ADVERTISEMENT

ಕುಷ್ಟಗಿ: ಜನ ಸಹಕರಿಸದಿದ್ದರೆ ಕೋವಿಡ್ ಹೆಚ್ಚಳ

ಶಾಸಕ ಅಮರೇಗೌಡ ಬಯ್ಯಾಪುರ ಆತಂಕ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 6:30 IST
Last Updated 11 ಜನವರಿ 2022, 6:30 IST
ಕುಷ್ಟಗಿಯಲ್ಲಿ ಬೂಸ್ಟರ್‌ ಡೋಸ್‌ ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಇತರರು ಇದ್ದರು
ಕುಷ್ಟಗಿಯಲ್ಲಿ ಬೂಸ್ಟರ್‌ ಡೋಸ್‌ ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಇತರರು ಇದ್ದರು   

ಕುಷ್ಟಗಿ: ಜನರು ಜಾಗೃತರಾಗಿ ಸರ್ಕಾರ ಮತ್ತು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿದರೆ ಮಾತ್ರ ಕೋವಿಡ್‌ ನಿಯಂತ್ರಿಸಲು ಸಾಧ್ಯ. ಇಲ್ಲದಿದ್ದರೆ ಭವಿಷ್ಯದಲ್ಲಿ ಜನರು ಬಹಳಷ್ಟು ತೊಂದರೆಗೆ ಸಿಲುಕಬಹುದು ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಬೂಸ್ಟರ್‌ಡೋಸ್‌ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕೊರೊನಾ ಮೂರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನರ ಆರೋಗ್ಯ ರಕ್ಷಣೆಯಲ್ಲಿ ಮುತುವರ್ಜಿವಹಿಸಿವೆ. ಅದೇ ರೀತಿ ಸಾರ್ವಜನಿಕರು ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದರು.

ತಾಲ್ಲೂಕಿನಲ್ಲಿ ಎರಡು ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಆದರೆ ಇನ್ನೂ ಒಂದನೇ ಡೋಸ್‌ ಪಡೆಯದವರೂ ಇದ್ದಾರೆ. ಇನ್ನೂ ಕೆಲವರು ಎರಡನೇ ಡೋಸ್‌ ಲಸಿಕೆ ಪಡೆದಿಲ್ಲ. ಇಂಥ ವ್ಯಕ್ತಿಗಳು ಸೋಂಕಿಗೆ ತುತ್ತಾಗಿ ಇತರರನ್ನೂ ತೊಂದರೆಗೆ ಸಿಲುಕಿಸುತ್ತಾರೆ. ಈಗಲಾದರೂ ಜನರು ಎಚ್ಚೆತ್ತುಕೊಂಡು ಕೋವಿಡ್‌ ನಿರೋಧಕ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.

ADVERTISEMENT

ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳಬೇಕಿದ್ದರೂ ಅದನ್ನು ಜನ ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ. ಅಂಥವರ ವಿರುದ್ಧ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದರು.

ಪಾದಯಾತ್ರೆ ನಿರ್ಧಾರ ಸಮರ್ಥನೆ: ಕೋವಿಡ್‌ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿಯೇ ಕಾಂಗ್ರೆಸ್‌ ಪಕ್ಷ ಮೇಕೆದಾಟು ಹೆಸರಲ್ಲಿ ಪಾದಯಾತ್ರೆ ನಡೆಸಿದ್ದು ಸರಿಯೇ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿಯೇ ಪಾದಯಾತ್ರೆ ನಿರ್ಣಯ ಕೈಗೊಳ್ಳಲಾಗಿತ್ತು. ಕೋವಿಡ್‌ ನಿಯಮ ಪಾಲಿಸುವಂತೆ ಈಚೆಗೆ ನಿರ್ಧರಿಸಲಾಗಿತ್ತು ಹಾಗಾಗಿ ಇದು ಹಟಕ್ಕೆ ಬಿದ್ದು ತೆಗೆದುಕೊಂಡ ನಿರ್ಧಾರವಲ್ಲ’ ಎಂದರು.

ಅಭಿಯಾನ ಕುರಿತು ಮಾಹಿತಿ ನೀಡಿದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು,‘ 60 ವರ್ಷ ಮೇಲ್ಪಟ್ಟವರು ಮತ್ತು ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಇರುವವರಿಗೆ ಹಾಗೂ ಎರಡನೇ ಡೋಸ್‌ ಕೋವಿಶೀಲ್ಡ್ ಲಸಿಕೆ ಪಡೆದು 9 ತಿಂಗಳು ಆದವರರಿಗೆ ಬೂಸ್ಟರ್‌ ಲಸಿಕೆ ನೀಡಲಾಗುತ್ತಿದೆ. ಇಂಥ ಅರ್ಹತೆ ಹೊಂದಿದವರು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಸೇರಿ 1,288 ಜನರನ್ನು ಗುರುತಿಸಲಾಗಿದೆ ಎಂದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಬೂಸ್ಟರ್‌ ಲಸಿಕೆ ನೀಡಲಾಯಿತು. ಆಸ್ಪತ್ರೆ ಮುಖ್ಯವೈದ್ಯ ಡಾ.ಕೆ.ಎಸ್‌.ರೆಡ್ಡಿ, ಸಹಾಯಕ ಆಡಳಿತಾಧಿಕಾರಿ ಸಯ್ಯದ್‌, ಡಾ.ಚಂದ್ರಕಾಂತ ಮಂತ್ರಿ, ಪ್ರಯೋಗಾಲಯ ತಜ್ಞ ಬಾಲಾಜಿ ಬಳಿಗಾರ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಾಜು ವಾಲಿಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.