ADVERTISEMENT

ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಹೆಣಗಾಟ!

ಕೋವಿಡ್‌ ಆಸ್ಪತ್ರೆಯಾದ ತಳಕಲ್ ಎಂಜಿನಿಯರಿಂಗ್ ಕಾಲೇಜು

ಸಿದ್ದನಗೌಡ ಪಾಟೀಲ
Published 15 ಜುಲೈ 2020, 17:59 IST
Last Updated 15 ಜುಲೈ 2020, 17:59 IST

ಕೊಪ್ಪಳ: ಆರಂಭದಲ್ಲಿ ಕೊರೊನಾ ವೈರಸ್ ಬಿಟ್ಟುಕೊಳ್ಳದೆ ರಾಜ್ಯದಾದ್ಯಂತ ಜಿಲ್ಲೆ ಸುದ್ದಿ ಮಾಡಿತ್ತು. ವಲಸೆ ಕಾರ್ಮಿಕರ ಆಗಮನದಿಂದ ಆರಂಭವಾದ ಕೊರೊನಾ ಮಹಾಮಾರಿಗೆ ಈಗ ತತ್ತರಿಸಿದೆ.

368ರ ಗಡಿ ದಾಟಿರುವ ಕೊರೊನಾ ಸೋಂಕಿತರ ಸಂಖ್ಯೆಗೆ ಜಿಲ್ಲಾ ಕೋವಿಡ್ ಆಸ್ಪತ್ರೆ, ತಳಕಲ್‌ನ ಬೃಹತ್ ಎಂಜಿನಿಯರಿಂಗ್ ಕಾಲೇಜನ್ನು ಕೂಡ ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಪ್ರಯೋಗಾಲಯ ಆರಂಭಿಸಲಾಗಿದ್ದು, ನಿತ್ಯ 500 ಸ್ಯಾಂಪಲ್‌ ಪರೀಕ್ಷೆ ಮಾಡಲಾಗುತ್ತದೆ.

ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಕೊರೊನಾ ಮಹಾಮಾರಿ ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ನಿತ್ಯ ಇದರದೇ ಸುದ್ದಿ ನಗರದ ಸುತ್ತಲಿನ ಭಾಗ್ಯನಗರ, ಓಜನಹಳ್ಳಿ, ಯತ್ನಟ್ಟಿ ಗ್ರಾಮಗಳು ಸೋಂಕಿನಿಂದ ತತ್ತರಿಸಿ ಸೀಲ್‌ ಡೌನ್‌ ಮಾಡಿಕೊಂಡಿವೆ.

ADVERTISEMENT

ಜಿಲ್ಲೆಯಲ್ಲಿ ಗಂಗವತಿ ತಾಲ್ಲೂಕಿನಲ್ಲಿ ಸೋಂಕಿತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದ್ದಾರೆ. ಅವರಿಗೆಲ್ಲ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಒದಗಿಸುವುದೇ ಸವಾಲಾಗಿದೆ. ಆರೋಗ್ಯ ಸಿಬ್ಬಂದಿ ಕೋವಿಡ್‌ನಿಂದ ಮೃತರಾದ ವ್ಯಕ್ತಿಗಳ ಶವಸಂಸ್ಕಾರಕ್ಕೆ ಪರದಾಡುತ್ತಿದ್ದು, ಕೆಲವೊಂದು ಗ್ರಾಮಗಳಲ್ಲಿ ವಾಗ್ವಾದವೇ ನಡೆದಿವೆ.

ಬುಧವಾರ 12 ಜನರಿಗೆ ಹೊಸದಾಗಿ ಕೋವಿಡ್ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ಗ್ರಾಮದ ಮನೆಯಲ್ಲಿ ಅವಿಭಿಜಿತ ಕುಟುಂಬಗಳು ಇದ್ದರೆ ಒಬ್ಬರಿಗೆ ಕೋವಿಡ್ ಸೋಂಕು ತಗುಲಿದರೆ ಮನೆ ಮಂದಿಯನ್ನೆಲ್ಲ ಕ್ವಾರೈಂಟೈನ್ ಮಾಡಲಾಗಿದೆ. ನೆಗಟಿವ್ ಎಂದು ಬಂದರೂ ಮತ್ತೆ ಇನ್ನೊಬ್ಬರಿಗೆ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಿಸಿ ಮತ್ತೆ ಮನೆ ಮಂದಿಯನ್ನು ಪ್ರಾಥಮಿಕ ಸಂಪರ್ಕ ಎಂದು ಆಸ್ಪತ್ರೆಗೆ ಕರೆದೊಯ್ದ ಘಟನೆ ನಡೆದಿದೆ.

'ಮನೆಮಂದಿಯಲ್ಲ ನಿತ್ಯ ಆಸ್ಪತ್ರೆಗೆ ಅಲೆದು ಸಾಕಾಗಿದೆ' ಎಂದು ಗಂಗಾವತಿಯ ಜುಲೈ ನಗರದ ಒಂದು ಕುಟುಂಬ ಪ್ರಜಾವಾಣಿ ಪ್ರತಿನಿಧಿ ಮುಂದೆ ಅಲವತ್ತುಕೊಂಡಿತು. 'ಒಮ್ಮೆಲೆ ಮನೆ ಮಂದಿಗೆ ಚಿಕಿತ್ಸೆ ನೀಡಿ ನಮ್ಮನ್ನು ಇದರಿಂದ ಬಿಡುಗಡೆ ಮಾಡಿ' ಎಂದು ಮನವಿ ಮಾಡುತ್ತಾರೆ.

ಆದರೆ ಪ್ರಯೋಗಾಲಯ ವರದಿ ಆಧಾರಿಸಿ ಆಸ್ಪತ್ರೆಗೆ ದಾಖಲಿಸುತ್ತಿರುವುದರಿಂದ ಈ ಗೊಂದಲವಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಯಾವುದೇ ಔಷಧ, ಮಾತ್ರೆಗಳ ಕೊರತೆಯಿಲ್ಲ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ. ಕೆಲವು ರೋಗಿಗಳು ತಮಗೆ ಕೊರೊನಾ ಬಂದಿದೆ ಎಂಬ ಕೀಳರಿಮೆಯಿಂದಲೇ ಕ್ಷೀಣವಾಗುತ್ತಿರುವುದು ವಿಷಾದನೀಯ.

ಕೋವಿಡ್‌ಗೆ ಜಿಲ್ಲೆಯಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಅನೇಕರು ಗುಣಮುಖರಾಗಿದ್ದು, ವೈಯಕ್ತಿಯ ಅಂತರ, ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಈ ಮಹಾಮಾರಿ ಬರದಂತೆ ಎಚ್ಚರ ವಹಿಸಬೇಕಾಗಿದೆ. ಆರೋಗ್ಯ ಇಲಾಖೆ ಕೂಡಾ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದು, ಜಿಲ್ಲೆಯ ಜನತೆಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಉಂಟಾಗಿದೆ.

ಮಧ್ಯಾಹ್ನದಿಂದ ಸ್ವಯಂ ಲಾಕ್‌ಡೌನ್ ಮಾಡುವ ಮೂಲಕ ಮಾದರಿ ಕಾರ್ಯವನ್ನು ಮಾಡಿದ್ದು, ರೋಗ ನಿಯಂತ್ರಣಕ್ಕೆ ಸಹಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.