ADVERTISEMENT

ವ್ಯವಸ್ಥೆಯ ದಾಳವಾದ ಯುವಕರು

ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ವಿಷಾದ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 10:53 IST
Last Updated 23 ಫೆಬ್ರುವರಿ 2020, 10:53 IST
ಕೊಪ್ಪಳದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ನಡೆದ ಡಿ.ರಾಮಣ್ಣ ಅಲ್ಮರ್ಸಿಕೇರಿ ರಚಿತ 'ಕೂರಿಗಿ ತಾಳು' ಹಾಗೂ ಮೆಹಬೂಬ್ ಅಲಿ ಕೆ.ಎಂ. ರಚಿತ 'ನವಿಲುಗರಿಯ ತೊಟ್ಟಿಲು' ಕವನ ಸಂಕಲನವನ್ನು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಬಿಡುಗಡೆಗೊಳಿಸಿದರು
ಕೊಪ್ಪಳದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ನಡೆದ ಡಿ.ರಾಮಣ್ಣ ಅಲ್ಮರ್ಸಿಕೇರಿ ರಚಿತ 'ಕೂರಿಗಿ ತಾಳು' ಹಾಗೂ ಮೆಹಬೂಬ್ ಅಲಿ ಕೆ.ಎಂ. ರಚಿತ 'ನವಿಲುಗರಿಯ ತೊಟ್ಟಿಲು' ಕವನ ಸಂಕಲನವನ್ನು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಬಿಡುಗಡೆಗೊಳಿಸಿದರು   

ಕೊಪ್ಪಳ: ನಮ್ಮ ಕಾಲದ ಯುವ ಜನರು ಕ್ರಾಂತಿಕಾರಿಗಳಾಗಿದ್ದರು. ಆದರೆ ಇವತ್ತಿನ ಯುವ ಜನ ವ್ಯವಸ್ಥೆಯ ದಾಳಗಳಾಗಿದ್ದಾರೆ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ,‌ ಭಾಗ್ಯನಗರದ ಶಕ್ತಿ ಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನ, ಗದಗನ ನಿರಂತರ ಪ್ರಕಾಶನದ ಆಶ್ರಯದಲ್ಲಿ ನಡೆದ ಡಿ.ರಾಮಣ್ಣ ಅಲ್ಮರ್ಸಿಕೇರಿ ರಚಿತ 'ಕೂರಿಗಿ ತಾಳು' ಹಾಗೂ ಮೆಹಬೂಬ್ ಅಲಿ ಕೆ.ಎಂ. ರಚಿತ 'ನವಿಲುಗರಿಯ ತೊಟ್ಟಿಲು' ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಗೊತ್ತಿದ್ದೋ, ಗೊತ್ತಿಲ್ಲದೆಯೋ ಕನ್ನಡದ ಕೆಲವು ಯುವ ಜನರು ಬಂಡಾಯ ಸಾಹಿತಿಗಳಾಗುತ್ತಿದ್ದಾರೆ. ಇದು ಸಮಾಧಾನಕರ ಸಂಗತಿಯಾಗಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕನ್ನಡ ಸಾಹಿತ್ಯ ವಲಯದ ಕುರಿತು ವಿಮರ್ಶಿಸಿದ್ದಾರೆ ಎನ್ನುವುದು ಸಮಾಧಾನದ ವಿಷಯವಾಗಿದೆ ಎಂದರು.

ADVERTISEMENT

ಗ್ರಾಮೀಣ ಜೀವನ, ರಾಜಕೀಯ ಹಾಗೂ ಸಾಂಪ್ರದಾಯಿಕ ವ್ಯವಸ್ಥೆಯಿಂದ ಉಂಟಾದ ಕ್ಷೋಭೆ, ಅನೈತಿಕೆಯನ್ನು ಈ ಕೃತಿ ಸಾರುತ್ತದೆ. ನವಿಲುಗರಿಯ ತೊಟ್ಟಿಲು ರಚನೆಯ ಮೂಲಕ ಮೆಹಬೂಬ್‌ ಕಥೆಗಾರರ ಕೊರತೆಯನ್ನು ನೀಗಿಸಿದ್ದಾರೆ. ಇದರಲ್ಲಿ ಪ್ರೇಮಲೋಕ ಅನಾವರಣಗೊಳಿಸಿದ್ದಾರೆ. ಅರ್ಪಣೆಯೇ ಪ್ರೇಮವೇ ಎಂಬ ಚಿಂತನೆಗೆ ಹಚ್ಚಿದ್ದಾರೆ. ತ್ಯಾಗ, ಪರಿಸ್ಥಿತಿಯ ಒತ್ತಡ, ಜಾತಿ, ಸಾಂಪ್ರದಾಯಿಕ ವ್ಯವಸ್ಥೆ, ವ್ಯಕ್ತಿ ಹಾಗೂ ಅವರ ನಡವಳಿಕೆಯನ್ನು ಕವನಗಳು ಬಿಂಬಿಸುತ್ತವೆ ಎಂದರು. ಯುವಜನರು ಎಚ್ಚೆತ್ತುಕೊಳ್ಳಬೇಕು ಎನ್ನುವ ಜಾಗೃತಿ ಮೂಡಿಸಲಾಗಿದೆ.ಪ್ರೇಮವೇ ಪ್ರಾಧಾನ್ಯತೆ ಪಡೆದಿದೆ. ಪ್ರೇಮವನ್ನು ಮುಚ್ಚಿಟ್ಟುಕೊಳ್ಳದೇ ತಾಯಿಯೊಂದಿಗೆ ಸಂವಾದಿಸಲಾಗಿದ್ದು ಓದಿಗೆ ಹಚ್ಚುತ್ತದೆ. ಪ್ರೇಮದ ಪರಿಶೋಧ ಕಾಣಬಹುದು.‌ ಬರವಣಿಗೆಯ ಶೈಲಿ ಹೊಸದಾಗಿದೆ ಎಂದರು.

