ADVERTISEMENT

ಹನುಮಸಾಗರ | ಹೆಸರು ಬೆಳೆಗೆ ನಂಜಾಣು ರೋಗ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 3:10 IST
Last Updated 6 ಜೂನ್ 2020, 3:10 IST
ಹನುಮಸಾಗರ ಭಾಗದಲ್ಲಿ ಹೆಸರು ಬೆಳೆಗೆ ನಂಜಾಣು ರೋಗ ಆವರಿಸಿದ್ದು ನಿಯಂತ್ರಣ ಕ್ರಮ ಅನುಸಿರಿಸುವುದಕ್ಕಾಗಿ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ ಶುಕ್ರವಾರ ಮಡಿಕ್ಕೇರಿ ಗ್ರಾಮದ ರೈತರಿಗೆ ಮಾಹಿತಿ ನೀಡಿದರು
ಹನುಮಸಾಗರ ಭಾಗದಲ್ಲಿ ಹೆಸರು ಬೆಳೆಗೆ ನಂಜಾಣು ರೋಗ ಆವರಿಸಿದ್ದು ನಿಯಂತ್ರಣ ಕ್ರಮ ಅನುಸಿರಿಸುವುದಕ್ಕಾಗಿ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ ಶುಕ್ರವಾರ ಮಡಿಕ್ಕೇರಿ ಗ್ರಾಮದ ರೈತರಿಗೆ ಮಾಹಿತಿ ನೀಡಿದರು   

ಹನುಮಸಾಗರ (ಕೊಪ್ಪಳ ಜಿಲ್ಲೆ): ಮೂರು ವಾರಗಳ ಹಿಂದೆ ಬಿತ್ತನೆಯಾಗಿರುವ ಹೆಸರು ಬೆಳೆಗೆ ತೇವಾಂಶ ಕೊರತೆಯ ನಡುವೆ ಎಲೆಗಳು ಹಳದಿಯಾಗಿ ನಂಜಾಣು ರೋಗದ ಬಾಧೆಗೆ ಒಳಗಾಗಿವೆ. ರೋಗದ ಆರಂಭಿಕ ಹಂತ ಇದಾಗಿರುವುದರಿಂದ ರೈತರು ಬೆಳೆಯ ಉಳುವಿಗಾಗಿ ಕೂಡಲೆ ಉಪಶಮನ ಕ್ರಮ ಕೈಕೊಳ್ಳಬೆಕು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ ಹೇಳಿದರು.

ಶುಕ್ರವಾರ ಸಮೀಪದ ಮಡಿಕ್ಕೇರಿ ಗ್ರಾಮದ ರೈತರಿಗೆ ಬೆಳೆಯ ನಿರ್ವಹಣೆಯ ವಿಧಾನಗಳ ಕುರಿತು ಮಾಹಿತಿ ನೀಡಿದರು.

ಮೇ ಕೊನೆ ವಾರದಿಂದ ಜೂನ್‌ 15 ರವರೆಗೆ ವ್ಯಾಪಕವಾಗಿ ಬಿತ್ತನೆ ಮಾಡಲಾಗಿದೆ. ಹೆಸರು ಬಿತ್ತನೆಯಾದಾಗಿನಿಂದ ಈ ಭಾಗದಲ್ಲಿ ಮುಂಗಾರು ಮಳೆ ಕ್ಷೀಣಿಸತೊಡಗಿದ್ದು, ಹಲವಾರು ಪ್ರದೇಶಗಳಲ್ಲಿ ಬೆಳೆ ತೇವಾಂಶ ಕೊರತೆ ಹಾಗೂ ನಂಜಾಣು ರೋಗದಿಂದಲೂ ಬಳಲುತ್ತಿದ್ದು ಸೂಕ್ತ ನಿರ್ವಹಣಾ ಕ್ರಮ ಅವಶ್ಯವಾಗಿದೆ ಎಂದು ಹೇಳಿದರು.

