ADVERTISEMENT

ಕೊಪ್ಪಳ: ಸದಾಶಿವ ವರದಿ ಜಾರಿಗೆ 14ರಂದು ಸಮಾವೇಶ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 13:57 IST
Last Updated 3 ಫೆಬ್ರುವರಿ 2023, 13:57 IST

ಕೊಪ್ಪಳ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಮತ್ತು ಕೇಂದ್ರ ಸರ್ಕಾರ ಕೂಡಲೇ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿ ಫೆ. 14ರಂದು ಬೆಂಗಳೂರಿನ ಫ್ರೀಂ ಪಾರ್ಕ್‌ನಲ್ಲಿ ಸಮಾವೇಶ ನಡೆಯಲಿದೆ.

ಈ ಕುರಿತು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಳ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಕರಿಯಪ್ಪ ಗುಡಿಮನಿ ‘ಮಾದಿಗ, ಚಲವಾದಿ ತ್ರಿಮತಸ್ಥ ಚರ್ಮಕಾರರು, ಅಲೆಮಾರಿ ಸಮುದಾಯಗಳ ಸಮಾವೇಶ ಜರುಗಲಿದ್ದು, ಆದಷ್ಟು ಬೇಗನೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.

‘ಹಿಂದುಳಿದ ವರ್ಗಗಳ ಕಾಂತರಾಜ ವರದಿ ಬಹಿರಂಗ ಮಾಡಿ, ಯಥಾವತ್ತಾಗಿ ಜಾರಿ ಮಾಡಬೇಕು‌. ಎಲ್ಲ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಗಳಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಮತ್ತು ಚಲವಾದಿಗಳ ಜನಸಂಖ್ಯೆಗೆ ತಕ್ಕಂತೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು’ ಎಂದರು.

ADVERTISEMENT

‘ರಾಜ್ಯದಲ್ಲಿರುವ 43 ಸಾವಿರ ಪೌರ ಕಾರ್ಮಿಕರು ಮತ್ತು ವಾಹನ ಚಾಲಕರನ್ನು ಕಾಯಂ ಮಾಡಬೇಕು. ಸದಾಶಿವ ವರದಿ ಜಾರಿಗೆ ಹೋರಾಡಿದ ಹೋರಾಟಗಾರರ ಮೇಲೆ ಹೂಡಿದ್ದ ಎಲ್ಲ ಪ್ರಕರಣಗಳನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ರಾಯಚೂರಿನ ಎಲ್‌.ವಿ.ಸುರೇಶ, ಡೇವಿಡ್ ಸಿರವಾರ, ಮಲ್ಲಿಕಾರ್ಜುನ ಪೂಜಾರ, ಯಲ್ಲಪ್ಪ ಹಳೇಮನಿ, ಓಬಳೇಶ ಸಿಂದೋಗಿ, ಮರಿಯಪ್ಪ ದದೇಗಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.