'ಕೂರಿಗಿ ತಾಳು' ಪುಸ್ತಕದಲ್ಲಿ ಗ್ರಾಮೀಣ ಜೀವನ ಇದೆ. ಉಪಭಾಷೆಗಳು ಭಾಷೆಯನ್ನು ಸಮೃದ್ಧ ಗೊಳಿಸಿವೆ. ಏಕೆಂದರೆ ಪ್ರತಿ ಮೂವತ್ತು ಕಿಲೋ ಮೀಟರ್ ದೂರಕ್ಕೆ ಭಾಷೆ ಬದಲಾಗುತ್ತಾ ಹೋಗುತ್ತದೆ. ಹಾಗಾಗಿ ಉಪಭಾಷೆಗಳು ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದರು.

ವಿಮರ್ಶಕ ಜಾಜಿ ದೇವೇಂದ್ರಪ್ಪ ಮಾತನಾಡಿ, ಕೂರಿಗಿ ತಾಳು ಎಂದರೆ ಗ್ರಾಮೀಣ ಪದ. ಇದು ಸಾಹಿತ್ಯಕ್ಕೆ ಮುಖ್ಯವಾದ ಪದವಾಗಿದೆ. ಪ್ರಸ್ತುತ ಕವಿತೆ ಬರೆದವರನ್ನು ಜೈಲಿಗೆ ಹಾಕುತ್ತಿದ್ದಾರೆ. ಪ್ರಸ್ತುತ ಸಾಹಿತಿಗಳಿಗೆ ಸಂಕಷ್ಟ ಕಾಲ. ದೇಶದಲ್ಲಿ ತಲ್ಲಣ ಸೃಷ್ಠಿಯಾಗಿದೆ. ಕವಿಗಳು ಯಾರಿಗೂ ಎದುರುವುದಿಲ್ಲ. ಕಾವ್ಯ ಗುಲಾಮಗಿರಿ ಕಲಿಸುವುದಿಲ್ಲ ಎಂದರು.

ಬರೆದಿದ್ದಷ್ಟೆ ಕಾವ್ಯವಲ್ಲ. ಎದೆಯಲ್ಲಿ ಸಂಚರಿಸಿದ ವಿಷಯಗಳೆಲ್ಲವೂ ಕಾವ್ಯವಾಗಿದೆ. ಏಕಕಾಲಕ್ಕೆ ಭೂಮಿ, ಆಕಾಶ ಮತ್ತು ಶೂನ್ಯವನ್ನು ಒಳಗೊಂಡ ಕಾವ್ಯ. ಬದುಕು ಮತ್ತು ವೈಚಾರಿಕತೆಯನ್ನು ಸಾರುತ್ತದೆ. ಕೂರಿಗಿಯಲ್ಲಿ ಬಿತ್ತುವ ಬೀಜಗಳು ಅಥವಾ ಕಾವ್ಯಗಳು, ಕೋಮು, ಜಾತಿಯನ್ನು ಕಟ್ಟಿಹಾಕುವ ಬೀಜಗಳು ಆಗದಿರಲಿ. ಕಾವ್ಯದ ಕೆಲಸ ಬಹಳ ಇದೆ. ಕಥೆ, ಕವನ ಬೇರೆ ಬೇರೆಯಾಗಿ ದಕ್ಕುತ್ತದೆ. ಲೇಖಕರು ಜವಾಬ್ದಾರಿ ಅರಿತು ಕಾವ್ಯ ರಚಿಸಬೇಕಾಗಿದೆ ಎಂದರು.

ಸಾಹಿತಿ ಎಚ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಸಾಹಿತಿಗಳಾರ ಮಹಾಂತೇಶ ಮಲ್ಲನಗೌಡರ, ಪವನಕುಮಾರ ದಂಡೂರ, ಕಾಳಿದಾಸ್ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಗುರುವಿನ್, ಸರ್ಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರ ಇದ್ದರು.

ಕವಿಗಳಾದ ಡಿ.ರಾಮಣ್ಣ ಅಲ್ಮರ್ಸಕೇರಿ ಸ್ವಾಗತಿಸಿದರು. ಮೆಹಬೂಬ್ ಅಲಿ ಕೆ.ಎಂ. ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.