ಕೊಪ್ಪಳ: ಜಿಲ್ಲೆಯಲ್ಲಿ ಹಲವು ಸಮಾನ ಮನಸ್ಕ ರೈತರು ಸೇರಿಕೊಂಡು ಐದು ವರ್ಷಗಳಿಂದ ಪ್ರತಿ ಬಾರಿ ಒಬ್ಬೊಬ್ಬ ರೈತನ ತೋಟದಲ್ಲಿ ನಡೆಸಿಕೊಂಡು ಬರುತ್ತಿರುವ ‘ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ.
ಈ ಕಾರ್ಯಕ್ರಮದಲ್ಲಿ ಸಾವಯವ ಬೇಸಾಯದ ಅನುಭವಗಳ ಹಂಚಿಕೊಳ್ಳಲಾಗುತ್ತಿದೆ. ರೈತರಿಗಾಗಿ ರೈತರೇ ಕಾರ್ಯಕ್ರಮ ನಡೆಸುವುದರಿಂದ ಸುಸ್ಥಿರ ಕೃಷಿಯ ವಿವಿಧ ಆಯಾಮಗಳ ಬಗ್ಗೆಯೂ ಚರ್ಚೆಯಾಗುತ್ತಿದೆ.
ಮಣ್ಣಿನ ಸಂರಕ್ಷಣೆಯೊಂದಿಗೆ ರೈತನ ಸಮಸ್ಯೆಗಳನ್ನೂ ದೂರ ಮಾಡುವ ಉದ್ದೇಶದಿಂದ 2020ರ ಫೆಬ್ರುವರಿ 23ರಂದು ಕೊಪ್ಪಳ ತಾಲ್ಲೂಕಿನ ಕಾಮನೂರು ಗ್ರಾಮದಲ್ಲಿ ಮೊದಲ ಕಾರ್ಯಕ್ರಮ ನಡೆಯಿತು. ಮಣ್ಣು, ನೀರು, ಪರಿಸರ ಹಾಗೂ ಶುದ್ಧ ಆಹಾರದ ಬಗ್ಗೆ ಕಾಳಜಿಯುಳ್ಳ ಹತ್ತು ಜನ ರೈತರು ಆರಂಭದಲ್ಲಿ ‘ಸಮಾನಮನಸ್ಕರ ಅನೌಪಚಾರಿಕ ವೇದಿಕೆ’ ಎನ್ನುವ ಹೆಸರಿಟ್ಟುಕೊಂಡು ‘ಮಣ್ಣಿನೊಂದಿಗಿನ ಮಾತುಕತೆ’ ಆರಂಭಿಸಿದರು. ನಾಲ್ಕನೇ ಕಾರ್ಯಕ್ರಮದ ವೇಳೆಗೆ 100ಕ್ಕೂ ಹೆಚ್ಚು ರೈತರು ಪಾಲ್ಗೊಂಡರು. ಇದರಿಂದ ಪ್ರೇರಣೆ ಪಡೆದ ಅನೇಕರು ನೆರೆ ಜಿಲ್ಲೆಗಳಲ್ಲಿಯೂ ಇದೇ ರೀತಿಯ ಕಾರ್ಯಕ್ರಮ ಆರಂಭಿಸಿದ್ದಾರೆ.
ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮಣ್ಣು ವಿಶೇಷಜ್ಞ ‘ಸಾಯಿಲ್’ ವಾಸು, ಪರಿಸರವಾದಿ ಶಿವಾನಂದ ಕಳವೆ, ಅಂತರ್ಜಲ ಸಂರಕ್ಷಕ ಚನ್ನಬಸಪ್ಪ ಕೊಂಬಳಿ, ಸಾಂಪ್ರದಾಯಿಕ ಜಲರಚನೆ ತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ, ಕೃಷಿ ಪ್ರವಾಸೋದ್ಯಮಿ ಪಂಪಯ್ಯ ಮಳಿಮಠ, ಜೇನು ಕೃಷಿಕ ಶ್ರೀಪಾದ, ಅಕ್ಕಡಿ ಪದ್ಧತಿ ತಜ್ಞ ಪ್ರಭಾಕರ ಬುಡ್ಡಪ್ಪ, ದೇಸಿ ತಳಿ ಸಂರಕ್ಷಕ ದೇವೇಂದ್ರಪ್ಪ ಭೋಯಿ ಹೀಗೆ ಅನೇಕರು ಬಂದು ರೈತರ ಸಮಸ್ಯೆಗಳಿಗೆ ಉತ್ತರ ಒದಗಿಸಿದರು.
‘ಮಣ್ಣಿನೊಂದಿಗೆ ಮಾತುಕತೆ’ ತಂಡದ ಭಾಗವಾಗಿ ‘ಕೊಪ್ಪಳ ಸಾವಯವ ಕೃಷಿಕರ ಬಳಗ’ ಸ್ಥಾಪನೆಯಾಯಿತು. ಈ ತಂಡದ ಸದಸ್ಯರು ಆಗಾಗ್ಗೆ ಕೃಷಿ ಅಧ್ಯಯನ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹಿಂದಿನ ಎಲ್ಲ 24 ಕಾರ್ಯಕ್ರಮಗಳಿಗೆ ಸರ್ಕಾರ, ಖಾಸಗಿ ಸಂಸ್ಥೆಗಳು ಅಥವಾ ಇನ್ಯಾರಿಂದಲೂ ದೇಣಿಗೆ ಪಡೆಯದೇ ರೈತರೇ ಸ್ವಂತ ಹಣ ಹಾಕಿ ನಿರ್ವಹಣೆ ಮಾಡುತ್ತಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಕೊಪ್ಪಳ ಸಾವಯವ ಕೃಷಿಕರ ಬಳಗವು ಬೆಂಗಳೂರಿನ 'ಸಹಜ ಆರ್ಗ್ಯಾನಿಕ್'ಗೆ ಕಳೆದ ವರ್ಷ ಸುಮಾರು ₹ 80 ಲಕ್ಷ ಮೊತ್ತದ ಕೃಷಿ ಉತ್ಪನ್ನ ರವಾನೆ ಮಾಡಿರುವುದು ವಿಶೇಷ.
ರೈತರ ಅನುಭವಗಳನ್ನು ಕೇಳಲು ರೈತರೇ ಆರಂಭಿಸಿದ ಈ ವೇದಿಕೆಯ ಪ್ರತಿ ಆವೃತ್ತಿಗಳೂ ಅರ್ಥಪೂರ್ಣವಾಗಿ ನಡೆದಿವೆ. ಕೃಷಿಯಲ್ಲಿ ಹೊಸ ಪ್ರಯೋಗಗಳಿಗೆ ಪ್ರೇರೇಪಿಸಿವೆ.ಪಿ.ಆರ್ ಬದರಿಪ್ರಸಾದ್ ಸಹ ಪ್ರಾಧ್ಯಾಪಕರು ಕೀಟಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಗಂಗಾವತಿ
ಕಾರ್ಯಕ್ರಮಕ್ಕೆ ರೈತರೇ ಸ್ವಯಂ ಪ್ರೇರಣೆಯಿಂದ ಬರುತ್ತಾರೆ. ರೈತರಿಂದ ರೈತರಿಗಾಗಿ ರೈತರಿಗೋಸ್ಕರ ನಡೆಯುತ್ತದೆ. ಹೊಸ ವಿಷಯ ಕಲಿಯಲು ಸಹಕಾರಿಯಾಗುತ್ತದೆ.ಶ್ರೀಪಾದ ಮುರಡಿ 25ನೇ ಆವೃತ್ತಿಯ ಆತಿಥ್ಯ ವಹಿಸಿರುವ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.