ADVERTISEMENT

ಖಾಸಗಿ ಶಾಲೆಗೆ ಸಡ್ಡು ಹೊಡೆದ ಚಂಡಿನಾಳ ಸರ್ಕಾರಿ ಶಾಲೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 12:14 IST
Last Updated 13 ಜನವರಿ 2022, 12:14 IST
ಕುಕನೂರು ತಾಲ್ಲೂಕಿನ ಚೆಂಡಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಾಣವಾದ ಕುಡಿಯುವ ನೀರಿನ ತೊಟ್ಟಿ  
ಕುಕನೂರು ತಾಲ್ಲೂಕಿನ ಚೆಂಡಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಾಣವಾದ ಕುಡಿಯುವ ನೀರಿನ ತೊಟ್ಟಿ     

ಕುಕನೂರು: ಸರ್ಕಾರಿ ಶಾಲೆಗಳು ಅಂದರೆ ಮೂಗು ಮುರಿಯುವವರಿಗೆ ಈ ಶಾಲೆ ಸಂಪೂರ್ಣವಾಗಿ ಭಿನ್ನವಾಗಿ ಕಾಣಿಸುತ್ತದೆ. ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಸುಸಜ್ಜಿತವಾಗಿ, ಆಕರ್ಷಕವಾಗಿ ಇರಬಲ್ಲದು ಎಂಬುದನ್ನು ನರೇಗಾ ಯೋಜನೆಯಡಿ ತಾಲ್ಲೂಕಿನ ಚಂಡಿನಾಳ ಗ್ರಾಮದಲ್ಲಿ ನಿರ್ಮಾಣವಾಗಿರುವ ಶಾಲೆ ಮಕ್ಕಳ ಮನ ಸೆಳೆಯುತ್ತಿದೆ.

ಹೌದು. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ತಾಲ್ಲೂಕಿನ 15 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೊಂದು ಮಾದರಿ ಶಾಲೆಗಳನ್ನು ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ. ಇವುಗಳು ವಿದ್ಯಾರ್ಥಿಗಳನ್ನು ಕೈಬಿಸಿ ಕರೆಯುತ್ತಿವೆ. ಇದಕ್ಕೆ ನಿದರ್ಶನ ಎನ್ನುವಂತೆ ಈಗ ಕುದರಿಮೋತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂಡಿನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂದಾಜು ₹ 27 ಲಕ್ಷ ವೆಚ್ಚದಲ್ಲಿ 7 ವಿವಿಧ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಹಮ್ಮಿಕೊಳ್ಳಲಾಗಿದೆ.

ಬಿಸಿಯೂಟದ ಕೊಠಡಿ: ಅಂದಾಜು ₹ 6.20 ಲಕ್ಷ ವೆಚ್ಚದಲ್ಲಿ ಬಿಸಿಯೂಟದ ಕೊಠಡಿ ನಿರ್ಮಾಣ ಮಾಡಲಾಗಿದೆ. ಈ ಕೊಠಡಿಯ ಗೋಡೆಗೆ ಸುಂದರ ಚಿತ್ರ ಬಿಡಿಸಲಾಗಿದ್ದು ಮಕ್ಕಳ ಪಾಲಿಗೆ ಆರ್ಕಷಣೆಯಾಗಿದೆ.

ADVERTISEMENT

ಮಳೆನೀರು ಸಂಗ್ರಹ ಘಟಕ: ಶಾಲೆಯ ವಿಶಾಲವಾದ ಆಟದ ಮೈದಾನದಲ್ಲಿ ಸುಸಜ್ಜಿತ ಶಾಲಾ ಕೊಠಡಿಗಳಿವೆ. ಅಂದಾಜು ₹ 3 ಲಕ್ಷ ವೆಚ್ಛದಲ್ಲಿ ಮಳೆ ನೀರು ಸಂಗ್ರಹ ಘಟಕ ನಿರ್ಮಾಣ ಮಾಡಲಾಗಿದೆ. ಮಳೆಗಾಲದಲ್ಲಿ ಬೀಳುವ ನೀರನ್ನು ಸಂಗ್ರಹಿಸಿ ಶಾಲಾ ಆವರಣದ ಸಸಿಗಳಿಗೆ ನೀರುಣಿಸಲು ಬಳಕೆ ಮಾಡಲಾಗುತ್ತದೆ.

