ಕುಷ್ಟಗಿ: ‘ಯುವಕರು ದೇಶದ ಆಸ್ತಿಯಾಗಿದ್ದು, ಯುವ ಪೀಳಿಗೆ ಮೇಲೆ ದೇಶದ ಭವಿಷ್ಯ ಅಡಗಿದೆ. ಯುವಜನರನ್ನು ಸರಿಯಾದ ದಿಕ್ಕಿನಲ್ಲಿ ಕರೆದೊಯ್ದರೆ ಸುಭದ್ರ ಭಾರತ ನಿರ್ಮಾಣ ಸಾಧ್ಯ’ ಎಂದು ಇಲ್ಲಿನ ಹಿರಿಯ ಶ್ರೇಣಿ ನ್ಯಾಯಾಧೀಶ ಆರ್.ಮಂಜುನಾಥ್ ಹೇಳಿದರು.
ಪೊಲೀಸ್ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ಬುಧವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ‘ಮಾದಕ ವಸ್ತುಗಳ ನಿಷೇಧ ಜನಜಾಗೃತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,‘ಮದ್ಯ, ಗಾಂಜಾ, ಅಪೀಮು ಸೇರಿ ಇತರೆ ಮಾದಕ ವಸ್ತುಗಳ ಸೇವನೆ ವೈಯಕ್ತಿಕವಾಗಿ ಹಾನಿ ಮಾಡುವುದಷ್ಟೇ ಅಲ್ಲ ಸಮಾಜಕ್ಕೂ ಕಂಟಕವಾಗಿ ಪರಿಣಮಿಸಿದೆ. ಯುವಕರೂ ಹೆಚ್ಚಿನ ಸಂಖ್ಯೆಯಲ್ಲಿ ಚಟಕ್ಕೆ ಅಂಟಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಮಾದಕ ವಸ್ತು ಸೇವಿಸುವುದಿಲ್ಲ ಎಂಬ ಶಪಥ ಮಾಡಬೇಕು. ಅಲ್ಲದೆ ಸ್ವಾಮಿ ವಿವೇಕಾನಂದರು, ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರನ್ನು ಭವಿಷ್ಯದ ಪೀಳಿಗೆ ಮಾದರಿಯಾಗಿಸಿಕೊಳ್ಳಬೇಕು’ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ, ಸಿಪಿಐ ಯಶವಂತ ಬಿಸನಳ್ಳಿ, ಸಬ್ ಇನ್‌ಸ್ಪೆಕ್ಟರ್ ಹನುಮಂತಪ್ಪ ತಳವಾರ, ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಜನಜಾಗೃತಿ ಜಾಥಾದಲ್ಲಿ ವಕೀಲರಾದ ಆನಂದ ಡೊಳ್ಳಿನ, ಪಿ.ರಮೇಶ್, ಎನ್.ಟಿ.ಮದ್ನಾಳ ಎಸ್.ವಿ.ಎಂ ಹಾಗೂ ಬಿ.ಜಿ.ಎಸ್ ಅರೆ ವೈದ್ಯಕೀಯ ಕಾಲೇಜುಗಳ ಪ್ರಶೀಕ್ಷಣಾರ್ಥಿಗಳು, ಅಧಿಕಾರಿಗಳು, ವಕೀಲರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.