ADVERTISEMENT

ಕೊರೊನಾ ಲಾಕ್‌ಡೌನ್‌: ಸ್ತಬ್ಧಗೊಂಡ ಜಿಲ್ಲೆ

ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತು ಖರೀದಿ: ಅನಗತ್ಯ ಸಂಚಾರಕ್ಕೆ ಪೊಲೀಸರ ತಡೆ, ಹಲವು ಕಡೆ ಸವಾರರಿಗೆ ದಂಡ, ವಾಹನ ಜಪ್ತಿ

​ಪ್ರಜಾವಾಣಿ ವಾರ್ತೆ
Published 11 ಮೇ 2021, 4:39 IST
Last Updated 11 ಮೇ 2021, 4:39 IST
ಕುಷ್ಟಗಿಯಲ್ಲಿ ಮಹಿಳಾ ವ್ಯಾಪಾರಿಗಳು ಸೈಕಲ್‌ ಬಂಡಿಯಲ್ಲಿ ತರಕಾರಿ ತೆಗೆದುಕೊಂಡು ಹೋದರು
ಕುಷ್ಟಗಿಯಲ್ಲಿ ಮಹಿಳಾ ವ್ಯಾಪಾರಿಗಳು ಸೈಕಲ್‌ ಬಂಡಿಯಲ್ಲಿ ತರಕಾರಿ ತೆಗೆದುಕೊಂಡು ಹೋದರು   

ಕೊಪ್ಪಳ: ಲಾಕ್‌ಡೌನ್‌ನ ಮೊದಲ ದಿನವಾದ ಸೋಮವಾರ ಜಿಲ್ಲೆಯಾದ್ಯಂತ ಜನಸಂಚಾರ ಸ್ತಬ್ಧಗೊಂಡಿತು.

ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಲು ಪೊಲೀಸರು ಲಾಠಿ ಸಮೇತ ರಸ್ತೆಗೆ ಇಳಿದಿದ್ದರಿಂದ ಜನರು ಭಯಭೀತರಾಗಿ ಹೊರಬಾರದೇ ಲಾಕ್‌ಡೌನ್‌ಗೆ ಸಹಕರಿಸಿದರು.

ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿ ಕೊಡಲಾಗಿತ್ತು. ಅಲ್ಲದೆ ನಡೆದುಕೊಂಡೇ ವಸ್ತುಗಳನ್ನು ಖರೀದಿಸುವಂತೆ ಸೂಚನೆ ನೀಡಿದ್ದರಿಂದ ಜನರು ಮತ್ತಷ್ಟು ಪರದಾಡುವಂತೆ ಆಯಿತು.

ADVERTISEMENT

ನಗರ ಪ್ರವೇಶಿಸುವ ಎಲ್ಲ ಮಾರ್ಗಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಪಾಸಣೆ ಆರಂಭಿಸಿದರು. ಜಿಲ್ಲಾ ಕ್ರೀಡಾಂಗಣದ ಬಳಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. 10 ಗಂಟೆಯ ನಂತರ ಶೇ 90ರಷ್ಟು ವಾಹನಗಳು ನಿಂತಲ್ಲೇ ನಿಂತುಕೊಂಡು ಮುಂದೆ ಸಾಗದೇ ಸ್ತಬ್ಧಗೊಂಡಿತು.

