ಕಡತ
(ಸಾಂದರ್ಭಿಕ ಚಿತ್ರ)
ಕುಷ್ಟಗಿ: ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳನ್ನು 12 ವರ್ಷಗಳವರೆಗೆ ಅನಧಿಕೃತವಾಗಿ ವ್ಯಾಪಾರಿಗಳಿಗೆ ಹಂಚಿಕೆ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಮೂಲ ಕಡತಗಳನ್ನು ಹಾಜರುಪಡಿಸುವಂತೆ ಹಿಂದಿನ ಮುಖ್ಯಾಧಿಕಾರಿ ಉಮೇಶ ಹಿರೇಮಠ ಹಾಗೂ ಇಲ್ಲಿಯ ಕಂದಾಯ ರಾಘವೇಂದ್ರ ಎಂಬುವವರಿಗೆ ನೋಟಿಸ್ ನೀಡಲಾಗಿದೆ.
ಈ ಕುರಿತು ಹಾಲಿ ಮುಖ್ಯಾಧಿಕಾರಿ ವೆಂಕಟೇಶ ಬೀಳಗಿ ಆ.4ರಂದು ನೋಟಿಸ್ ರವಾನಿಸಿದ್ದು 3 ದಿನಗಳ ಒಳಗಾಗಿ ಕಚೇರಿಗೆ ಕಡತಗಳನ್ನು ಸಲ್ಲಿಸುವಂತೆ ತಾಕೀತು ಮಾಡಿದ್ದಾರೆ. ದಾಖಲೆ ನೀಡದಿದ್ದರೆ ಮೇಲಧಿಕಾರಿಗಳಿಗೆ ವಿವರವಾದ ವರದಿ ಸಲ್ಲಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಅಕ್ರಮಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವಿಶೇಷ ವರದಿ ಕುರಿತು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ. ವರದಿ ಪ್ರಕಟವಾದ ನಂತರ ಇಲ್ಲಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ್ದ ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು ಈ ಬಗ್ಗೆ ವರದಿ ಸಲ್ಲಿಸುವಂತೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದರು.
ಠೇವಣಿ ಜಮೆಯಾಗಿದ್ದೆಲ್ಲಿ?: ಹಿಂದೆ ಮುಖ್ಯಾಧಿಕಾರಿ, ಸದ್ಯ ಹೂವಿನಹಡಗಲಿ ಪುರಸಭೆ ಸಮುದಾಯ ಸಂಘಟನಾಧಿಕಾರಿಯಾಗಿರುವ ಉಮೇಶ ಹಿರೇಮಠ ಅವರಿಗೆ ನೀಡಿರುವ ನೋಟಿಸ್‌ದಲ್ಲಿ ಹಲವು ಕರ್ತವ್ಯ ಲೋಪಗಳನ್ನು ಪ್ರಸ್ತಾಪಿಸಲಾಗಿದೆ.
