ADVERTISEMENT

ಕೊಪ್ಪಳ | ದಲಿತರ ಕಾಲೊನಿಯಲ್ಲಿ ಮನೆ ಕಟ್ಟಲು ಅಡ್ಡಿ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 7:07 IST
Last Updated 10 ಜುಲೈ 2025, 7:07 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೊಪ್ಪಳ: ‘ಜಿಲ್ಲೆಯ ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ ದಲಿತರ ಕಾಲೊನಿಯಲ್ಲಿ ಮನೆ ಕಟ್ಟಲು ಅಧಿಕಾರಿಗಳು ಅವಕಾಶ ಕೊಡುತ್ತಿಲ್ಲ. ತಮ್ಮ ಬೆಂಬಲಿಗರಲ್ಲ ಎನ್ನುವ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳ ಮೂಲಕ ಮನೆ ಕಟ್ಟಲು ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ಗ್ರಾಮದ ನಿವಾಸಿ ವೀರೇಶ ನಾಗವಂಶಿ ಆರೋಪಿಸಿದರು.

‘ದಲಿತರ ಕಾಲೊನಿಯಲ್ಲಿರುವ ಎಲ್ಲ ಮನೆಗಳು ಅಕ್ರಮವಾಗಿಯೇ ನಿರ್ಮಿಸಿಕೊಳ್ಳಲಾಗಿದೆ. ಮೂರೂವರೆ ದಶಕಗಳಿಂದ ಅಲ್ಲಿಯೇ ವಾಸವಾಗಿದ್ದು, ಈಗ ನಾನು ಮನೆ ಕಟ್ಟಲು ಮುಂದಾಗಿದ್ದಕ್ಕೆ ಅಡ್ಡಿಪಡಿಸಲಾಗುತ್ತಿದೆ. ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಇಒ ಹಾಗೂ ಪೊಲೀಸರು ಇದಕ್ಕೆ ಅವಕಾಶ ಕೊಡುತ್ತಿಲ್ಲ. ನಿರಂತರವಾಗಿ ಪೊಲೀಸರನ್ನು ನಿಯೋಜಿಸಿದ್ದಾರೆ’ ಎಂದು ದೂರಿದರು.

ADVERTISEMENT

‘ದಲಿತರ ಕೇರಿಯಲ್ಲಿ 35ರಿಂದ 40 ಕುಟುಂಬಗಳು ವಾಸವಾಗಿವೆ. ಮನೆ ನಿರ್ಮಿಸುತ್ತಿರುವ ಜಾಗದ ದಾಖಲೆಗಳನ್ನು ಇತ್ತೀಚೆಗೆ ಕಂದಾಯ ಇಲಾಖೆಯ ಮೂಲಕ ಪರಿಶೀಲಿಸಿದಾಗ ನಿಜಾಮರ ಕಾಲದ ಬಟ್ಟೆ ಮ್ಯಾಪ್‌ನಲ್ಲಿ ದುರ್ಬಲ ವರ್ಗದವರಿಗೆ ಮೀಸಲಾದ ಮಹರ್‌ವಾಡಿ ಜಾಗವೆಂದಿದೆ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ. ಈ ಜಾಗ ಕಂದಾಯ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ನಾವು ವಾಸವಿರುವ ಜಾಗವನ್ನು ನೋಂದಾಯಿಸಿಕೊಂಡು ಆಸ್ತಿ ನಂಬರ್‌ ಕೊಡುವಂತೆ ಅರ್ಜಿ ಸಲ್ಲಿಸಿದರೂ ಕೊಟ್ಟಿಲ್ಲ. ನಿವೇಶನದ ಪಕ್ಕದಲ್ಲಿರುವ ಸಮುದಾಯ ಭವನ ಜಾಗ ಒತ್ತುವರಿ ಮಾಡಿದ್ದೀರಿ ಎಂದು ಆರೋಪ ಮಾಡಿ ಮನೆಕಟ್ಟಲು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಗ್ರಾ.ಪಂ.ವೀರೇಶ ಅವರಿಗೆ ದಾಖಲೆ ಸಲ್ಲಿಸುವಂತೆ ನೋಟಿಸ್‌ ಕೂಡ ಜಾರಿ ಮಾಡಿದೆ.

‘ಸಚಿವ ಶಿವರಾಜ ತಂಗಡಗಿ ದಲಿತ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ಕನಕಗಿರಿ ತಾಲ್ಲೂಕು ಅಧಿಕಾರಿಗಳು ಕಾನೂನು ಗಾಳಿಗೆ ತೂರಿ ಅಧಿಕಾರ ದುರುಪಯೋಗಪಡಿಸಿಕೊಂಡು ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು. ‘ಇದನ್ನು ವಿರೋಧಿಸಿ ಜು.11ರಂದು ನವಲಿಯ ಮಾಕಣ್ಣ ಕಂಬ್ಳಿ ಸರ್ಕಲ್‌ ಬಳಿ 48 ಗಂಟೆಗಳ ನಿರಂತರ ಅಹೋರಾತ್ರಿ ಪ್ರತಿಭಟನಾ ಧರಣಿ ಮಾಡಲಾಗುವುದು’ ಎಂದು ತಿಳಿಸಿದರು.

ಬಿಜೆಪಿ ಮುಖಂಡ ನಿಂಗಪ್ಪ ನಾಯಕ್‌, ಲಿಂಗರಾಜ ಹೂಗಾರ, ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ ಹಾಗೂ ಭೀಮನಗೌಡ ಹರ್ಲಾಪುರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.