ADVERTISEMENT

ಮಾಲಾಧಾರಿಗಳಿಗೆ ಅಚ್ಚಳಿಯದ ‘ಅಪ್ಪು’ಗೆ

ಕಾಲ್ನಡಿಗೆಯೊಂದಿಗೆ ಬೆಟ್ಟದತ್ತ ಬಂದ ಭಕ್ತರು, ಹನುಮನ ಜೊತೆಗೆ ಪುನೀತ್‌ ಜಪ

ಪ್ರಮೋದ
Published 5 ಡಿಸೆಂಬರ್ 2022, 4:12 IST
Last Updated 5 ಡಿಸೆಂಬರ್ 2022, 4:12 IST
ಅಂಜನಾದ್ರಿ ಬೆಟ್ಟಕ್ಕೆ ಹೋಗುವ ಮಾರ್ಗದ ಹೊಲದಲ್ಲಿ ಭಾನುವಾರ ಪುನೀತ್‌ ರಾಜಕುಮಾರ್‌ ಫೋಟೊ ಇಟ್ಟುಕೊಂಡು ವಿಶ್ರಾಂತಿ ಪಡೆದ ವದ್ನಾಳ ಗ್ರಾಮದ ಯುವಕರ ತಂಡ
ಅಂಜನಾದ್ರಿ ಬೆಟ್ಟಕ್ಕೆ ಹೋಗುವ ಮಾರ್ಗದ ಹೊಲದಲ್ಲಿ ಭಾನುವಾರ ಪುನೀತ್‌ ರಾಜಕುಮಾರ್‌ ಫೋಟೊ ಇಟ್ಟುಕೊಂಡು ವಿಶ್ರಾಂತಿ ಪಡೆದ ವದ್ನಾಳ ಗ್ರಾಮದ ಯುವಕರ ತಂಡ   

ಅಂಜನಾದ್ರಿ (ಕೊಪ್ಪಳ): ‘ನಾವೆಲ್ಲರೂ ಮೊದಲಿನಿಂದ ಪುನೀತ್‌ ರಾಜಕುಮಾರ್‌ ಅವರ ಕಟ್ಟಾ ಅಭಿಮಾನಿಗಳು. ಹನುಮನ ಮೇಲೆ ಇರುವಷ್ಟೇ ಭಕ್ತಿ, ಗೌರವ ಹಾಗೂ ಪ್ರೀತಿ ಪುನೀತ್ ಸರ್‌ ಮೇಲೂ ಇದೆ...’

ಕೊಪ್ಪಳ ತಾಲ್ಲೂಕಿನ ವದ್ನಾಳ ಗ್ರಾಮದಿಂದ ಸುಮಾರು 50 ಕಿ.ಮೀ. ಪಾದಯಾತ್ರೆ ಮಾಡಿ ಅಂಜನಾದ್ರಿಗೆ ಹೋಗುವ ಮಾರ್ಗದ ಪಕ್ಕದ ಹೊಲದಲ್ಲಿ ಪುನೀತ್‌ ಅವರ ಫೋಟೊ ಎದೆಗೆ ಅವುಚಿಕೊಂಡು ಮಲಗಿದ್ದ ಮಂಜುನಾಥ ಎಂಬ ಯುವಕನ ಮಾತುಗಳು ಇವು.

ವದ್ನಾಳ ಗ್ರಾಮದ 30 ಜನ ಯುವಕರು ನಡೆದು ಸುಸ್ತಾಗಿ ಮಲಗಿದ್ದರು. ಪಕ್ಕದಲ್ಲಿಯೇ ಪುನೀತ್‌ ಭಾವಚಿತ್ರವನ್ನು ಇಟ್ಟುಕೊಂಡಿದ್ದರು. ಇದೊಂದು ಉದಾಹರಣೆಯಷ್ಟೇ. ಬಹಳಷ್ಟು ಭಕ್ತರ ಕೈಯಲ್ಲಿ ಪುನೀತ್‌ ಅವರ ಭಾವಚಿತ್ರ ರಾರಾಜಿಸುತ್ತಿತ್ತು. ಪಾದಯಾತ್ರೆಯುದ್ದಕ್ಕೂ ಹನುಮನ ಜಪ ಮಾಡುತ್ತ, ಜೈಕಾರ ಹಾಕುತ್ತ ಪುನೀತ್‌ ಹೆಸರು ಹೇಳಿ ಜಯಘೋಷಗಳನ್ನು ಹಾಕುತ್ತ ಸಾಗುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು.

