ADVERTISEMENT

ಒಂದಲ್ಲ, ಮೂರು ಕಾರ್ಖಾನೆಗಳ ಜೊತೆ ಸರ್ಕಾರ ಒಪ್ಪಂದ

ಕಾರ್ಖಾನೆಗಳಿಂದ ಮಾಲಿನ್ಯ: ಅನುಪಾಲನಾ ವರದಿ ಸಲ್ಲಿಸುವಂತೆ ಕೈಗಾರಿಕೆಗಳಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 6:05 IST
Last Updated 12 ಮಾರ್ಚ್ 2025, 6:05 IST
   

ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪದಲ್ಲಿಯೇ ಬಲ್ಡೋಟಾ ಸಂಸ್ಥೆ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಉಕ್ಕಿನ ಕಾರ್ಖಾನೆಯನ್ನು ವಿಸ್ತರಣೆ ಮಾಡಲು ಮುಂದಾಗಿದ್ದಕ್ಕೆ ಈಗಾಗಲೇ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಇದೊಂದೇ ಮಾತ್ರವಲ್ಲ; ಕೊಪ್ಪಳ ತಾಲ್ಲೂಕಿನಲ್ಲಿ ಇನ್ನೆರೆಡು ಕಾರ್ಖಾನೆಗಳ ಜೊತೆಗೂ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿರುವ ಸಂಗತಿ ಈಗ ಬಯಲಾಗಿದೆ.

ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಅವರು ಪರಿಷತ್‌ನಲ್ಲಿ ಮಂಗಳವಾರ ಈ ಕುರಿತು ಕೇಳಿದ ಪ್ರಶ್ನೆಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಲಿಖಿತ ಉತ್ತರ ನೀಡಿದ್ದಾರೆ.

ಬಲ್ಡೋಟಾ ಸ್ಟೀಲ್‌ ಮತ್ತು ಪವರ್‌ ಲಿಮಿಟೆಡ್‌ ಕಂಪನಿ ಜೊತೆ ಸರ್ಕಾರ ₹54 ಸಾವಿರ ಕೋಟಿ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ 15 ಸಾವಿರ ಜನರಿಗೆ ಉದ್ಯೋಗ ಲಭಿಸುತ್ತದೆ ಎಂದು ಸರ್ಕಾರ ಹೇಳಿದೆ. ಕಿರ್ಲೋಸ್ಕರ್‌ ಫೆರಸ್‌ ಲಿಮಿಟೆಡ್‌ ಜೊತೆ ₹3 ಸಾವಿರ ಕೋಟಿ ಹೂಡಿಕೆಗೆ ಮತ್ತು ಸೆರೆನಾಟಿಕಾ ರಿನಿವಬಲ್ಸ್‌ ಇಂಡಿಯಾ ಪ್ರವೈಟ್‌ ಲಿಮಿಟೆಡ್‌ ಜೊತೆ ₹43,975 ಕೋಟಿ ಒಪ್ಪಂದ ಮಾಡಿಕೊಳ್ಳಲಾಗಿದೆ.

ADVERTISEMENT

ಈಗಿರುವ ಕಾರ್ಖಾನೆಗಳಿಂದ ಬರುತ್ತಿರುವ ಕಪ್ಪು ದೂಳಿನಿಂದಾಗಿ ಜನರ ಬದುಕು ದುರ್ಬರವಾಗಿದೆ. ಮತ್ತಷ್ಟು ಕಾರ್ಖಾನೆ ಬಂದರೆ ಕೊಪ್ಪಳವನ್ನೇ ಸ್ಥಳಾಂತರ ಮಾಡಬೇಕಾಗುತ್ತದೆ ಎಂದು ಕೊಪ್ಪಳ ಜನಾಂದೋಲನ ಬಚಾವೊ ಸಮಿತಿ ಮತ್ತು ಕೊಪ್ಪಳ ಹಿತರಕ್ಷಣಾ ವೇದಿಕೆ ಈ ಕುರಿತು ನಿರಂತರ ಹೋರಾಟಗಳನ್ನು ಮಾಡುತ್ತಿವೆ.

‘ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಮೂರು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ಬಲ್ಡೋಟಾ ಕಂಪನಿ ಜೊತೆ ಎಂಒಯು ಆಗಿದೆ’ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ.

ತಂಡ ರಚನೆ: ಹಾಲಿ ಕಾರ್ಖಾನೆಗಳಿಂದ ಈಗಾಗಲೇ ಸಾಕಷ್ಟು ದೂಳು ಬರುತ್ತಿದೆ. ಈ ವಿಷಯ ಸರ್ಕಾರದ ಗಮನಕ್ಕೆ ಇದೆಯೇ? ಆದರೂ ಕೈಗಾರಿಕೆಗಳ ವಿಸ್ತರಣೆಗೆ ಅವಕಾಶ ನೀಡಲು ಕಾರಣವೇನು ಎನ್ನುವ ಹೇಮಲತಾ ನಾಯಕ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು ‘ಬಲ್ಡೋಟಾ ಗ್ರೂಪ್‌ ಸಂಸ್ಥೆಯ ಎಂಎಸ್‌ಪಿಎಲ್‌ ಕೈಗಾರಿಕೆ ಒಳಗೊಂಡಂತೆ ಇತರೆ ಕೈಗಾರಿಕೆಗಳಿಂದ ಮಾಲಿನ್ಯವಾಗುತ್ತಿರುವ ಬಗ್ಗೆ ಅಧ್ಯಯನ ನಡೆಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಂಡ ಕೈಗಾರಿಕೆಗಳನ್ನು ವೀಕ್ಷಣೆ ಮಾಡಿದ್ದು, ಈ ತಂಡದ ವರದಿಯನ್ನಾಧರಿಸಿ ಸಂಬಂಧಪಟ್ಟ ಕೈಗಾರಿಕೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.