ವಾಹನಗಳ ಜಪ್ತಿ: ಸಂಚಾರ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಸಂಚಾರ ನಡೆಸುತ್ತಿದ್ದ ವಾಹನಗಳನ್ನು ತಡೆದು ದಂಡ ವಿಧಿಸಲಾಯಿತು. ಕೆಲವು ವಾಹನಗಳನ್ನು ಜಪ್ತಿ ಮಾಡಲಾಯಿತು. ಡಿವೈಎಸ್ಪಿ ಗೀತಾ ಬೇನಾಳ ನೇತೃತ್ವದಲ್ಲಿ ನಗರದ ವಿವಿಧೆಡೆ ಬಂದೋಬಸ್ತ್‌ ಮಾಡಲಾಗಿತ್ತು. ಅನವಶ್ಯಕವಾಗಿ ರಸ್ತೆಗೆ ಇಳಿದವರಿಗೆ ‘ಇನ್ನೊಮ್ಮೆ ಬಂದರೆ ಬಂಧಿಸುವುದಾಗಿ’ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟರು.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮತ್ತು ಜಿಲ್ಲೆಯನ್ನು ಪ್ರವೇಶಿಸುವ ಸ್ಥಳಗಳಲ್ಲಿ 8 ಕಡೆ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದ್ದು, ಒಳಬರುವ ಮತ್ತು ಹೊರ ಹೋಗುವ ವಾಹನಗಳ ನೋಂದಣಿ, ಯಾವ ಕಾರಣಕ್ಕೆ ಸಂಚಾರ ಮಾಡುತ್ತಿರುವುದಾಗಿ ಮಾಹಿತಿ ದಾಖಲಿಸಿಕೊಂಡು ಕಳುಹಿಸಿಕೊಡಲಾಗುತ್ತದೆ.

ಈ ಕುರಿತು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಜನರಿಗೆ ಸಂಯಮ ಕಾಪಾಡಿಕೊಳ್ಳುವಂತೆ ಮನವಿ ಮಾಡಿದೆ. ಪೊಲೀಸರೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ ಅನಾವಶ್ಯಕ ಗೊಂದಲಕ್ಕೆ ಕಾರಣವಾದರೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.

ಮೊದಲ ದಿನದ ಲಾಕ್‌ಡೌನ್‌ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ನಿಯಮದಂತೆ ಸಂಪೂರ್ಣ ಸ್ತಬ್ಧಗೊಂಡಿತು. ವ್ಯಾಪಾರ-ವಹಿವಾಟು ಕೂಡ ನಡೆಯಲಿಲ್ಲ. ಕಲ್ಯಾಣ ಮಂಟಪಗಳಲ್ಲಿ ನಡೆಯಬೇಕಿದ್ದ ಮದುವೆಗಳನ್ನು ರದ್ದು ಮಾಡಲಾಗಿತ್ತು. ದಿನಸಿ, ತರಕಾರಿ, ಹಾಲು ಖರೀದಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ವಾಗ್ವಾದ: ಬೆಳಿಗ್ಗೆ 9ಕ್ಕೆ ವ್ಯಾಪಾರ ವಹಿವಾಟು ಮುಗಿದರೂ ಸಾಮಗ್ರಿಗಳನ್ನು ಸಾಗಿಸಲು ಸಮಯ ಹಿಡಿದಿದ್ದರಿಂದ ಪೊಲೀಸರು ಮತ್ತು ವ್ಯಾಪಾರಸ್ಥರ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು.

ಪ್ರಮುಖ ರಸ್ತೆಗಳನ್ನು ದಾಟಿಕೊಂಡು ಹೋಗಲು ಅವಕಾಶ ಇಲ್ಲದೇ ಇದ್ದರಿಂದ ಒಳಗಿನ ದಾರಿಯನ್ನು ಬಳಸಿ ಅನಿವಾರ್ಯವಾಗಿ ಓಡಾಡುವಂತೆ ಆಯಿತು.

ಅಂಗಡಿ ಬಂದ್‌ ಮಾಡಿಸಿದ ಸಿಬ್ಬಂದಿ

ಕಾರಟಗಿ: ಲಾಕ್‌ಡೌನ್‌ ಕಾರಣ ಪಟ್ಟಣದಲ್ಲಿ ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಬಂದ್‌ ಮಾಡಲಾಗಿತ್ತು. ಜನ, ವಾಹನ ಸಂಚಾರ ಕಡಿಮೆ ಇತ್ತು.