ADVERTISEMENT

ರೋಗದ ಪ್ರಾರಂಭಿಕ ಹಂತದಲ್ಲಿ ಹಳದಿ ಮಿಶ್ರಿತ ಹಸಿರು ಬಣ್ಣದ ಮಚ್ಚೆಗಳು ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಗಿಡದ ತುದಿಯಲ್ಲಿ ಬೆಳೆಯುತ್ತಿರುವ ತ್ರಿದಳ ಎಲೆಗಳಲ್ಲಿ ಹಳದಿ ಮೊಸೈಕ್ ಮಚ್ಚೆಗಳು ಪ್ರಮುಖವಾಗಿ ಎದ್ದು ಕಾಣುತ್ತವೆ. ಇವುಗಳು ಕ್ರಮೇಣ ದೊಡ್ಡದಾಗಿ ಮಚ್ಚೆಗಳು ಒಂದಕ್ಕೊಂದು ಕೂಡಿಕೊಂಡು ಎಲೆಗಳು ಹಳದಿಯಾಗುತ್ತವೆ. ಇದು ಇಳುವರಿ ಕುಂಠಿತಕ್ಕೆ ಮುಖ್ಯ ಕಾರಣವಾಗುತ್ತದೆ ಎಂದರು.

ಬಿಳಿನೊಣಗಳು ನಂಜಾಣುವನ್ನು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹರಡಿಸುತ್ತವೆ. ಸಾಮಾನ್ಯವಾಗಿ ಬಿತ್ತನೆ ಮುಂಚೆ ಹೆಸರು ಬೀಜಗಳನ್ನು ಇಮಿಡಾಕ್ಲೊಪ್ರಿಡ್ 70 ಡಬ್ಲ್ಯುಎಸ್ ಕೀಟನಾಶಕದಿಂದ 5 ಮಿ.ಲೀ/ಕಿ.ಗ್ರಾಂ. ಬೀಜಕ್ಕೆ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದ ಭಾಗದಲ್ಲಿ ನಂಜಾಣು ಪ್ರಮಾಣ ಕಡಿಮೆ ಇದೆ. ನಂಜಾಣು ರೋಗಬಾಧಿತ ಗಿಡಗಳು ಕಂಡುಬಂದರೆ ತೆಗೆದು ನಾಶಪಡಿಸಬೇಕು. ಹೊಲಗಳು ಕಳೆ ಮುಕ್ತವಾದಷ್ಟು ಒಳ್ಳೆಯದು ಎಂದರು ತಿಳಿಸಿದರು.

ಬಿಳಿ ನೊಣದ ಬಾಧೆ ಕಂಡುಬಂದಲ್ಲಿ ಇಮಿಡಾಕ್ಲೊಪ್ರಿಡ್ 17.8 ಎಸ್.ಎಲ್. 0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. 10 ದಿನಗಳ ನಂತರ ಬೇವಿನ ಎಣ್ಣೆಯನ್ನು 5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡುವುದರಿಂದ ರೋಗ ಹರಡುವ ಕೀಟಗಳು ಕಡಿಮೆಯಾಗುತ್ತವೆ ಎಂದರು.

ಸಾಧ್ಯವಾದರೆ ಮುಂಬರುವ ಬೂದು ರೋಗಕ್ಕೆ ಮುಂಜಾಗ್ರತೆ ಕ್ರಮವಾಗಿ ಗಂಧಕದ ಪುಡಿಯನ್ನು 3 ಗ್ರಾಂ. ಪ್ರತಿ ಲೀಟರ್ ನೀರಿಗೆ ಕೀಟನಾಶಕದೊಂದಿಗೆ ಬೆರೆಸಿ ಸಿಂಪಡಣೆ ಮಾಡಬಹುದು. ಬೆಳೆಗೆ 18:18:18 ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಪ್ರತಿ ಎಕರೆಗೆ ಒಂದು ಕೆ.ಜಿಯಂತೆ ಸಿಂಪಡಣೆ ಮಾಡುವುದರಿಂದ ಬೆಳೆ ಹಳದಿಯಾಗುವುದನ್ನು ಕಡಿಮೆಗೊಳಿಸಬಹುದು ಎಂದು ತಿಳಿಸಿದರು.

ರೈತರಾದ ಶರಣಪ್ಪ ಹಿರೇವಾಲೀಕಾರ, ಚಂದುಸಾಬ ನದಾಫ್, ರಮೇಶ, ವೀರನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.