್ಧ ಅವರ ಪಕ್ಷದವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಕಾಂಗ್ರೆಸ್‌ ದ್ವಿಮುಖ ನೀತಿ ಅನುಸರಿಸುತ್ತಿದೆ’ ಜೆಡಿಎಸ್‌ ರಾಷ್ಟ್ರೀಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಆರೋಪಿಸಿದರು.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್‌ ಶಾಸಕ ಮತ ಬ್ಯಾಂಕ್‌ ರಾಜಕಾರಣಕ್ಕೆ ಶಾದಿಮಹಲ್‌ಗೆ ಅನುದಾನ ನೀಡಿದ್ದಾರೆ. ಹಿಂದೆ ನಿಂತು ಅವರ ಪಕ್ಷದ ಸದಸ್ಯ ಮಹೇಂದ್ರ ಚೋಪ್ರಾ ಮೂಲಕ ಅದನ್ನು ವಿರೋಧಿಸುವ ಹೇಳಿಕೆ ಕೊಡಿಸುತ್ತಿದ್ದಾರೆ. ನಾಲ್ಕೂವರೆ ವರ್ಷಗಳ ಅಧಿಕಾರದಲ್ಲಿಹಿಟ್ನಾಳ ಮುಸ್ಲಿಮರಿಗೆ ಏನೂ ಮಾಡದವರು ಚುನಾವಣೆ ಸಮೀಪಿಸುತ್ತಿದ್ದಂತೆ ಅವರನ್ನು ಓಲೈಸುತ್ತಿದ್ದಾರೆ’ ಎಂದು ಟೀಕಿಸಿದರು.

‘ವಿಧಾನಸಭಾ ಚುನಾವಣೆಗೆ ಸಿದ್ದರಾಮಯ್ಯನವರು ಕ್ಷೇತ್ರ ಸಿಗದೆ ಅಲೆದಾಡುತ್ತಿದ್ದಾರೆ. ಕೊಪ್ಪಳದಿಂದಲೂ ಸ್ಪರ್ಧಿಸುವ ಚಿಂತನೆಯಲ್ಲಿದ್ದಾರೆ. ಅವರ ಇಲ್ಲಿ ಸ್ಪರ್ಧೆಗೆ ಬಂದರೆ ಸ್ವಾಗತ. ಆದರೆ, ಸೋಲು ನಿಶ್ಚಿತ. ಮುಖ್ಯಮಂತ್ರಿ ಆಗಿದ್ದವರಿಗೇ ಸ್ವಂತ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ’ ಎಂದರು.

ADVERTISEMENT

ನಗರಸಭೆ ಸದಸ್ಯ ಜೆಡಿಎಸ್‌ನ ಚೆನ್ನಬಸಪ್ಪ ಕೋಟ್ಯಾಳ ’ಹಿಂದೆ ಕನಕದಾಸ ವೃತ್ತಕ್ಕೆ ಹಣ ಕೊಟ್ಟಾಗ ಯಾರೂ ವಿರೋಧಿಸಿರಲಿಲ್ಲ. ಈಗ ಶಾದಿಮಹಲ್‌ಗೆ ಹಣ ನೀಡಿದರೆ ವಿರೋಧ ಏಕೆ. ಕೆಲ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತದೆ. ಅದಾದ ಬಳಿಕ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಲಿದೆ. ಈ ಎಲ್ಲಾ ಹಿನ್ನಲೆ ಇಟ್ಟುಕೊಂಡು ಶಾಸಕರ ಎದುರು ಪ್ರಭುತ್ವ ಸಾಧಿಸಲು ಮಹೇಂದ್ರ ಚೋಪ್ರಾ ರಾಜೀನಾಮೆಯ ಬೆದರಿಕೆ ಒಡ್ಡಿದ್ದಾರೆ’ ಎಂದು ಆರೋಪಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷಅಮರೇಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಸೊರಟೂರು, ಕೊಪ್ಪಳ ತಾಲ್ಲೂಕು ಘಟಕದ ಅಧ್ಯಕ್ಷ ಆಯೂಬ್‌ ಅಡ್ಡೆವಾಲೆ, ಮಾಧ್ಯಮ ವಕ್ತಾರ ಮೌನೇಶ ವಡ್ಡಟ್ಟಿ ಪಾಲ್ಗೊಂಡಿದ್ದರು.