ಸರಕು ಸಾಗಣೆ ವಾಹನಗಳು ಮಾತ್ರ ಸಂಚರಿಸಿದವು. ಅಧಿಕಾರಿಗಳ ತಂಡ ಅಂಗಡಿಗಳನ್ನು ಬಂದ್‌ ಮಾಡಿಸಿತು.

ಬೆ.10 ರ ಬಳಿಕ ಹಣ್ಣು, ಜ್ಯೂಸ್‌, ಕೆಲ ತರಕಾರಿ ಅಂಗಡಿಗಳು ತೆರೆದಿದ್ದವಾದರೂ ಗ್ರಾಹಕರಿರದೆ ಬಿಕೋ ಎನ್ನುತ್ತಿದ್ದವು.

ಬ್ಯಾಂಕ್‌ಗಳಲ್ಲಿ ಗ್ರಾಹಕರ ಸಂಖ್ಯೆ ತೀರಾ ಕ್ಷೀಣವಾಗಿತ್ತು. ಔಷಧಿ, ಗೊಬ್ಬರ, ದಲಾಲಿ ಅಂಗಡಿ ಸಹಿತ ಕೆಲ ವಿನಾಯಿತಿ ಪಡೆದಿರುವ ಅಂಗಡಿಗಳು ಎಂದಿನಂತೆ ತೆರೆದಿದ್ದವು.

ಜನನಿಬಿಡ ಕನಕದಾಸ ವೃತ್ತ ಬಿಕೋ ಎನ್ನುತ್ತಿತ್ತು. ಸಬ್‌ ಇನ್‌ಸ್ಪೆಕ್ಟರ್‌ ಲಕ್ಕಪ್ಪ ಬಿ. ಅಗ್ನಿ, ಸಿಬ್ಬಂದಿ ವಾಹನ ತಪಾಸಣೆ ನಡೆಸಿದರು.

ಅನುಮತಿ ಪಡೆದ ವಾಹನಗಳನ್ನು ಪರಿಶೀಲಿಸಿ ಬಿಟ್ಟರು.

ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಮಾತನಾಡಿದರು.

ಕಂದಾಯ ನಿರೀಕ್ಷಕ ಸುರೇಶ ಮಾತನಾಡಿ,‘ಬೆಳಗ್ಗೆ ಅಂಗಡಿಗಳ ಮುಂದೆ ಜನಸಂದಣಿ ಹೆಚ್ಚುತ್ತಿದೆ. ವರ್ತಕರು ಸರ್ಕಾರದ ಮನವಿಗೆ ಸ್ಪಂದಿಸಿ, ಮನೆಗೆ ಸರಕು ಕೊಡುವ ಪರಿಪಾಠ ರೂಢಿಸಿಕೊಂಡರೆ ಸಹಕಾರಿಯಾಗುತ್ತದೆ’ ಎಂದರು.

ಕರ್ಫ್ಯೂ ಮಾದರಿ ಲಾಕ್‌ಡೌನ್

ಕುಷ್ಟಗಿ: ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನತಾ ಕರ್ಫ್ಯೂಗೆ ಬದಲಾಗಿ ಸೋಮವಾರದಿಂದ ಸಂಪೂರ್ಣ ಲಾಕ್‌ಡೌನ್‌ ಜಾರಿಗೆ ಬಂದರೂ ಅದು ಸಾರ್ವಜನಿಕರ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ.

ಬೆಳಿಗ್ಗೆ 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರಿಂದ ಬೆಳಗಿನ ಜಾವ 3 ಗಂಟೆಯಿಂದಲೇ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಇತ್ತು. ನೂರಾರು ಜನರು ಒಂದೇಕಡೆ ಸೇರಿ ವ್ಯವಹರಿಸುತ್ತಿದ್ದುದು
ಕಂಡುಬಂದಿತು.