ADVERTISEMENT

‘ಪುನೀತ್‌ ಸರ್‌ ಎಲ್ಲರ ಬದುಕಿಗೂ ಆದರ್ಶವಾಗಿದ್ದರು. ಪ್ರತಿವರ್ಷವೂ ಹನುಮಮಾಲೆ ಸಮಯದಲ್ಲಿ ಪಾದಯಾತ್ರೆ ಮಾಡುತ್ತಿದ್ದೆವು. ಈ ವರ್ಷ ಪುನೀತ್‌ ಅವರ ನೆನಪಿನ ಬುತ್ತಿ ಹೊತ್ತು ದಾರಿಯುದ್ದಕ್ಕೂ ಅವರ ಹಾಡುಗಳನ್ನು ಹೇಳುತ್ತ, ಹನುಮಮಾಲಾ ಜಪ ಮಾಡುತ್ತ ಹೆಜ್ಜೆ ಹಾಕಿದೆವು’ ಎಂದು ಮಂಜುನಾಥ ಹೇಳಿದರು.

ಕೊಪ್ಪಳ, ಗದಗ, ಧಾರವಾಡ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಿಂದ ವಾಹನಗಳ ಮೂಲಕ ಬಂದ ಅನೇಕ ಭಕ್ತರು ಅಂಜನಾದ್ರಿಯ ಸಮೀಪದ ಸ್ಥಳದಿಂದ ಪುನೀತ್‌ ಅವರ ಫೋಟೊ ಹಿಡಿದು ಪಾದಯಾತ್ರೆ ಮಾಡಿದರು. ಇನ್ನೂ ಕೆಲವರು ಕೊರಳಲ್ಲಿ ಪುನೀತ್‌ ಫೋಟೊ ಹಾಕಿಕೊಂಡು, ಕೇಸರಿ ಶಾಲು ಧರಿಸಿ ಹೆಜ್ಜೆ ಹಾಕಿದರು.

ಟೊಂಕಕಟ್ಟಿದ ಸ್ವಯಂಸೇವಕರು: ಅಂಜನಾದ್ರಿಗೆ ತೆರಳುವ ಮಾರ್ಗದಲ್ಲಿ ಭಕ್ತರು ಹೋಗುವಾಗ ಸ್ವಯಂ ಸೇವಕರು ಕುಡಿಯಲು ನೀರು, ಊಟ, ಬಾಳೆಹಣ್ಣಿನ ವ್ಯವಸ್ಥೆಯನ್ನು ಮಾಡಿದರು. ಪ್ರತಿ ಒಂದು ಕಿ.ಮೀ. ಅಂತರದಲ್ಲಿ ಹಲವು ಜನ ಉಚಿತವಾಗಿ ಆಹಾರ ಹಂಚಿದರು. ಇನ್ನೂ ಕೆಲವರು ವಾಹನದಲ್ಲಿ ಊಟ ತಯಾರಿಸಿಕೊಂಡು ಬಂದು ನೀಡಿದರು.

ಹುಲಗಿ ಕ್ರಾಸ್‌, ಹಿಟ್ನಾಳ ಕ್ರಾಸ್‌, ಅಗಳಕೇರಾ, ಹೊಸ ಶಿವಪುರ, ಹೊಸ ಬಂಡಿ ಹರ್ಲಾಪುರ, ಹಳೇ ಬಂಡಿ ಹರ್ಲಾಪುರ, ಬಸಾಪುರ, ತಿರುಮಲಾ ಪುರ, ಸಣಾಪುರ, ವಿರೂಪಾಪುರ ಗಡ್ಡೆ ಹಾಗೂ ಹನುಮನಹಳ್ಳಿ ಗ್ರಾಮಗಳಲ್ಲಿ ರಸ್ತೆ ಬದಿಗಳಲ್ಲಿ ಟೆಂಟ್‌ಗಳನ್ನು ಹಾಕಿ ವಿವಿಧ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ಉಚಿತವಾಗಿ ಊಟದ ವ್ಯವಸ್ಥೆ ಮಾಡಿದ್ದರಿಂದ ಮಾಲಾಧಾರಿಗಳಿಗೆ ಪಾದಯಾತ್ರೆಯ ವೇಳೆ ಆಹಾರದ ಸಮಸ್ಯೆ ಕಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.