ADVERTISEMENT

ಹೆಚ್ಚು ಖರ್ಚಿಲ್ಲದೆ ಬೆಳೆದ ಔಡಲ

ಕ್ರಿಮಿನಾಶಕ, ಕೂಲಿ ಆಳಿನ ನಿಯಂತ್ರಣಕ್ಕೆ ರೈತನ ಹೊಸ ಉಪಾಯ

ಕಿಶನರಾವ್‌ ಕುಲಕರ್ಣಿ
Published 4 ನವೆಂಬರ್ 2019, 19:30 IST
Last Updated 4 ನವೆಂಬರ್ 2019, 19:30 IST
ಸುಮಾರು ಎರಡೂವರೆ ಅಡಿವರೆಗೂ ಬೆಳೆದಿರುವ ಔಡಲ ತೆನೆ
ಸುಮಾರು ಎರಡೂವರೆ ಅಡಿವರೆಗೂ ಬೆಳೆದಿರುವ ಔಡಲ ತೆನೆ   

ಹನುಮಸಾಗರ: ಇಲ್ಲಿನ ಪ್ರಗತಿಪರ ರೈತ ಶಿವಪುತ್ರಪ್ಪ ಕೋಳೂರ ಅವರು ತಮ್ಮ ನಾಲ್ಕು ಎಕರೆ ಜಮೀನಿಗೆ ಔಡಲ ಬಿತ್ತನೆ ಮಾಡಿದ್ದು, ಈಗ ಗಿಡಗಳು ಮಾರುದ್ದದ ತೆನೆಗಳು ಬಿಟ್ಟಿರುವುದು ರೈತರ ಆಕರ್ಷಣೆಗೆ ಕಾರಣವಾಗಿದೆ.

ಮುಂಗಾರು ಬಿತ್ತನೆ ಸೂಕ್ತ: ಮುಂಗಾರು ಪ್ರಾರಂಭವಾಗುವ ಸಮಯದಲ್ಲಿ ಔಡಲ ಬಿತ್ತನೆಗೆ ಹೆಚ್ಚು ಸೂಕ್ತ. ಆ ಸಮಯದಲ್ಲಿ ಬಿತ್ತನೆ ಮಾಡಿದರೆ ಜನವರಿ ತಿಂಗಳೊಳಗೆ ಎರಡು ಬಾರಿ ಇಳುವರಿ ಪಡೆಯಬಹುದು. ಎಡೆಕುಂಟೆ ಹೊಡೆಯುತ್ತಾ ಮಣ್ಣು ಏರಿಸಿ ಕೈಯಿಂದ ಊರುವುದರ ಮೂಲಕ ಬೀಜ ಬಿತ್ತನೆ ಮಾಡಿದ್ದೇನೆ. ಕ್ರಿಮಿಕೀಟಗಳ, ರೋಗಗಳ ಬಾಧೆ ರಹಿತವಾಗಿ ನಮ್ಮ ಒಣ ಬೇಸಾಯದಲ್ಲಿ ಒಂದು ಎಕರೆಗೆ ಕನಿಷ್ಠ 10 ಕ್ವಿಂಟಲ್ ಇಳುವರಿ ನಿರೀಕ್ಷೆಯಲ್ಲಿ ಇದ್ದೇನೆ ಎಂದು ಶಿವಪುತ್ರಪ್ಪ ಹೇಳುತ್ತಾರೆ.

ಬೀಜ ಮೊಳಕೆಯೊಡೆಯುವಾಗ ಸ್ವಲ್ಪ ಮಳೆಯಾದರೆ ಸಾಕು ಫಸಲು ದಕ್ಕು ತ್ತದೆ. ಸಾಮಾನ್ಯವಾಗಿ ಒಂದು ಎಕರೆ ಪ್ರದೇಶದಲ್ಲಿ ಔಡಲ ಬೆಳೆಯಲು ಕೊಟ್ಟಿಗೆ ಗೊಬ್ಬರ, ಬೀಜ, ಬೇಸಾಯ ಸೇರಿ ₹5 ಸಾವಿರ ಖರ್ಚು ಬರುತ್ತದೆ. ನಾನು ಮೊದಲ ಬಾರಿಗೆ ಈ ಪ್ರಯತ್ನ ಮಾಡಿ ದ್ದೇನೆ. ರೈತನಿಗೆ ದೋಖಾ ಅಂತೂ ಇಲ್ಲ ಎಂಬ ವಿಶ್ವಾಸ ಶಿವಪುತ್ರಪ್ಪ ಅವರದ್ದು.