ಹತ್ತು ಗಂಟೆವರೆಗೂ ರಸ್ತೆಗಳು ಕಿಕ್ಕಿರಿದಿದ್ದವು. ವಾಹನಗಳ ಸಂಚಾರಕ್ಕೂ ಮುಕ್ತ ಅವಕಾಶ ಇತ್ತು.

ನಂತರ ಪೊಲೀಸರು ರಸ್ತೆಗೆ ಇಳಿದಿದ್ದರಿಂದ ಅಂಗಡಿ ಮುಂಗಟ್ಟುಗಳು ಬಂದ್‌ ಆದವು, ಆದರೂ ಬಸ್‌ನಿಲ್ದಾಣ ಮತ್ತಿತರೆ ಕಡೆ ಜವಳಿ ಅಂಗಡಿಗಳಲ್ಲಿ ಬಾಗಿಲು ಹಾಕಿ ಕದ್ದುಮುಚ್ಚಿ ಬಟ್ಟೆ ವ್ಯಾಪಾರ ನಡೆಸಿದ್ದು ಕಂಡುಬಂದಿತು. ತಳ್ಳು ಗಾಡಿಗಳಲ್ಲಿ ಹಣ್ಣು ತರಕಾರಿ ಮಾರಾಟ ಎಂದಿನಂತೆಯೇ ನಡೆಯಿತು. ಬ್ಯಾಂಕ್‌ ಶಾಖೆಗಳು, ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಎಂದಿನಂತೆ ಕಾರ್ಯನಿರ್ವಹಿಸಿದರು. ಸರ್ಕಲ್‌ ಇನ್‌ಸ್ಪೆಕ್ಟರ್ ಎಸ್‌.ಆರ್‌.ನಿಂಗಪ್ಪ ಮತ್ತು ಸಿಬ್ಬಂದಿ ಅನಗತ್ಯವಾಗಿ ಸಂಚರಿಸದಂತೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದುದು
ಕಂಡುಬಂದಿತು.

ಪೊಲಿಸರ ಸೂಚನೆ ಕಡೆಗಣಿಸಿ, ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ ಅನಗತ್ಯವಾಗಿ ಬೈಕ್‌ ಸವಾರರು ಸಂಚರಿಸುತ್ತಿದ್ದರು.

52 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದರು ಎಂದು ಸಬ್‌ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ ಹೇಳಿದರು.

ಪೊಲೀಸರಿಂದ ಜಾಗೃತಿ

ಕನಕಗಿರಿ: ಕೊರೊನಾ ಲಾಕ್‌ಡೌನ್‌ಗೆ ಮೊದಲ ದಿನವಾದ ಸೋಮವಾರ ಪಟ್ಟಣದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಪೊಲೀಸ್ ಇಲಾಖೆ ಸಿಬ್ಬಂದಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿದರು.

ವಾಲ್ಮೀಕಿ ವೃತ್ತ, ರಾಜಬೀದಿ ಒಳಗೊಂಡಂತೆ ವಿವಿಧ ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ
ತೋರಿಸಿದರು. ಸಾಲದು ಎಂಬಂತೆ ವಾಹನಗಳನ್ನು ವಶಕ್ಕೆ ಪಡೆದು, ಸವಾರರಿಗೆ ದಂಡ ವಿಧಿಸಿದರು.

ನಸುಕಿನಿಂದಲೇ ವಾಹನದಲ್ಲಿ ಸಂಚರಿಸಿದ ಪಿಎಸ್ಐ ತಾರಾಬಾಯಿ ಪವಾರ, ಸಹಾಯಕ ಸಬ್ ಇನ್‌ಸ್ಪೆಕ್ಟರ್‌ ಜಾಫರದ್ದೀನ್ ಅವರು ಸರ್ಕಾರ ನಿಗದಿಪಡಿಸಿದ ಸಮಯಕ್ಕೆ ಅಂಗಡಿ ಬಂದ್ ಮಾಡಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.