ಕೊಪ್ಪಳ: ಆಪರೇಷನ್ ಸಿಂಧೂರ ಯಶಸ್ಸು, ಯೋಧ ನಮನ ಹಾಗೂ ರಾಷ್ಟ್ರ ರಕ್ಷಣೆಗಾಗಿ ನಗರದಲ್ಲಿ ಶನಿವಾರ ಬಿಜೆಪಿ ನೇತೃತ್ವದಲ್ಲಿ ತಿರಂಗಾ ಯಾತ್ರೆ ಸಂಭ್ರಮದಿಂದ ನಡೆಯಿತು. ಗಡಿಯಾರ ಕಂಬದಿಂದ ಅಶೋಕ ವೃತ್ತದವರೆಗೆ ಯಾತ್ರೆ ಸಾಗಿ ಬಂದಿತು.
ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಅಮಾಯಕರ ಹತ್ಯೆಯಾಗಿದೆ. ಇದಕ್ಕೆ ಪ್ರತೀಕಾರವಾಗಿ ಭಾರತದ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಉಗ್ರಗಾಮಿಗಳ ಹೆಡೆಮುರಿ ಕಟ್ಟಿ ಭ್ರಷ್ಟ ಪಾಕಿಸ್ತಾನದ ಬಲ ಕುಸಿಯುವಂತೆ ಮಾಡಿದೆ ಎಂದು ಬಿಜೆಪಿ ನಾಯಕರು ಹೇಳಿದರು.
ಭಾರತೀಯ ಸೇನೆಯ ಸದೃಢ ನಾಯಕತ್ವ ಮತ್ತು ಸೈನಿಕರ ದಿಟ್ಟ ಉತ್ತರದ ಪರಿಣಾಮದಿಂದ ಪಾಕಿಸ್ತಾನ ಕಂಗೆಟ್ಟಿದೆ. ಭಯೋತ್ಪಾದಕರಿಗೆ ಭಯ ಉಂಟಾಗಿದ್ದು, ಜಾಗತಿಕ ಮಟ್ಟದಲ್ಲಿಯೂ ಭಾರತದ ಸ್ಥಾನಮಾನ ಹೆಚ್ಚಿದೆ. ಭಾರತವು ವಿಶ್ವಕ್ಕೆ ಉಗ್ರತ್ವದ ನಿರ್ಮೂಲನೆಯ ಸ್ಪಷ್ಟ ಸಂದೇಶ ನೀಡಿದೆ. ಪ್ರತಿಕೂಲ ಸಮಯದಲ್ಲಿ ಧೃಡ ನಿರ್ಧಾರ ಕೈಗೊಂಡು ದೇಶವೇ ಮೊದಲು ಎನ್ನುವ ಸಂದೇಶ ಸಾರಿದೆ ಎಂದರು.
ಯಾತ್ರೆಯಲ್ಲಿ ಜಿಲ್ಲಾ ವಕೀಲರ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ವರ್ತಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಪಾಲ್ಗೊಂಡಿದ್ದವು. ಭಾರತಾಂಬೆ, ಸೈನಿಕರ ಪರವಾಗಿ ಘೋಷಣೆಗಳು ಮೊಳಗಿದವು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಮಾತನಾಡಿ, ‘ಪ್ರತೀಕಾರದ ದಾಳಿಯಲ್ಲಿ ಭಾರತ ಉಗ್ರರನ್ನು ಸದೆಬಡಿದಿದೆ. ಭಾರತದ ಮಹಿಳೆಯರು ಶಕ್ತಿಯುತರಾಗಿದ್ದಾರೆ. ಸೇನಾಧಿಕಾರಿಗಳು ಸಮರ್ಥರಿದ್ದಾರೆ. ದೇಶವನ್ನು ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯವಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾತ್ರ ಮಹತ್ವದ್ದಾಗಿದೆ’ ಎಂದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಮಾತನಾಡಿ, ‘ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬಂದರೆ ಯಾರನ್ನೂ ಉಳಿಸುವುದಿಲ್ಲ. ಪಾಕಿಸ್ತಾನ ನಮಗೆ ಯಾವ ಲೆಕ್ಕವೂ ಅಲ್ಲ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ್, ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ಶಿವಕುಮಾರ ಅರಕೇರಿ, ಗೀತಾ ಬಳ್ಳಾರಿ, ದಳವಾಯಿ ಶಿವಲೀಲಾ, ಕೀರ್ತಿ ಪಾಟೀಲ್, ಡಾ.ಕೆ.ಜಿ.ಕುಲಕರ್ಣಿ, ಶೈಲಜಾ ಬಾಗಿಲಿ, ಜಯಶ್ರೀ ಗೊಂಡಬಾಳ, ನೇತ್ರಾವತಿ, ಉಮೇಶ್ ಕುರ್ಡೇಕರ್, ನೇತ್ರಾವತಿ, ಎಬಿವಿಪಿಯ ಹಮ್ಮಿಗೇಶ ಪಾಲ್ಗೊಂಡಿದ್ದರು.
ಅಶೋಕ ವೃತ್ತದವರೆಗೆ ಸಾಗಿ ಬಂದ ಯಾತ್ರೆ ಮೊಳಗಿದ ಭಾರತ ಮಾತಾಕಿ ಜೈ ಘೋಷಣೆ ವಿವಿಧ ಸಂಘಟನೆಗಳು ಯಾತ್ರೆಯಲ್ಲಿ ಭಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.