ADVERTISEMENT

ಕೂಲಿ ಮಾಡಿ ಆರ್ಥಿಕವಾಗಿ ಸಬಲರಾಗಿ: ರೋಜಗಾರ್ ದಿನಾಚರಣೆ: ಸಂಯೋಜಕ ಸಂತೋಷ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 14:09 IST
Last Updated 29 ಫೆಬ್ರುವರಿ 2020, 14:09 IST
ಕೊಪ್ಪಳ ತಾಲ್ಲೂಕಿನ ಲೇಬಗೇರಿ ಗ್ರಾಮದ ಹತ್ತಿರ ಇರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಶುಕ್ರವಾರ ರೋಜಗಾರ್ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿಯ ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ ಮಾತನಾಡಿದರು
ಕೊಪ್ಪಳ ತಾಲ್ಲೂಕಿನ ಲೇಬಗೇರಿ ಗ್ರಾಮದ ಹತ್ತಿರ ಇರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಶುಕ್ರವಾರ ರೋಜಗಾರ್ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿಯ ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ ಮಾತನಾಡಿದರು   

ಕೊಪ್ಪಳ: ಪ್ರತಿಯೊಬ್ಬ ಕೂಲಿಕಾರರು ಗುಳೆ ಹೋಗದೇ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕೂಲಿ ಕೆಲಸ ನಿರ್ವಹಿಸಿ, ಕೂಲಿ ಪಡೆದು ಆರ್ಥಿಕ ಸಬಲರಾಗಬೇಕು ಎಂದು ತಾಲ್ಲೂಕು ಪಂಚಾಯಿತಿಯ ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ ಹೇಳಿದರು.

ತಾಲ್ಲೂಕಿನ ಲೇಬಗೇರಿ ಗ್ರಾಮದ ಹತ್ತಿರ ಇರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಶುಕ್ರವಾರಲೇಬಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಐಇಸಿ ಕಾರ್ಯಕ್ರಮದ ಅಡಿ ರೋಜಗಾರ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಖಾತ್ರಿ ಯೋಜನೆಯ ಮಾರ್ಗಸೂಚಿ ಪ್ರಕಾರ ಪ್ರತಿ ದಿನಕ್ಕೆ ₹ 249 ನಿಗದಿಪಡಿಸಿದ್ದು, ಪ್ರತಿಯೊಬ್ಬ ಕೂಲಿಕಾರನು ಅಳತೆಗನುಗುಣವಾಗಿ ಕೆಲಸ ನಿರ್ವಹಿಸಿದಲ್ಲಿ ಅವರಿಗೆ ₹ 249 ಕೂಲಿ ಹಣ ಪಾವತಿಸಲಾಗುತ್ತದೆ. ಕಡಿಮೆ ಅಳತೆ ಬಂದಲ್ಲಿ ಅವರ ಕೆಲಸದ ಅಳತೆ ತಕ್ಕಂತೆ ಕೂಲಿ ಹಣ ಪಾವತಿಸಲಾಗುವುದು. ಕಾಮಗಾರಿ ನಡೆದ ಸಂದರ್ಭದಲ್ಲಿ ಪ್ರತಿಯೊಬ್ಬರು ಬಹಳ ಜಾಗೃತೆಯಿಂದ ಕೂಲಿ ಕೆಲಸ ನಿರ್ವಹಿಸಬೇಕು. ಗುದ್ದಲಿ, ಸಲಿಕೆಯಿಂದ ಕೆಲಸ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಎಲ್ಲರೂ ಜಾಗೃತರಾಗಿರಬೇಕು ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿಯ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಎಂಜಿಎನ್‍ಆರ್‌ಇಜಿಎ ಯೋಜನೆಯ ಅಡಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಿಂದ ಶೇ 60ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಲು ಹಲವಾರು ಕಾಮಗಾರಿಗಳ ವಿಧಗಳನ್ನು ಜಾರಿಗೆತರಲಾಗಿದೆ ಎಂದರು.

ಪ್ರಸಕ್ತ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕೂಲಿಕಾರರಿಗೆ ಕೂಲಿ ಕೆಲಸ ಒದಗಿಸಲು ನಮೂನೆ-6 ಭರ್ತಿ ಮಾಡುವುದು, ಕಾಮಗಾರಿ ಸ್ಥಳದಲ್ಲಿ ಅಳತೆ ನೀಡುವುದು, ಅಳತೆ ಪಡೆಯುವುದು, ಹಾಜರಿ ತೆಗೆದುಕೊಳ್ಳುವುದು, ಕೂಲಿಕಾರರಿಗೆ ಕೂಲಿ ಹಣ ಜಮಾ ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು ಹೀಗೆ ಮುಂತಾದವುಗಳ ಕುರಿತು 30-35 ಜನರ ಒಂದು ತಂಡಕ್ಕೆ ಒಬ್ಬ ಕಾಯಕ ಬಂಧು ನೇಮಿಸಲಾಗುತ್ತಿದ್ದು, ಇವರು ಗ್ರಾಮ ಪಂಚಾಯಿತಿ ಮತ್ತು ಕೂಲಿಕಾರರ ನಡುವೆ ಸಮನ್ವಯ ಸಾಧಿಸಲು ಕೂಲಿಕಾರರು ತಮ್ಮಲ್ಲಿ ಅಂತಹವರನ್ನು ನೇಮಿಸಕೊಳ್ಳಲಾಗುತ್ತಿದೆ. ಎಲ್ಲ ಕೂಲಿಕಾರರು ಅವರಿಗೆ ಸಹಕಾರ ನೀಡಿ, ಪ್ರತಿಯೊಬ್ಬರು ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸಂಗಮೇಶ ತೇರಿನ, ತಾಂತ್ರಿಕ ಸಹಾಯಕ ಮಂಜುನಾಥ ಮೇಟಿ, 53 ಜನ ಕೂಲಿಕಾರರು, ಕಾಯಕ ಬಂಧು ಅಂಬಮ್ಮ, ಗ್ರಾಮ ಪಂಚಾಯಿತಿ ಸಿಬ್ಬಂದಿ ಬಸವರಾಜ, ನಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.