ADVERTISEMENT

ಬಾಳೆ ತೋಟದಲ್ಲಿ ಕರಡಿ ಪ್ರತ್ಯಕ್ಷ: ಆತಂಕ

ಜನರ ಗದ್ದಲಕ್ಕೆ ಬೆದರಿ ಹಿರೇಹಳ್ಳದತ್ತ ಓಟ ಕಿತ್ತ ಜಾಂಬವಂತ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 4:40 IST
Last Updated 25 ಏಪ್ರಿಲ್ 2021, 4:40 IST
ಬಾಳೆ ತೋಟವೊಂದರಲ್ಲಿ ಶನಿವಾರ ಬೆಳಗಿನ ಜಾವ ಕಂಡು ಬಂದ ಕರಡಿ
ಬಾಳೆ ತೋಟವೊಂದರಲ್ಲಿ ಶನಿವಾರ ಬೆಳಗಿನ ಜಾವ ಕಂಡು ಬಂದ ಕರಡಿ   

ಕೊಪ್ಪಳ: ತಾಲ್ಲೂಕಿನ ಚಿಕ್ಕಬಗನಾಳ ಸಮೀಪದ ಬಾಳೆ ತೋಟವೊಂದರಲ್ಲಿ ಶನಿವಾರ ಬೆಳಗಿನ ಜಾವ ಕರಡಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಗ್ರಾಮದ ಸಮೀಪವೇ ಇರುವ ಶೇಷಪ್ಪ-ರಾಮಪ್ಪ ಎಂಬುವರ ಬಾಳೆ ಬೆಳೆ ತೋಟದಲ್ಲಿ ಎರಡರಿಂದ ಮೂರು ವರ್ಷ ಪ್ರಾಯದ ಕರಡಿ ಮರಿಯೊಂದು ಕಂಡು ಬಂದಿದೆ.

ಬೆಳಗಿನ ಜಾವ ಕೃಷಿ ಚಟುವಟಿಕೆಗೆ ಹೋದಾಗ ಕರಡಿ ಇರುವುದು ಕಂಡು ಬಂತು. ಬಿಸಿಲಿನ ಧಗೆ ಮತ್ತು ಆಹಾರದ ಕೊರತೆಯಿಂದ ಗುಡ್ಡಗಳನ್ನು ಬಿಟ್ಟು ತೋಟದತ್ತ ಬಂದಿರುವ ಬಗ್ಗೆ ತಜ್ಞರು ಹೇಳಿದರು.ಈ ಕುರಿತು ರೈತರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕರಡಿ ಸೆರೆ ಹಿಡಿಯುವ ಕುರಿತು ಸಮಾಲೋಚನೆ ನಡೆಸಿದರು. ಆದರೆ ಜನರ ಗದ್ದಲಕ್ಕೆ ಬೆದರಿದ ಕರಡಿ ನಾಗಾಲೋಟದಿಂದ ಹಿರೇಹಳ್ಳದತ್ತ ಓಟ ಕಿತ್ತಿತ್ತು. ಜನರ ಕೂಗಾಟ, ಚೀರಾಟ, ದೊಣ್ಣೆಗಳನ್ನು ಹಿಡಿದುಕೊಂಡು ಬೆನ್ನಟ್ಟಿದಾಗ ಮತ್ತಷ್ಟು ಗಾಬರಿಗೊಂಡು ಕರಡಿ ಜನ ವಸತಿ ಕಡಿಮೆ ಇರುವ ಹಿನ್ನೀರಿನ ಪ್ರದೇಶದತ್ತ ಓಡಿ ಹೋಯಿತು.

ಕರಡಿ ಎಲ್ಲಿ ಓಡಿ ಹೋಯಿತು ಎಂದು ತಿಳಿಯದೇ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರೈತರು ಸಂಜೆಯವರೆಗೆ ಹುಡುಕಾಡಿದರೂ ಯಾರ ಕಣ್ಣಿಗೂ ಬೀಳಲಿಲ್ಲ. ಕೊಯ್ಲು ಮಾಡಿದ ಮೆಕ್ಕೆಜೋಳ, ಬಾಳೆ ತೋಟ, ಕಬ್ಬಿನ ಪೊದೆಗಳುಈ ಭಾಗದಲ್ಲಿ ಹೆಚ್ಚಿದ್ದು, ಸಮೀಪದಲ್ಲಿಯೇ ಕಾಸನಕಂಡಿ ಕಾಯ್ದಿಟ್ಟ ಅರಣ್ಯ ಪ್ರದೇಶವಿದೆ. ಕರಡಿ ಹೋದ ದಿಕ್ಕಿನಲ್ಲಿ ಸಂಜೆಯವರೆಗೆ ಪರಿಶೀಲನೆ ನಡೆಸಿದರೂ ಸೆರೆ ಹಿಡಿಯಲು ಆಗಲಿಲ್ಲ.

ಆದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಸೂಚನೆ ನೀಡಿದೆ. ಗ್ರಾಮಸ್ಥರಿಗೆ ಕರಡಿ ಭಯದಿಂದ ಜಮೀನುಗಳತ್ತ ತೆರಳಲು ಹಿಂದೇಟು ಹಾಕುವಂತೆ ಆಗಿದೆ. ಸ್ಥಳದಲ್ಲಿಯೇ ಅರಣ್ಯ ಇಲಾಖೆ ಸಿಬ್ಬಂದಿ ಬೀಡು ಬಿಟ್ಟಿದ್ದು, ಭಾನುವಾರ ಎಂದಿನಂತೆ ಹುಡುಕಾಟ ನಡೆಸುವುದಾಗಿ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.