ADVERTISEMENT

ಜೀವನವು ಉಸಿರಿನ ಲೀಲಾವಿಲಾಸ: ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

ಸನ್ಯಾಸ ದೀಕ್ಷೆ ಸ್ವೀಕಾರದ ಅಭಿನಂದನಾ ಸಮಾರಂಭದಲ್ಲಿ ಗವಿಶ್ರೀಗಳ ಆಶೀರ್ವಚನ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 5:51 IST
Last Updated 29 ನವೆಂಬರ್ 2021, 5:51 IST
ಕೊಪ್ಪಳ ನಗರದ ಮಹಾವೀರ ಜೈನ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸನ್ಯಾಸ ದೀಕ್ಷೆ ಸ್ವೀಕರಿಸಿದ ವಿನಯ ಹಾಗೂ ನಮನ ಅವರ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು
ಕೊಪ್ಪಳ ನಗರದ ಮಹಾವೀರ ಜೈನ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸನ್ಯಾಸ ದೀಕ್ಷೆ ಸ್ವೀಕರಿಸಿದ ವಿನಯ ಹಾಗೂ ನಮನ ಅವರ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು   

ಕೊಪ್ಪಳ: ‘ಎಲ್ಲಿಯವರೆಗೆ ಈ ದೇಹದಲ್ಲಿ ಉಸಿರಿರುವುದೋ ಅಲ್ಲಿಯವರೆಗೆ ಎಲ್ಲರೂ ನಮ್ಮ ಕುಶಲವನ್ನು ವಿಚಾರಿಸುತ್ತಾರೆ. ಯಾವಾಗ ದೇಹದಲ್ಲಿ ಉಸಿರು ನಿಲ್ಲುವುದೋ ಆಗ ಜೀವನವೂ ನಿಲ್ಲುತ್ತದೆ. ಜೀವನ ಎಂಬುವುದು ಉಸಿರಿನ ಲೀಲಾವಿಲಾಸ’ ಎಂದು ಸಂಸ್ಥಾನ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ನಗರದ ಮಹಾವೀರ ಜೈನ ಸಮುದಾಯ ಭವನದಲ್ಲಿ ಭಾನುವಾರ ನಡೆದ ಮೆಹತಾ ಪರಿವಾರದ ವಿನಯ ಮೆಹತಾ ಹಾಗೂ ನಮನ್ ಪೋಕರ್ಣ ಅವರ ಜೈನ ಸನ್ಯಾಸ ದೀಕ್ಷೆ ಸ್ವೀಕಾರದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ತಾಯಿಯ ಗರ್ಭದಿಂದ ಹೊರಬಂದಾಗ ನಮಗೆ ಯಾವುದೇ ಹೆಸರಿರುವುದಿಲ್ಲ. ಆದರೆ ಉಸಿರಿರುತ್ತದೆ. ಆದರೆ, ನಾವು ಭೂಮಿಯನ್ನು ಬಿಟ್ಟು ಹೋಗುವಾಗ ನಮಗೆ ಉಸಿರಿರುವುದಿಲ್ಲ, ಆದರೆ ಹೆಸರುಳಿಯುವ ಕೆಲಸ ಮಾಡಿ ಹೋಗಬೇಕು. ಅದೇ ಜೀವನದ ಕೈಂಕರ್ಯ’ ಎಂದರು.

ADVERTISEMENT

‘ಈ ಜಗತ್ತು ಎಂಬುದು ದೇವರ ಉತ್ಸವ. ಸೂರ್ಯ, ಚಂದ್ರ, ನಕ್ಷತ್ರಗಳಂತಹ ದೀಪಗಳನ್ನು ಹಚ್ಚಿ ದೇವರು ಈ ಉತ್ಸವ ಕೈಗೊಂಡಿದ್ದಾನೆ. ಜಗತ್ತಿನ ಎಲ್ಲ ಜೀವರಾಶಿಗಳಿಗೂ ಆತ ಉಣಬಡಿಸುತ್ತಾನೆ. ನಾನು ಇಲ್ಲಿ ಆಮಂತ್ರಿತ. ಮನುಷ್ಯನ ಹುಟ್ಟು ದೇವನ ಆಮಂತ್ರಣವೇ ಆಗಿದೆ ಎಂದು ಅನುಭಾವಿ ರವೀಂದ್ರನಾಥ ಟ್ಯಾಗೋರರು ಈ ಜಗತ್ತಿನಲ್ಲಿ ನಾವು ಹೇಗೆ ಬದುಕುಬೇಕು ಎಂಬ ಬಗ್ಗೆ ಹೇಳಿದ್ದಾರೆ’ ಎಂದರು.