ಕೇವಲ ₹2,600 ತೀರಾ ಕಡಿಮೆ ದರದಲ್ಲಿ 2034ನೇ ವರ್ಷದ ವರೆಗೆ ಒಟ್ಟು 8 ಮಳಿಗೆಗಳನ್ನು ಲೀಸ್ ಮೂಲಕ ಹಂಚಿಕೆ ಮಾಡಲಾಗಿದೆ. ಬಾಡಿಗೆಗೆ ಮಳಿಗೆಗಳ ಹಂಚಿಕೆ ಪತ್ರದಲ್ಲಿ ಹಿಂತಿರುಗಿಸಬಹುದಾದ ₹1 ಲಕ್ಷ ಠೇವಣಿ ಇಡುವಂತೆ ಆದೇಶಪತ್ರದಲ್ಲಿ ವಿವರಿಸಿದ್ದೀರಿ. ಆದರೆ ಠೇವಣಿ ಮೊತ್ತ ಪುರಸಭೆಗೆ ಜಮೆಯಾಗಿಲ್ಲ. ಅಲ್ಲದೆ ಆದೇಶ ಪತ್ರದಲ್ಲಿ ಸಾಮಾನ್ಯ ಸಭೆಯಲ್ಲಿನ ನಡಾವಳಿಯಲ್ಲಿ ನಿರ್ಧರಿಸಿದಂತೆ ಎಂದು ನಮೂದಿಸಲಾಗಿದೆ ಆದರೆ ಆ ದಿನದ ಸಭೆಯ ಠರಾವಿನಲ್ಲಿ ಮಳಿಗೆ ಹಂಚಿಕೆ ವಿಚಾರವೇ ನಮೂದಾಗಿಲ್ಲ. ಮಳಿಗೆ ಹಂಚಿಕೆ ಸಂಬಂಧಿತ ಯಾವ ದಾಖಲೆಗಳೂ ಪುರಸಭೆಯಲ್ಲಿ ಲಭ್ಯವಿಲ್ಲ. ಅಲ್ಲದೆ ಈ ಕಡತಗಳ ಬಗ್ಗೆ ಮಾಹಿತಿ ಇಲ್ಲ ಎಂದು ಕಂದಾಯ ನಿರೀಕ್ಷಕ ರಾಘವೇಂದ್ರ ತಿಳಿಸಿದ್ದಾರೆ ಎಂದು ವಿವರಿಸಲಾಗಿದೆ.
ಅದೇ ರೀತಿ ಕಂದಾಯ ನಿರೀಕ್ಷಕ ರಾಘವೇಂದ್ರ ಎಂಬುವವರಿಗೆ ನೀಡಿದ ನೋಟಿಸ್‌ನಲ್ಲಿ ‘ಮಳಿಗೆ ಹಂಚಿಕೆ ಕುರಿತ ಯಾವುದೇ ದಾಖಲೆ ಕಚೇರಿಯಲ್ಲಿಲ್ಲ, ಠರಾವು ಪುಸ್ತಕದಲ್ಲಿ ನಮೂದಿಸಿಲ್ಲ. ಈ ಕುರಿತು ಮಾಹಿತಿಗಾಗಿ ಸಂಪರ್ಕಿಸಿದರೆ ನೀವು ದೂರವಾಣಿ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಈ ನೋಟಿಸ್ ತಲುಪಿದ ಮೂರು ದಿನಗಳಲ್ಲಿ ಕಡತಗಳನ್ನು ಹಾಜರುಪಡಿಸಬೇಕು’ ಎಂದು ಸೂಚಿಸಲಾಗಿದೆ.
ನಕಲಿ ಆದೇಶ: ಈ ಮಧ್ಯೆ ‘ಪ್ರಜಾವಾಣಿ’ಗೆ ಬಂದಿರುವ ಮಾಹಿತಿ ಪ್ರಕಾರ ಹಿಂದಿನ ಮುಖ್ಯಾಧಿಕಾರಿ ನೀಡಿದ ಆದೇಶವೇ ನಕಲಿಯಾಗಿದೆ, ವ್ಯಾಪಾರಿಗಳು, ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಅಧಿಕಾರಿ, ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ಹೆಸರು ಪ್ರಕಟಿಸಲು ಇಚ್ಚಿಸದ ಪುರಸಭೆ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ ಮಳಿಗೆ ಬಾಡಿಗೆ ಪಡೆದ ಎಂಟು ಜನ ವ್ಯಾಪಾರಿಗಳು ತಲಾ ರೂ 1 ಲಕ್ಷ ಠೇವಣಿ ಹಣ ಮೊತ್ತ ಪಾವತಿಸಿದ್ದರೆ ಅದು ಜಮೆಯಾಗಿದ್ದು ಯಾರ ಬಳಿ? ಎಂಬುದು ಚರ್ಚೆಗೆ ಗ್ರಾಸ ಒದಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.