ADVERTISEMENT

ಪರಿಹಾರಧನದ ಸದ್ಬಳಕೆಗೆ ಸಲಹೆ

ಪರಿಹಾರಧನದ ಚೆಕ್ ವಿತರಿಸಿದ ಶಾಸಕ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 2:26 IST
Last Updated 12 ಅಕ್ಟೋಬರ್ 2021, 2:26 IST
ಭಾಲ್ಕಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಈಶ್ವರ ಖಂಡ್ರೆ ಅವರು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ತಲಾ ₹5 ಲಕ್ಷದ ಪರಿಹಾರ ಧನದ ಚೆಕ್ ವಿತರಿಸಿದರು
ಭಾಲ್ಕಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಈಶ್ವರ ಖಂಡ್ರೆ ಅವರು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ತಲಾ ₹5 ಲಕ್ಷದ ಪರಿಹಾರ ಧನದ ಚೆಕ್ ವಿತರಿಸಿದರು   

ಭಾಲ್ಕಿ: ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಮಾಡಿದ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬ ಸದಸ್ಯರಿಗೆ ಶಾಸಕ ಈಶ್ವರ ಖಂಡ್ರೆ ಅವರು ಪರಿಹಾರ ಧನದ ಚೆಕ್ ವಿತರಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ಆತ್ಮಹತ್ಯೆ ಪರಿಹಾರ ಯೋಜನೆಯಡಿ ಮಂಜೂರಾದ ಚೆಕ್‍ಗಳನ್ನು ಮೃತರ ನಾಲ್ವರು ಕುಟುಂಬ ಸದಸ್ಯರಿಗೆ ₹5 ಲಕ್ಷ ಮತ್ತು ಹಾವು ಕಡಿತದಿಂದ ಮೃತಪಟ್ಟ ಕುಟುಂಬಕ್ಕೆ ₹2 ಲಕ್ಷದ ಪರಿಹಾರದ ಚೆಕ್‍ಗಳನ್ನು ವಿತರಿಸಿದರು.

ಬಳಿಕ ಮಾತನಾಡಿದ ಅವರು,‘ಸಾಲಕ್ಕೆ ಹೆದರಿ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಏನೇ ಸಂಕಷ್ಟ, ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ ನಾನೂ ಪರಿಹರಿಸುವ ಪ್ರಯತ್ನ ಮಾಡುತ್ತೇನೆ’ ಎಂದು ರೈತರಿಗೆ ಅಭಯ ನೀಡಿದರು.

ADVERTISEMENT

ಸರ್ಕಾರ ಕೃಷಿಕರಿಗಾಗಿ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಅವುಗಳ ಸದುಪಯೋಗ ಪಡೆದು ಕೊಳ್ಳಬೇಕು. ಕೃಷಿ ಮಾಡುವ ರೈತರು ಕೃಷಿ ಇಲಾಖೆ ಸೇರಿ, ಅನುಭವಿಗಳ ಮಾರ್ಗದರ್ಶನ, ಸಹಾಯ, ಸಹಕಾರ ಪಡೆದು ಉಳಿಮೆ ಮಾಡಿದರೇ ಸಾಲ, ಹಾನಿಯಾಗುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಆ ಕಾರಣಕ್ಕಾಗಿ ರೈತರು ಇರುವ ಭೂಮಿಯಲ್ಲಿ ಬುದ್ಧಿವಂತಿಕೆಯಿಂದ ಕೃಷಿ ಮಾಡಬೇಕು ಎಂದರು.

ಸಾಲ ಮತ್ತು ಸ್ವಾಭಿಮಾನಕ್ಕೆ ಹೆದರಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಬೇಸರ ತರಿಸಿದೆ. ಇನ್ನಾದರೂ ಮುಂದೆ ಇಂಥ ಪ್ರಕರಣಗಳಿಗೆ ಕಡಿವಾಣ ಬೀಳಲಿ. ಮೃತ ರೈತರ ಕುಟುಂಬ ಸದಸ್ಯರು ವಾರಸುದಾರ ಇಲ್ಲದೇ ಜೀವನ ಹೇಗೆ ಚಿಂತೆ ಮಾಡಬಾರದು. ನಿಮ್ಮೊಂದಿಗೆ ನಾವಿದ್ದೇವೆ. ಸರ್ಕಾರದಿಂದ ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಮಂಜೂರು ಮಾಡಿಸಿ ಚೆಕ್ ವಿತರಿಸಿದ್ದೇನೆ. ಪರಿಹಾರದ ಧನವನ್ನು ಮಕ್ಕಳ ವಿದ್ಯಾಭ್ಯಾಸ, ಮದುವೆ ಸೇರಿ ಮತ್ತಿತರ ಒಳ್ಳೆಯ ಕಾರ್ಯಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೂಪಾ ಎಂ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.