ADVERTISEMENT

ಸಮಾಜಕ್ಕಂಟಿದ ರೋಗ ಭ್ರಷ್ಟಾಚಾರ: ಎಸಿಬಿ ಬಳ್ಳಾರಿ ವಲಯ ಎಸ್‌ಪಿ ಗುರುನಾಥ ಮುತ್ತೂರು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 7:18 IST
Last Updated 23 ಅಕ್ಟೋಬರ್ 2021, 7:18 IST
ಕುಷ್ಟಗಿಯಲ್ಲಿ 'ಭ್ರಷ್ಟಾಚಾರ ತಡೆ ಜನಜಾಗೃತಿ' ಕಾರ್ಯಕ್ರಮದಲ್ಲಿ ಎಸಿಬಿ ಬಳ್ಳಾರಿ ವಲಯದ ಎಸ್‌ಪಿ ಗುರುನಾಥ ಮುತ್ತೂರು ಇತರರು ಇದ್ದರು
ಕುಷ್ಟಗಿಯಲ್ಲಿ 'ಭ್ರಷ್ಟಾಚಾರ ತಡೆ ಜನಜಾಗೃತಿ' ಕಾರ್ಯಕ್ರಮದಲ್ಲಿ ಎಸಿಬಿ ಬಳ್ಳಾರಿ ವಲಯದ ಎಸ್‌ಪಿ ಗುರುನಾಥ ಮುತ್ತೂರು ಇತರರು ಇದ್ದರು   

ಕುಷ್ಟಗಿ: ‘ಸಾಮಾಜಿಕ ಪಿಡುಗಾಗಿ ಪರಿಣಮಿಸಿರುವ ಭ್ರಷ್ಟಾಚಾರವನ್ನು ನಿಯಂತ್ರಿಸದಿದ್ದರೆ ಸಮಾಜ ರೋಗಗ್ರಸ್ತವಾಗಿ ದೇಶದ ಅಭಿವೃದ್ಧಿ ಕುಂಠಿತಗೊಳ್ಳುವ ಅಪಾಯವಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಬಳ್ಳಾರಿ ವಲಯದ ಎಸ್‌ಪಿ ಗುರುನಾಥ ಮುತ್ತೂರು ಹೇಳಿದರು.

ಭ್ರಷ್ಟಾಚಾರ ನಿಗ್ರಹ ದಳದ ಕೊಪ್ಪಳ ಠಾಣೆ ವತಿಯಿಂದ ಪಟ್ಟಣದ ಬಸವ ಭವನದಲ್ಲಿ ಏರ್ಪಡಿಸಿದ್ದ 'ಭ್ರಷ್ಟಾಚಾರ ತಡೆ ಜನಜಾಗೃತಿ' ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಮಾಜದಲ್ಲಿ ಆಳವಾಗಿ ಬೇರೂರಿ ರುವ ಭ್ರಷ್ಟಾಚಾರ ಎಲ್ಲಕಡೆಯೂ ಇದೆ ಎಂದು ವ್ಯವಸ್ಥೆಯನ್ನೇ ದೂಷಿಸುವ ಬದಲು ಮೊದಲು ಅದರಿಂದ ಮುಕ್ತರಾಗಿದ್ದೇವೆಯೆ ಎಂಬುದರ ಬಗ್ಗೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು, ಭ್ರಷ್ಟಾಚಾರ ನಿರ್ಮೂಲನೆಯ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಬದಲಾವಣೆಗೆ ಪ್ರಯತ್ನಿಸಬೇಕು. ಅದೇ ರೀತಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿರಬೇಕು‘ ಎಂದರು.