ADVERTISEMENT

ಬಂಪರ್ ಇಳುವರಿ: ಕೋಳೂರ ಅವರ ಹೊಲದಲ್ಲಿ ಬೆಳೆದು ನಿಂತಿರುವ ಔಡಲ ಗಿಡಗಳು ಸದ್ಯ ಕಣ್ಮನ ಸೆಳೆಯುತ್ತಿವೆ. 4 ರಿಂದ 8 ಅಡಿ ಎತ್ತರದವರೆಗೆ ಗಿಡಗಳು ಬೆಳೆದಿದ್ದು, ಬಹುತೇಕ ಗಿಡಗಳಲ್ಲಿ 8 ರಿಂದ 10 ಕವಲುಗಳು ಒಡೆದಿವೆ. ಪ್ರತಿ ಕವಲಿನಲ್ಲಿ 50-60 ಕಾಯಿಗಳು ಬಿಟ್ಟಿದ್ದು ಬಹುತೇಕ ತೆನೆಗಳು ಸುಮಾರು ಎರಡೂವರೆ ಅಡಿವರೆಗೂ ಬೆಳೆದಿವೆ. ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್‌ ಔಡಲಕ್ಕೆ ಸದ್ಯ ₹4,500 ರಿಂದ ₹ 5,500 ಬೆಲೆಯಿದೆ. ಗದಗ ಮತ್ತು ಹೈದರಾಬಾದ್‍ಗಳಲ್ಲಿ ಔಡಲ ಬೀಜಕ್ಕೆ ದೊಡ್ಡ ಮಾರುಕಟ್ಟೆ ಇದೆ. ಸ್ಥಳೀಯ ವಾಗಿಯೂ ಮಾರಾಟ ಮಾಡಬಹುದು. ಔಡಲಬೀಜ ಔಷಧಿಗೆ ಬಳಕೆ ಆಗುವು ದರಿಂದ ಸಾಕಷ್ಟು ಬೇಡಿಕೆ ಹಾಗೂ ಬೆಲೆಯೂ ಇದೆ.

ಒಣ ಬೇಸಾಯಕ್ಕೆ ವರದಾನ: ಔಡಲ ಬೇಸಾಯವು ಒಣ ಬೇಸಾಯದ ರೈತರ ಪಾಲಿಗೆ ವರದಾನವಾಗಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಕಡಿಮೆ ಮಳೆಯಲ್ಲಿಯೂ ಉತ್ತಮ ಫಸಲು ಬರುತ್ತದೆ. ಔಡಲ ಸರಳವಾಗಿ ಬೆಳೆಯುವ ಸಸ್ಯವಾಗಿದೆ. ನಿರ್ವಹಣೆ ವೆಚ್ಚ ತುಂಬಾ ಕಡಿಮೆ. ಜಮೀನು ಹದಗೊಳಿಸುವುದು, ಬೀಜ ಬಿತ್ತನೆ, ಕಳೆ ತೆಗೆಯುವುದಷ್ಟೆ ಕೆಲಸ. ಅತ್ಯಲ್ಪ ಮಳೆಯಲ್ಲೂ ಔಡಲ ಬೆಳೆಯುತ್ತದೆ. ವರ್ಷಕ್ಕೆ ಎರಡು ಬಾರಿ ಇಳುವರಿ ಬರುತ್ತದೆ ಎಂದು ಹನುಮಸಾಗರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ ಹೇಳಿದರು.

ಬೆಳೆ ಬೆಳೆಯಲು ಯೋಗ್ಯವಿಲ್ಲವೆಂದು ಪಾಳು ಬಿಟ್ಟಿದ್ದ ಈ ಜಮೀನಿನನ್ನು ಸಮತಟ್ಟುಗೊಳಳಿಸಿದ ಕಾರಣವಾಗಿ ಇಂದು ಜಮೀನು ಕೃಷಿ ಕಾಶಿಯಾಗಿ ಪರಿಣಮಿಸಿದೆ. ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ಶಿವಪುತ್ರಪ್ಪ ಸಿರಿಧಾನ್ಯಗಳ ಬೆಳೆಯಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ರೈತರಿಗೆ ಆಗಾಗ ಮಾರ್ಗದರ್ಶನ ಮಾಡುತ್ತಾರೆ. ಹೆಚ್ಚಿನ ಮಾಹಿತಿಗೆ ಶಿವಪುತ್ರಪ್ಪ ಅವರನ್ನು (99011 81360) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.