ADVERTISEMENT

ಚಳ್ಳೂರಕ್ಯಾಂಪ್‌: ನೀರಿನ ಸಮಸ್ಯೆಗೆ ಸಿಗದ ಮುಕ್ತಿ

ಕೆ.ಮಲ್ಲಿಕಾರ್ಜುನ
Published 22 ಜೂನ್ 2023, 6:18 IST
Last Updated 22 ಜೂನ್ 2023, 6:18 IST
   

ಕಾರಟಗಿ: ಅಲ್ಲಿ ಒಂದೂ ಬೋರ್‌ವೆಲ್‌ ಇಲ್ಲ. ಪಕ್ಕದ ಗ್ರಾಮದಲ್ಲಿ ಬೋರ್‌ ಹಾಕಿ ನೀರಿನ ಮೂಲ ಆಶ್ರಯಿಸಬೇಕಿದೆ. ಕುಡಿಯುವ ನೀರಿನ ಒಂದು ಘಟಕ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನೊಂದು ಘಟಕ ಹಾಳು ಬಿದ್ದು ಗಾಜು, ಯಂತ್ರೋಕರಣಗಳು ಕಿಡಿಗೇಡಿಗಳ ಪಾಲಾಗಿವೆ. ಶುದ್ಧ ಕುಡಿಯುವ ನೀರು ಪೂರೈಸುವ ಜೆಜೆಎಂ ಕೊಳವೆ ಸಂಪರ್ಕ ನೀಡಿದರೂ ಒಂದೂ ಹನಿ ನೀರು ಬರುತ್ತಿಲ್ಲ. ವಿದ್ಯುತ್‌ ಕೈ ಕೊಟ್ಟರೆ ನೀರು ಕೂಡ ಸಿಗುವುದಿಲ್ಲ!

ತಾಲ್ಲೂಕು ಕೇಂದ್ರ ಕಾರಟಗಿಯಿಂದ ಮೂರು ಕಿ.ಮೀ. ದೂರದಲ್ಲಿರುವ ಚಳ್ಳೂರಕ್ಯಾಂಪ್‌ನಲ್ಲಿ ಕಂಡು ಬಂದ ಪರಿಸ್ಥಿತಿಯಿದು. ರಸ್ತೆ ಸರಿಯಿಲ್ಲ ಎನ್ನುವ ಕಾರಣಕ್ಕೆ ಕ್ಷೇತ್ರದ ಹಿಂದಿನ ಶಾಸಕ ಬಸವರಾಜ ದಢೇಸೂಗೂರು ಅವರನ್ನು ಕಾರಿನಿಂದ ಕೆಳಗಡೆ ಇಳಿಸಿ ಪಾದಯಾತ್ರೆಯನ್ನು ಇಲ್ಲಿ ಮಾಡಿಸಲಾಗಿತ್ತು.

ಕ್ಯಾಂಪ್‌ ಪ್ರವೇಶಿಸುವ ಆರಂಭದಲ್ಲೇ ಕುಡಿಯುವ ನೀರಿನ ಘಟಕ ನಿರ್ವಹಣೆ ಇಲ್ಲದೇ ಹಾಳು ಬಿದ್ದ ಚಿತ್ರಣ ಕಾಣುತ್ತದೆ. ಕ್ಯಾಂಪ್‌ನವರು ಸಹಕಾರ ನೀಡಿದಾಗ ಕೆಲ ತಿಂಗಳು ಮಾತ್ರ ಘಟಕ ಕೆಲಸ ನಿರ್ವಹಿಸುತ್ತದೆ. ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರ ಘಟಕದತ್ತ ಸುಳಿದಿಲ್ಲ. ಈ ಘಟಕ ಕ್ಯಾಂಪ್‌ನ ಆರಂಭದಲ್ಲಿದೆ. ಪಕ್ಕ ಸರ್ಕಾರಿ ಶಾಲೆ ಇದ್ದು, ಸುತ್ತಲೂ ಕೃಷಿ ಕೂಲಿಕಾರರ ನಿವಾಸಗಳಿವೆ. ಜೆಜೆಎಂ ಯೋಜನೆಯಡಿ ಪ್ರತಿ ಮನೆಗೆ ಕುಡಿಯುವ ನೀರಿನ ಕೊಳವೆಯಿದ್ದರೂ ಪ್ರಯೋಜನವಿಲ್ಲ.