ಆಟದ ಮೈದಾನ: ಆಟದ ಮೈದಾನವನ್ನು ಅಂದಾಜು ₹ 2 ಲಕ್ಷ ವೆಚ್ಛದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಟೆನ್ನಿಸ್, ಕಬಡ್ಡಿ ಮೈದಾನ ನಿರ್ಮಾಣಗೊಂಡಿವೆ. ಮಕ್ಕಳಲ್ಲಿ ಕ್ರೀಡೆ ಬಗ್ಗೆ ಒಲವು ಮೂಡಿಸಿವೆ.

ಸುಸಜ್ಜಿತ ಶೌಚಾಲಯ: ₹4.30 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಬಾಲಕ ಹಾಗೂ ಬಾಲಕಿಯರ ಪ್ರತ್ಯೇಕ ಶೌಚಾಲಯ ಮಕ್ಕಳಿಗೆ ಸ್ವಚ್ಛತೆಯ ಪಾಠ ಕಲಿಸುವುದಕ್ಕೆ ಪೂರಕವಾಗಿವೆ.

ಶಾಲಾ ತಡೆಗೋಡೆ: ₹11.50 ಲಕ್ಷ. ವೆಚ್ಚದಲ್ಲಿ ಶಾಲಾ ತಡೆಗೋಡೆ ನಿರ್ಮಾಣ ಮಾಡಿರುವುದರಿಂದ ಶಾಲಾ ಆವರಣಕ್ಕೆ ರಕ್ಷಣೆ ಸಿಕ್ಕಂತಾಗಿದೆ. ದನ ಕರು ಹಾವಳಿಗೆ ತಡೆ ಬಿದ್ದಿದೆ. ಇದರಿಂದ ಶಾಲೆಯ ಅಂದವೂ ಹೆಚ್ಚಿದೆ.

ಶಾಲಾ ಕೈತೋಟ: ಆವರಣದಲ್ಲಿ ತಲೆಎತ್ತಿರುವ ಕೈತೋಟದಲ್ಲಿ ಮಕ್ಕಳ ಬಿಸಿಯೂಟಕ್ಕೆ ಬೇಕಾಗುವ ತರಕಾರಿ ಬೆಳೆಯಲಾಗುತ್ತಿದೆ. ಮಕ್ಕಳಿಗೆ ಬೆಳೆಗಳ ಮಾಹಿತಿ ಕೊಡಬಹುದು. ಶಾಲೆ ಅಂದ ಹೆಚ್ಚಿಸುವ ಸಸಿಗಳನ್ನು ನೆಡಲಾಗಿದ್ದು, ಅವುಗಳ ಪಾಲನೆ ಪೋಷಣೆ ಜವಾಬ್ದಾರಿಯನ್ನು ಮಕ್ಕಳೆ ಹೊತ್ತಿದ್ದಾರೆ. ಇದಕ್ಕಾಗಿ ₹6.20 ಲಕ್ಷ ವೆಚ್ಚ ಮಾಡಲಾಗಿದೆ.

ಬಚ್ಚಲು ಗುಂಡಿ: ಶಾಲೆಯಲ್ಲಿ ಅಡುಗೆ ಮಾಡಲು ಬಳಕೆಯಾಗುವ ನೀರನ್ನು ಎಲ್ಲೆಂದರಲ್ಲಿ ಹರಿಬಿಡಬಾರದು ಎಂಬ ಉದ್ದೇಶದಿಂದ ₹ 50 ಲಕ್ಷ. ವೆಚ್ಚದಲ್ಲಿ ಬಚ್ಚಲಗುಂಡಿ ನಿರ್ಮಾಣ ಮಾಡಲಾಗಿದೆ. ಇದರಿಂದ ನೀರನ್ನು ನೇರವಾಗಿ ಭೂಮಿಗೆ ಇಂಗಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.