’ಶಾದಿಮಹಲ್‌ ನಿರ್ಮಾಣಕ್ಕೆ ವಿರೋಧವಿಲ್ಲ’

ಕೊಪ್ಪಳ: ‘ಯಾವುದೇ ಸಮುದಾಯಕ್ಕೆ ಅನುದಾನ ಕೊಟ್ಟರೂ ನನ್ನ ವಿರೋಧವಿಲ್ಲ. ಇದಕ್ಕೆ ನಗರಸಭೆಯ ಬದಲು; ಸರ್ಕಾರದಿಂದ ಪ್ರತ್ಯೇಕ ಅನುದಾನ ಕೊಡಬೇಕಿತ್ತು’ ಎಂದು ನಗರಸಭೆ ಸದಸ್ಯ ಮಹೇಂದ್ರ ಚೋಪ್ರಾ ಹೇಳಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ನಗರಸಭೆ ಸದಸ್ಯರ ಗಮನಕ್ಕೆ ತರದೆ ದೊಡ್ಡ ಮೊತ್ತವನ್ನು ಸಮುದಾಯ ಭವನಗಳಿಗೆ ನೀಡಿದರೆ ಸ್ಥಳೀಯ ಪ್ರದೇಶಗಳ ಅಭಿವೃದ್ಧಿಗೆ ಹಣ ಎಲ್ಲಿಂದ ತರುವುದು. ತುರ್ತು ಸಂದರ್ಭದಲ್ಲಿ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಬಳಸಲು ಬೇಕಾಗುವ ನಗರಸಭೆ ಅನುದಾನವನ್ನು ಶಾದಿಮಹಲ್‌ ನಿರ್ಮಾಣಕ್ಕೆ ಕೊಡಬಾರದಿತ್ತು’ ಎಂದರು.

ಸಮಾಧಾನ ಪಡಿಸಿದ ಬಸವರಾಜ ಹಿಟ್ನಾಳ್

ಕೊಪ್ಪಳ: ಮಾಜಿ ಶಾಸಕ ಬಸವರಾಜ ಹಿಟ್ನಾಳ ಅವರು ಎರಡು ದಿನಗಳ ಹಿಂದೆ ಚೋಪ್ರಾ ಅವರ ಮನೆಗೆ ಭೇಟಿ ನೀಡಿ ಸಮಾಧಾನಪಡಿಸಿದ್ದಾರೆ.

ಬಹಿರಂಗವಾಗಿ ಪಕ್ಷದವರ ವಿರುದ್ಧವೇ ಹೇಳಿಕೆ ನೀಡಬಾರದು ಎಂದು ಸೂಚಿಸಿದ್ದಾಗಿ ಗೊತ್ತಾಗಿದೆ.

ಈ ವೇಳೆ ಚೋಪ್ರಾ ‘ಸದಸ್ಯರ ಗಮನಕ್ಕೆ ತಾರದೆ ಅನುದಾನ ಕೊಟ್ಟಿದ್ದು ಸರಿಯಲ್ಲ. ಅನುದಾನ ಕೊಡುವ ಮುನ್ನ ಸದಸ್ಯರನ್ನು ಒಂದು ಮಾತು ಕೇಳಬೇಕಿತ್ತಲ್ಲವೇ’ ಎಂದು ಅಸಮಾಧಾನ ತೊಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

***

ಶಾದಿಮಹಲ್‌ಗೆ ಅನುದಾನ ನೀಡಲು ನಗರಸಭೆ ಸಭೆಯಲ್ಲಿ ಸದಸ್ಯರ ಜೊತೆ ಚರ್ಚೆಯಾಗಿದೆ. ಠರಾವು ಕೂಡ ಪಾಸ್‌ ಆಗಿದೆ.
ಎಚ್‌.ಎನ್‌. ಭಜಕ್ಕನವರ
ಆಯುಕ್ತ, ನಗರಸಭೆ

****

ತಮ್ಮ ಪಕ್ಷದ ಶಾಸಕರ ವಿರುದ್ಧವೇ ಹೇಳಿಕೆ ನೀಡಿದ ಚೋಪ್ರಾ ವಿರುದ್ಧ ಕಾಂಗ್ರೆಸ್‌ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಚೋಪ್ರಾ ರಾಜೀನಾಮೆ ನೀಡಬೇಕು.
ವೀರೇಶ ಮಹಾಂತಯ್ಯನಮಠ
ಜೆಡಿಎಸ್‌ ರಾಷ್ಟ್ರೀಯ ಕಾರ್ಯದರ್ಶಿ

***

ವಾರ್ಡ್‌ಗಳಲ್ಲಿ ಏನೂ ಅಭಿವೃದ್ಧಿ ಕೆಲಸ ಮಾಡದೆ ಚುನಾವಣೆ ಸಮಯದಲ್ಲಿ ಮತ ಕೇಳಲು ಹೋದರೆ ಜನ ನಮ್ಮನ್ನು ಪ್ರಶ್ನಿಸುತ್ತಾರೆ. ಸಂವಿಧಾನ ಬದ್ಧ ಹಕ್ಕು ಕೇಳಿದ್ದೇ ತಪ್ಪಾಯಿತೆ?
ಮಹೇಂದ್ರ ಚೋಪ್ರಾ, ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.