ADVERTISEMENT

ಭ್ರಷ್ಟಾಚಾರ ನಿರ್ಮೂಲನೆ ವಿಷಯದಲ್ಲಿ ಇನ್ನಷ್ಟು ಕಠಿಣ ಕಾನೂನುಗಳ ಜಾರಿಯ ಅಗತ್ಯವಿದೆ. ಲಂಚ ಪಡೆಯುವ ಭ್ರಷ್ಟ ಅಧಿಕಾರಿಗಳು ಸಮಾಜದಲ್ಲಿದ್ದಾರೆ. ಈ ವಿಷಯದಲ್ಲಿ ಚುನಾಯಿತ ಪ್ರತಿನಿಧಿಗಳೂ ಹೊರತಾಗಿಲ್ಲ, ಅಂಥವರಿಗೆ ಭಯದ ವಾತಾವರಣ ಸೃಷ್ಟಿಸಬೇಕು. ಸರ್ಕಾರದ ಸೇವಕರಾಗಿ ಕೆಲಸ ಮಾಡಲು ಹಿಂದೇಟು ಹಾಕುವ ಮತ್ತು ಅಕ್ರಮ ಸಂಪತ್ತು ಹೊಂದಿರುವವರ ಯಾರೇ ಇದ್ದರೂ ಅಂಥವರ ಬಗ್ಗೆ ಎಸಿಬಿಗೆ ಮಾಹಿತಿ ನೀಡಲು ಮುಂದಾದರೆ ದೂರುದಾರರ ಹೆಸರುಗಳನ್ನು ಗೋಪ್ಯವಾಗಿರಿಸಲಾಗುತ್ತದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಜಯರಾಂ ಚವ್ಹಾಣ ಮಾತನಾಡಿ, ಭ್ರಷ್ಟಾಚಾರವನ್ನು ಏಕಾಏಕಿಯಾಗಿ ತಹಬಂದಿಗೆ ತರುವುದಕ್ಕೆ ಸಾಧ್ಯವಾ ಗುವುದಿಲ್ಲ, ಭ್ರಷ್ಟಾಚಾರಕ್ಕೆ ಸಾರ್ವಜನಿಕರೂ ಕೈಜೋಡಿ ಸುತ್ತಿರುವುದು ಕಂಡುಬರುತ್ತಿದೆ. ಈ ಪಿಡುಗು ನಿಯಂತ್ರಣದಲ್ಲಿರುವ ಕೆಲ ದೇಶಗಳು ಅಭಿವೃದ್ಧಿ ವಿಷಯದಲ್ಲಿ ಮುಂಚೂಣಿಯಲ್ಲಿವೆ, ನಮ್ಮಲ್ಲಿಯೂ ಅಂಥ ವ್ಯವಸ್ಥೆ ಅಪೇಕ್ಷಣೀಯವಾಗಿದೆ. ಸಾರ್ವಜನಿಕ ಸೇವೆಯಲ್ಲಿ ಇರುವವರು ಸರ್ಕಾರದ ಹಣವನ್ನು ಮುಟ್ಟುವುದಿಲ್ಲ ಎಂಬ ಪ್ರತಿಜ್ಞೆ ಕೈಗೊಳ್ಳಬೇಕಿದೆ ಎಂದರು.

ಭ್ರಷ್ಟಾಚಾರ ನಿಗ್ರಹ ದಳ ಕೊಪ್ಪಳ ಠಾಣೆ ಡಿವೈಎಸ್‌ಪಿ ಎಂ.ಸಿ.ಶಿವಕುಮಾರ, ಇನ್‌ಸ್ಪೆಕ್ಟರ್ ಆಂಜನೇಯ ಮಾತನಾಡಿದರು.

ಉಪ ನೋಂದಣಾಧಿಕಾರಿ ಭರತೇಶ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ, ಇನ್‌ಸ್ಪೆಕ್ಟರ್ ಶಿವರಾಜ ಇಂಗಳೆ, ಸಿಬ್ಬಂದಿ ಸಿದ್ದಯ್ಯ ಹಿರೇಮಠ, ಆನಂದ್ ಬಸ್ತಿ, ಹೊನ್ನೂರಪ್ಪ ಯಮುನಾ ನಾಯಕ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.