ಕೊಪ್ಪಳ: ಮುಂಬರುವ ಗಣೇಶ ಹಬ್ಬದ ಸಂದರ್ಭದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ವಿಶೇಷ ಕ್ರಮ ಕೈಗೊಳ್ಳಬೇಕು ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್.ಆರಸಿದ್ದಿ ಮನವಿ ಸಲ್ಲಿಸಲಾಯಿತು.
‘ಕೊಪ್ಪಳ ಶಾಂತಿ, ಸೌಹಾರ್ದತೆಗೆ ಹೆಸರಾಗಿದ್ದು, ಈ ಹಿಂದೆ ಗಣೇಶ ವಿಸರ್ಜನೆ ಸಮಯದಲ್ಲಿ ಸಣ್ಣ ಪುಟ್ಟ ಗಲಾಟೆಗಳು ಸಂಭವಿಸಿವೆ. ಆದರೆ ಇತ್ತೀಚೆಗೆ ಗವಿಸಿದ್ದಪ್ಪ ನಾಯಕ ಕೊಲೆ ನಡೆದ ದಿನದಿಂದ ನಿತ್ಯ ಬೆಳವಣಿಗೆ ನಡೆಯುತ್ತಿವೆ. ಕೆಲವು ಕೋಮುವಾದಿ ಸಂಘಟನೆಗಳು ಈ ಪ್ರಕರಣವನ್ನೇ ನೆಪವಾಗಿಟ್ಟುಕೊಂಡು ತಮ್ಮ ಅಜೆಂಡಾ ಜಾರಿಗೊಳಿಸಲು ಪ್ರಯತ್ನಿಸುತ್ತಿವೆ. ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿವೆ. ಆದ್ದರಿಂದ ಶಾಂತಿ ವಾತಾವರಣ ಇರುವಂತೆ ನೋಡಿಕೊಳ್ಳಲು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದ್ದಾರೆ. ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆಯಾಗುವ ಹಿಂದೂ ಯುವಕರಿಗೆ ₹5 ಲಕ್ಷ ನೀಡಲಾಗುವುದು ಎಂದು ಯತ್ನಾಳ ಇತ್ತೀಚೆಗೆ ಕೊಪ್ಪಳಕ್ಕೆ ಭೇಟಿ ನೀಡಿದಾಗ ಹೇಳಿಕೆ ನೀಡಿದ್ದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು, ಮಹಾಂತೇಶ ಕೋತಬಾಳ, ಎಸ್.ಎ.ಗಫಾರ, ಚನ್ನಬಸಪ್ಪ ಅಪ್ಪಣವರ, ಕೆ.ಬಿ. ಗೋನಾಳ, ಗಾಳೆಪ್ಪ ಮುಂಗೋಲಿ, ಮಖಬೂಲ್ ರಾಯಚೂರು, ಶಿವಪ್ಪ ಹಡಪದ, ಬಸವರಾಜ್ ಶೀಲವಂತರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.