‘ವ್ಯಾಪಾರಸ್ಥರದ್ದು ಒಂದು ಕಲೆ, ರಾಜಕಾರಣಿಗಳದ್ದು ಮತ್ತೊಂದು ಕಲೆ. ಹೀಗೆ ಪ್ರತಿಯೊಬ್ಬರದ್ದು ಒಂದೊಂದು ಕಲೆ ಇರುತ್ತದೆ. ದೇವರ ಉತ್ಸವದಲ್ಲಿ ನಾವು ಈ ಕಲೆಗಳನ್ನು ಪ್ರದರ್ಶಿಸಬೇಕು. ಪ್ರದರ್ಶನದಲ್ಲಿ ಅನುತ್ತೀರ್ಣಗೊಂಡರೆ ಮುಂದಿನ ಬಾರಿ ಉತ್ಸವದಲ್ಲಿ ಅವರಿಗೆ ಆಮಂತ್ರಣ ಇರುವುದಿಲ್ಲ ಎಂದರ್ಥ. ಆದ್ದರಿಂದ ಎಲ್ಲರೂ ಚೆನ್ನಾಗಿ ಪ್ರದರ್ಶನ ನೀಡಬೇಕು. ಈ ನಿಟ್ಟಿನಲ್ಲಿ ಮನುಷ್ಯ ದೇವರು ಕೊಟ್ಟ ಈ ಅತ್ಯಲ್ಪ ಆಯುಷ್ಯದಲ್ಲಿ ಸತ್ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.

ಸನ್ಯಾಸ ದೀಕ್ಷೆ ಸ್ವೀಕರಿಸಿರುವ ವಿನಯ ಹಾಗೂ ನಮನ್ ಎಂಬ ಈ ಇಬ್ಬರು ಮಕ್ಕಳು ಸಂಸಾರ ಸಾಗರದಲ್ಲಿ ವಜ್ರ ಹುಡುಕಲು ಹೊರಟಿದ್ದಾರೆ. ಮನುಷ್ಯನಿಗೆ ಹೆಸರಿನಿಂದ ಕೀರ್ತಿ ದೊರೆಯಬಾರದು. ಕಾಯಕದಿಂದ ದೊರೆಯಬೇಕು. ಆ ನಿಟ್ಟಿನಲ್ಲಿ ಇವರು ಈಗ ಜೀವನದ ಬಹುದೊಡ್ಡ ಯಾತ್ರೆಯನ್ನು ಕೈಗೊಂಡಿದ್ದಾರೆ. ಜೀವಿಸುವುದು ಒಂದು ಕಲೆ. ಯಾರು ಜೀವಂತವಾಗಿದ್ದಾರೋ ಅವರೆಲ್ಲ ಬದುಕುತ್ತಿದ್ದಾರೆ ಎಂದರ್ಥವಲ್ಲ. ಕೈಗಳಿರುವ ಎಲ್ಲರಿಂದಲೂ ಕಲೆ ಒಲಿಸಿಕೊಳ್ಳಲಾಗುವುದಿಲ್ಲ. ಯಾರಿಗೆ ಕಂಠವಿದೆಯೋ ಅವರೆಲ್ಲರೂ ಸಂಗೀತಗಾರರಾಗಲಾರರು. ಹಾಗೆಯೇ ಅವರಿಗೆ ಬದುಕುವ ಕಲೆ ಗೊತ್ತಿಲ್ಲ ಎನ್ನಬಹುದಷ್ಟೇ ಎಂದರು

ಜೈನ ಸಮಾಜದ ಮುಖಂಡ ಗಜೇಂದ್ರಗಡದ ಅಶೋಕಚಂದ್ ಬಾಗಮಾರ್ ಮಾತನಾಡಿ, ಯಾರ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳು ಬರುತ್ತವೆಯೋ ಅವರು ಮಾತ್ರ ಸನ್ಯಾಸಿಗಳಾಗಲು ಸಾಧ್ಯ. ಒಮ್ಮೆ ಸನ್ಯಾಸಿಯಾದರೆ ಮುಗಿಯಿತು. ಜೀವನವೆಲ್ಲ ಹಣ ಮುಟ್ಟುವಂತಿಲ್ಲ. ವಾಹನ ಬಳಸುವಂತಿಲ್ಲ. ಮನೆಯಲ್ಲಿ ಕುಳಿತು ಊಟ ಮಾಡುವಂತಿಲ್ಲ. ಪಾದರಕ್ಷೆ ಹಾಕುವಂತಿಲ್ಲ. ಒಟ್ಟಾರೆಯಾಗಿ ಸಂಪೂರ್ಣವಾಗಿ ಪರಿತ್ಯಾಗ ಮಾಡುವುದು ಸಾಮಾನ್ಯ ವಿಷಯವಲ್ಲ ಎಂದರು.

ಜೈನ ಸಮಾಜದ ಜಿಲ್ಲಾ ಅಧ್ಯಕ್ಷ ಅಭಯ್ ಕುಮಾರ ಮೆಹತಾ, ಹುಬ್ಬಳ್ಳಿಯ ಅಶೋಕ ಕೋಠಾರಿ, ಬಾಲಕರ ಪಾಲಕರಾದ ರಿಕಬಚಂದ್, ಗೌತಮಚಂದ್, ರವಿ ಕುಮಾರ, ವಿಶಾಲ, ಅನಿತಾ ಬಾಯಿ ಮೆಹತಾ ಇದ್ದರು.ಪದಮಚಂದ್ ಮೆಹತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.