ADVERTISEMENT

ಲಿಂಗಸುಗೂರು: ಜನರ ಸಮಸ್ಯೆ ಆಲಿಸದ ಜಿಲ್ಲಾಡಳಿತ

ನಡುಗಡ್ಡೆ ಪ್ರದೇಶಕ್ಕೆ ಭೇಟಿ ನೀಡದ ಅಧಿಕಾರಿಗಳು: ಅಸಮಾಧಾನ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಜುಲೈ 2021, 19:30 IST
Last Updated 25 ಜುಲೈ 2021, 19:30 IST
ಲಿಂಗಸುಗೂರು ತಾಲ್ಲೂಕು ಐತಿಹಾಸಿಕ ಜಲದುರ್ಗ ಕೋಟೆಗೆ ಶನಿವಾರ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ನೇತೃತ್ವ ತಂಡ ಭೇಟಿ ನೀಡಿ, ಸುತ್ತಲಿನ ಪ್ರದೇಶವನ್ನು ವೀಕ್ಷಿಸಿತು
ಲಿಂಗಸುಗೂರು ತಾಲ್ಲೂಕು ಐತಿಹಾಸಿಕ ಜಲದುರ್ಗ ಕೋಟೆಗೆ ಶನಿವಾರ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ನೇತೃತ್ವ ತಂಡ ಭೇಟಿ ನೀಡಿ, ಸುತ್ತಲಿನ ಪ್ರದೇಶವನ್ನು ವೀಕ್ಷಿಸಿತು   

ಲಿಂಗಸುಗೂರು: ಕೃಷ್ಣಾ ಪ್ರವಾಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕುವ ನಡುಗಡ್ಡೆ ಪ್ರದೇಶಗಳ ಜನರ ಶಾಶ್ವತ ಸ್ಥಳಾಂತರದ ಕನಸು ಇಂದಿಗೂ ನನಸಾಗುತ್ತಿಲ್ಲ.

ಜಿಲ್ಲಾ ಆಡಳಿತವೇ ತಮ್ಮ ಬಳಿಗೆ ಆಗಮಿಸಿ ಅಹವಾಲು ಸ್ವೀಕರಿಸುತ್ತದೆ ಎಂಬು ನಂಬಿಕೊಂಡಿದ್ದ ಕುಟುಂಬಸ್ಥರು ಜಿಲ್ಲಾಮಟ್ಟದ ಅಧಿಕಾರಿಗಳು ಭೇಟಿ ನೀಡದೆ ವಾಪಸ್ಸಾಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಡುಗಡ್ಡೆ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಲಿದೆ ಎಂಬ ಮಾಹಿತಿ ಮೇರೆಗೆ ಯರಗೋಡಿ, ಕಡದರಗಡ್ಡಿ ಸೇರಿದಂತೆ ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಕೆಲ ಕುಟುಂಬಸ್ಥರು ಕಾಯ್ದು ಕುಳಿತಿದ್ದರು.

ADVERTISEMENT

ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ನೇತೃತ್ವ ತಂಡ ಸೌಜನ್ಯತೆಗೂ ಈ ಗ್ರಾಮಗಳತ್ತ ಸುಳಿಯಲಿಲ್ಲ. ಹಿರಿಯ ಅಧಿಕಾರಿ ಭೇಟಿ ನೀಡದಲ್ಲಿ ತಮ್ಮ ಬಂಡವಾಳ ಬಹಿರಂಗವಾಗುತ್ತೆ ಎಂಬ ಭಯದಿಂದ ತಾಲ್ಲೂಕು ಆಡಳಿತ ದಾರಿ ತಪ್ಪಿಸಿದೆ ಎಂಬ ಆರೋಪ ಕೂಡ ಕೇಳಿಬಂದವು.

ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ, ಹೆಚ್ಚುವರಿ ಜಿಲ್ಲಾಧಿಕಾರಿ ದುರ್ಗೇಶ್‍, ಉಪ ವಿಭಾಗಾಧಿಕಾರಿಗಳಾದ ರಾಹುಲ್‍ ಸಂಕನೂರ, ಸಂತೋಷಕುಮಾರ ಕಾಮಗೌಡ, ತಹಶೀಲ್ದಾರ್ ಚಾಮರಾಜ ಪಾಟೀಲ್‍, ಪೊಲೀಸ್‍ ವರಿಷ್ಠಾಧಿಕಾರಿ ಪ್ರಕಾಶ್‍ ನಿಕ್ಕಂ, ಡಿವೈಎಸ್‌ಪಿ ಎಸ್‍.ಎಸ್‍ ಹುಲ್ಲೂರು, ಸಿಪಿಐ ಮಹಾಂತೇಶ ಸಜ್ಜನ, ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ ನೇತೃತ್ವದ ಎರಡು ಪ್ರತ್ಯೇಕ ತಂಡಗಳು ನಡುಗಡ್ಡೆ ಪ್ರದೇಶಗಳಲ್ಲಿ ಸಂಚರಿಸಿದರೂ ಸಂಕಷ್ಟದಲ್ಲಿರುವ ಜನರ ಬಳಿಗೆ ಬಾರದೆ ಹೋಗಿದ್ದು ವಿಶೇಷ.

