ADVERTISEMENT

‘ಪ್ರಾಣಿ ವಧೆ: ನಿಯಮ ಅನುಸರಿಸಿ’

ಪ್ರಾಣಿ ಹಿಂಸೆ ತಡೆಗಟ್ಟಲು ಜಾರಿಯಲ್ಲಿರುವ ಕಾನೂನು ಕುರಿತ ಸಭೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 17:31 IST
Last Updated 15 ಜುಲೈ 2020, 17:31 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಮಾತನಾಡಿದರು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಮಾತನಾಡಿದರು   

ಕೊಪ್ಪಳ: ಜಿಲ್ಲೆಯಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಾಣಿ ವಧಾಗಾರಗಳನ್ನು ಸ್ಥಾಪಿಸಿ, ವೈಜ್ಞಾನಿಕವಾಗಿ ಅವುಗಳನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಜಿಲ್ಲಾಮಟ್ಟದ ಪ್ರಾಣಿ ಕಲ್ಯಾಣ ಹಾಗೂ ದೌರ್ಜನ್ಯ ತಡೆ ಸಮಿತಿ ವತಿಯಿಂದ ಪ್ರಾಣಿ ಹಿಂಸೆ ತಡೆಗಟ್ಟಲು ಜಾರಿಯಲ್ಲಿರುವ ಕಾನೂನುಗಳ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೇವಲ ಒಂದು ವಧಾಗಾರವಿದೆ. ಆದ್ದರಿಂದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಸ್ಥಳವನ್ನು ಗುರುತಿಸಿ ವೈಜ್ಞಾನಿಕವಾಗಿ, ನಿಯಮಾನುಸಾರ ಸ್ಥಾಪಿಸಿ ಅವುಗಳನ್ನು ನಿರ್ವಹಿಸುವ ಕುರಿತು ಒಂದು ವಾರದಲ್ಲಿಯೇ ವರದಿ ತಯಾರಿಸಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ವಿವಿಧ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕರು ಮನೆಯ ಮುಂದೆ ಅಥವಾ ತಮ್ಮ ಓಣಿಗಳಲ್ಲಿ ಕುರಿ, ಕೋಣದಂತಹ ಪ್ರಾಣಿಗಳನ್ನು ಹತ್ಯೆ ಮಾಡಿ ಆಹಾರಕ್ಕಾಗಿ ಬಳಕೆ ಮಾಡುತ್ತಾರೆ. ಕೆಲ ಸಮುದಾಯದ ಹಬ್ಬಗಳಲ್ಲಿ ಒಂಟೆಗಳನ್ನು ಸಹ ಆಹಾರಕ್ಕಾಗಿ ಬಲಿ ಕೊಡಲಾಗುತ್ತದೆ. ಅದು ಕಾನೂನಿನ ವಿರುದ್ಧದ ಕ್ರಮವಾಗಿದ್ದು, ಮನೆಯ ಮುಂದೆ ಅಥವಾ ಮನೆಯ ಹತ್ತಿರ ಪ್ರಾಣಿ ವಧೆ ಮಾಡಬಾರದು ಎಂದರು.

ಮನುಷ್ಯರ ಆಹಾರಕ್ಕೆ ಯೋಗ್ಯವಾಗಿದ್ದರೆ ಮಾತ್ರ ಅಂತಹ ಪ್ರಾಣಿಗಳನ್ನು ವಧೆ ಮಾಡಿ, ಆಹಾರಕ್ಕಾಗಿ ಬಳಸಿಕೊಳ್ಳಬಹುದು. ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದರು.

ಪ್ರಾಣಿಗಳ ಸಾಗಣೆ ಉದ್ದೇಶ, ಸಾಗಣೆ ವಾಹನದ ಪರವಾನಗಿ ಮುಂತಾದವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತಪ್ಪಿದಲ್ಲಿ ₹ 10 ಸಾವಿರ ದಂಡ ಹಾಗೂ 10 ವರ್ಷ ಶಿಕ್ಷೆ ವಿಧಿಸಲಾಗುವುದು. ಈ ಎಲ್ಲ ಕಾಯ್ದೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಪ್ರಾಣಿ ಹಿಂಸೆಯನ್ನು ತಡೆಗಟ್ಟಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶರಣಬಸವರಾಜ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಬಸಯ್ಯ ಸಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.