ADVERTISEMENT

’ಕಾಂಗ್ರೆಸ್‌ ರಾಜಕೀಯ ಪಕ್ಷವಲ್ಲ, ವಿಸರ್ಜನೆಗೆ ಸಕಾಲ’

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 3:33 IST
Last Updated 5 ಜುಲೈ 2021, 3:33 IST

ಕುಷ್ಟಗಿ: ‘ಕಾಂಗ್ರೆಸ್‌ ರಾಜಕೀಯ ಪಕ್ಷ ಅಲ್ಲ. ಸ್ವಾತಂತ್ರ್ಯ ಹೋರಾಟಕ್ಕಾಗಿ ಕಟ್ಟಿಕೊಂಡ ಸಂಘಟನೆ. ಹೀಗಾಗಿ ಅದನ್ನು ಸ್ವಾತಂತ್ರ್ಯ ನಂತರ ವಿಸರ್ಜಿಸಲು ಮಹಾತ್ಮ ಗಾಂಧಿ ಹೇಳಿದ್ದರು. ಆಗ ಆಗಲಿಲ್ಲ. ಈಗ ಅದಕ್ಕೆ ಕಾಲ ಕೂಡಿಬಂದಿದೆ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

‘ಪರಿಶಿಷ್ಟರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರನ್ನು ಮತಬ್ಯಾಂಕ್‌ ಮಾಡಿಕೊಂಡು ಕಾಂಗ್ರೆಸ್‌ ಆರು ದಶಕ ಆಡಳಿತ ನಡೆಸಿದೆ’ ಎಂದು ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

‘ಜನರು ಪಕ್ಷದಿಂದ ದೂರವಾಗುತ್ತಿದ್ದು, ಇಡೀ ದೇಶದಲ್ಲಿ ಕಾಂಗ್ರೆಸ್‌ ಅನಾಥ ಸ್ಥಿತಿ ಎದುರಿಸುತ್ತಿದೆ. ಇತ್ತೀಚಿನ ಪಂಚ ರಾಜ್ಯಗಳ ಚುನಾವಣೆಯಲ್ಲೂ ಕಾಂಗ್ರೆಸ್‌ ಎಲ್ಲಿಯೂ ಅಧಿಕಾರಕ್ಕೆ ಬರಲಿಲ್ಲ’ ಎಂದರು.

ADVERTISEMENT

‘ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಎದುರು ಮುಖ್ಯಮಂತ್ರಿಯವರ ಬದಲಾವಣೆಯ ವಿಚಾರ ಇಲ್ಲ. ಮುಂದಿನ ಎರಡು ವರ್ಷ ಯಡಿಯೂರಪ್ಪ ನೇತೃತ್ವದಲ್ಲೇ ಸರ್ಕಾರ ನಡೆಯಲಿದೆ’ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರಿಶಿಷ್ಟರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‘ಸಾಮಾಜಿಕ ಕಳಕಳಿ ಎಲ್ಲಿಯವರೆಗೆ ಬರುವುದಿಲ್ಲವೊ ಅಲ್ಲಿಯವರೆಗೂ ಇಂಥ ಘಟನೆಗಳು ನಡೆಯುತ್ತವೆ. ಆದರೂ ಸರ್ಕಾರ ಕೈಕಟ್ಟಿ ಕೂತಿಲ್ಲ. ವಿಶೇಷ ಕಾನೂನು ಮತ್ತು ನ್ಯಾಯಾಲಯಗಳ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ನೊಂದವರಿಗೆ ಪರಿಹಾರ ನೀಡಲಾಗುತ್ತದೆ. ಕೆಲ ಪ್ರಕರಣಗಳಲ್ಲಿ ತನಿಖೆ ವಿಳಂಬವಾಗಿರಬಹುದು ಅಷ್ಟೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.