ಕುಕನೂರು: ‘ಭಾಷೆ ಜೀವನ ರೂಪಿಸುವುದಿಲ್ಲ. ಜನರು ಇಂಗ್ಲಿಷ್ ಮೇಲಿನ ವ್ಯಾಮೋಹ ಬಿಟ್ಟು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವಂತಾಗಬೇಕು’ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಕೈಗಾರಿಕಾ ಕೇಂದ್ರ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
‘ಜನರು ಇಂಗ್ಲಿಷ್ ವ್ಯಾಮೋಹ ಬಿಟ್ಟು ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು. ಜನರ ಬೇಡಿಕೆಯಂತೆ ಸರ್ಕಾರ ಕರ್ನಾಟಕ ಪಬ್ಲಿಕ್ ಸ್ಕೂಲ್‌ಅನ್ನು ಆರಂಭಿಸುತ್ತಿದೆ. ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಎಲ್‌ಕೆಜಿಯಿಂದ ಪಿಯುವರೆಗೂ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಮಾಧ್ಯಮದಲ್ಲಿ ಓದಿಸಬಹುದು’ ಎಂದು ಹೇಳಿದರು.
‘ಜ್ಞಾನಕ್ಕಾಗಿ ಇಂಗ್ಲಿಷ್ ಭಾಷೆ ಕಲಿಯಿರಿ. ಆದರೆ ಕನ್ನಡ ಭಾಷೆಯಿಂದ ದೂರ ಸರಿಯಬೇಡಿ. ರಾಜ್ಯ ಸರ್ಕಾರದಿಂದ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುತ್ತಿದ್ದೇವೆ. ಯಲಬುರ್ಗಾ ತಾಲ್ಲೂಕಿಗೆ ಆರು ಪಬ್ಲಿಕ್ ಶಾಲೆಗಳನ್ನು ಈ ವರ್ಷದಿಂದ ಪ್ರಾರಂಭಿಸಲಾಗುವುದು’ ಎಂದು ಹೇಳಿದರು.
₹25 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೂ ಡೈಯಾಸ್, ಡೆಸ್ಕ್ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗುವುದು. ಕೇವಲ ಎರಡು ವರ್ಷಗಳ ಅವಧಿಯಲ್ಲಿ 18 ಪ್ರೌಢಶಾಲೆಗಳನ್ನು ಮಂಜೂರು ಮಾಡಿಸಿ, ನಿರ್ಮಿಸಿ ಈಗಾಗಲೇ ಪ್ರಾರಂಭಿಸಿದ್ದೇವೆ. ಪ್ರತಿ ವರ್ಷ ಶಿಕ್ಷಣ ಇಲಾಖೆಗೆ ₹42 ಸಾವಿರ ಕೋಟಿ ಬಜೆಟ್ ಮಂಡಿಸಲಾಗುತ್ತಿದೆ’ ಎಂದು ಹೇಳಿದರು.
ಕೆರಿಬಸಪ್ಪ ನಿಡುಗುಂದಿ, ಹನುಮಂತ ಗೌಡ ಚಂಡೂರ, ಇಒ ಸಂತೋಷ ಪಾಟೀಲ ಬಿರಾದಾರ, ಮಂಗಳೂರು ಗ್ರಾ.ಪಂ ಅಧ್ಯಕ್ಷ ಸಕ್ರಪ್ಪ, ತಹಶೀಲ್ದಾರ ಪ್ರಾಣೇಶ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಪಾಟೀಲ, ಎಸ್.ಎಂ.ದೇಸಾಯಿ, ಅಶೋಕ್ ತೋಟದ, ಅಪ್ಪಣ್ಣ ಜೋಶಿ, ಈರಣ್ಣ ಹಳ್ಳಿಕೇರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.