ಎರಡು ಪ್ರತ್ಯೇಕ ತಂಡಗಳಲ್ಲಿ ಆಗಮಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಜಲದುರ್ಗ ಸೇತುವೆ, ಜಲದುರ್ಗ ಕೋಟೆ, ಶೀಲಹಳ್ಳಿ ಮತ್ತು ಯಳಗುಂದಿ ಸೇತುವೆ, ಯಳಗುಂದಿ ವಿದ್ಯುತ್‍ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

ನಾಲ್ಕು ದಶಕದಿಂದ ಈ ಪ್ರದೇಶಗಳಲ್ಲಿನ ಸಮಸ್ಯೆಗಳು ಯಾಕೆ ಇತ್ಯರ್ಥವಾಗುತ್ತಿಲ್ಲ. ವಾಸ್ತವ ಸಮಸ್ಯೆ, ನಡುಗಡ್ಡೆ ಕುಟುಂಬಸ್ಥರ ಬೇಡಿಕೆ, ಅಳಲು ಕೇಳಲು ಬರದೆ ಹೋಗಿದ್ದು ವ್ಯಾಪಕ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

‘ಪ್ರವಾಹ ಪ್ರದೇಶದ ಭೇಟಿ ಹೆಸರಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ಸಾಂಪ್ರದಾಯಿಕ ಭೇಟಿ ಮಾಡಿದ್ದಾರೆ. ಪೊಲೀಸ್‍ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪ್ರತ್ಯೇಕವಾಗಿ ನಡುಗಡ್ಡೆ ಪ್ರದೇಶಕ್ಕೆ ಬಂದಿದ್ದರೂ ಕೂಡ ಜಲದುರ್ಗ ಕೋಟೆಯ ವಿಹಂಗಮ ನೋಟ, ವಿದ್ಯುತ್‍ ಉತ್ಪಾದನೆ, ನಾರಾಯಣಪುರ ಅಣೆಕಟ್ಟೆಗೆ ಅಳವಡಿಸಿದ್ದ ಬಣ್ಣ ಬಣ್ಣದ ಆಕರ್ಷಕ ಲೈಟಿಂಗ್‍ನಲ್ಲಿ ನೀರಿನ ರುದ್ರನರ್ತನವನ್ನು ಸಂಜೆ ವೀಕ್ಷಣೆ ಮಾಡಿ ಕಣ್ತುಂಬಿಕೊಂಡಿದ್ದಾರೆ. ತಮ್ಮ ನೋವು ಅವರಿಗೇಕೆ ಬೇಕು’ ಎಂದು ಅಮರಗುಂಡ ಮ್ಯಾದರಗಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ತವದ ಗಡ್ಡಿಯಲ್ಲಿ ಮೂವರು ರೈತರು ಪ್ರವಾಹದ ಸುಳಿಗೆ ಸಿಲುಕಿದ್ದಾರೆ ಎಂಬ ಮಾಹಿತಿ ನೀಡಿದರು ಕೂಡ ತಾಲ್ಲೂಕು ಆಡಳಿತ ಜಿಲ್ಲಾ ಆಡಳಿತ ಕರೆತರುವಲ್ಲಿ ಮೀನಾಮೇಷ ಮಾಡಿದೆ. ಪ್ರವಾಹ ಪೀಡಿತರ ನೋವು, ನಲಿವುಗಳಿಗಿಂತ ಪ್ರವಾಹ ಭೇಟಿ ಹೆಸರಲ್ಲಿ ಒಂದು ದಿನದ ಪ್ರವಾಸ ಮಾಡಿ ಹೋಗಿದ್ದಾರೆ. ಮಧ್ಯಾಹ್ನ ಮಾಹಿತಿ ನೀಡಿ ರಾತ್ರಿಯಾದಂತೆ ಒತ್ತಡ ಹೆಚ್ಚಿದ ಮೇಲೆ ತಾಲ್ಲೂಕು ಆಡಳಿತ ರೈತರ ರಕ್ಷಣೆಗೆ ಮುಂದಾಗಿದ್ದು ನೋವಿನ ಸಂಗತಿ’ ಎಂದು ದಲಿತ ಮುಖಂಡ ಚೆನ್ನಬಸವ ಹೊಸಮನಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.