ADVERTISEMENT

‘ಕ್ಯಾಂಪ್‌ಗೆ ಬಂದು 20 ವರ್ಷವಾಗಿದೆ. ಗ್ರಾಮ ಪಂಚಾಯಿತಿ ಆಶ್ರಯ ಯೋಜನೆಯಡಿ ನಿವೇಶನ ನೀಡಿಲ್ಲ, ನಿವೇಶನ ಖರೀದಿಸಿ, ಮನೆ ಮಂಜೂರಿಗೆ ದುಂಬಾಲು ಬಿದ್ದರೂ ಕನಸು ನನಸಾಗಿಲ್ಲ. ಬಾಡಿಗೆ ಮನೆಯಲ್ಲಿದ್ದು, ಜೆಜೆಎಂ ಯೋಜನೆಯಡಿ ಹಾಕಿರುವ ನಲ್ಲಿಯಲ್ಲಿ ನೀರು ಬರುವುದನ್ನು ಇಂದಿಗೂ ಕಾಯುತ್ತಿದ್ದೇವೆ’ ಎನ್ನುತ್ತಾರೆ ಅಯ್ಯಪ್ಪ ಈಡಿಗೇರ ಹಾಗೂ ಮಹಾದೇವಮ್ಮ ದಂಪತಿ.

ಚಳ್ಳೂರಕ್ಯಾಂಪ್‌ಗೆ ನೀರಿನ ಮೂಲವಾದ ಕೆರೆ ನಿರುಪಯುಕ್ತವಾಗಿದೆ. ನೀರು ಜಾನುವಾರುಗಳಿಗೆ ಮಾತ್ರ ಬಳಸುವುದು ಕಂಡುಬಂತು. ಸುತ್ತಲ ಮನೆಗಳ ಮಲೀನ ನೀರಿನ ಬಸಿಯು ಕೆರೆಗೆ ಬರುತ್ತಿರುವುದರಿಂದ ಬಳಕೆಗೆ ಬರುತ್ತಿಲ್ಲ.

ಕಾರಟಗಿ ಬಳಿ ಎರಡು ಕಡೆ ಬೋರ್‌ ಹಾಕಿಸಿ ಒಂದರ ಬಗ್ಗೆ ವಿವಾದವಾಗಿ, ಇನ್ನೊಂದು ಬೋರ್‌ನ ನೀರು ಬಿಟ್ಟರೆ ರಾಜೀವಗಾಂಧಿ ಕುಡಿಯುವ ನೀರಿನ ಯೋಜನೆಯ ನೀರನ್ನು ಕ್ಯಾಂಪ್‌ನವರು ಆಶ್ರಯಿಸಿದ್ದಾರೆ. ಶುದ್ದ ಕುಡಿಯುವ ನೀರಿನ ಘಟಕದಲ್ಲಿ ₹5ಗೆ ದೊರೆಯುವ 20ಲೀಟರ್‌ ನೀರು ಕ್ಯಾಂಪ್‌ ಜನರಿಗೆ ಆಸರೆಯಾಗಿದೆ. ಈ ಕ್ಯಾಂಪ್‌ನಲ್ಲಿ ಸುಮಾರು 800ಕ್ಕೂ ಮನೆಗಳಿದ್ದು, 2500ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಎಲ್ಲಾ ಶ್ರೀಮಂತಿಕೆಯ ಕ್ಯಾಂಪ್‌ನಲ್ಲಿ ಬಹಳಷ್ಟು ಕೃಷಿ ಕಾರ್ಮಿಕರೂ ಇದ್ದಾರೆ. ಆದರೆ ಕುಡಿಯುವ ನೀರಿನ ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ.

ಕ್ಯಾಂಪ್‌ ಜನರಿಗೆ ಮೊದಲ ಆದ್ಯತೆಯಾಗಿ ನೀರು ಸಿಗುವಂತೆ ಮಾಡಬೇಕಾಗಿದೆ. ಅಲ್ಲಲ್ಲಿ ಬೋರ್‌ವೆಲ್‌ ಹಾಕಿಸಿ ನಿರಂತರವಾಗಿ ಕುಡಿಯುವ ನೀರು ಸಿಗುವಂತೆ ಮಾಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಳಜಿ ವಹಿಸಬೇಕು.

-ಜಿ. ರಾಜು, ಚಳ್ಳೂರಕ್ಯಾಂಪ್‌ ನಿವಾಸಿ

ನೀರಿನ ಸಮಸ್ಯೆ ಪರಿಹಾರಕ್ಕಾಗಿ ಗ್ರಾಮ ಪಂಚಾಯಿತಿ ವತಿಯಿಂದಲೂ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ. ಅಧಿಕಾರಿಗಳ ದುಂಬಾಲು ಬಿದ್ದು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವೆ. ನಮ್ಮ ಮನವಿಗೆ ಜನಪ್ರತಿನಿಧಿಗಳೂ ಸ್ಪಂದಿಸಬೇಕಿದೆ.

-ವಿಜಯಕುಮಾರ ಅಬ್ಬಿನಿ, ಚಳ್ಳೂರ ಗ್ರಾಪಂ ಅಧ್ಯಕ್ಷ

ಚಳ್ಳೂರಕ್ಯಾಂಪ್‌ಗೆ ಕುಡಿಯುವ ನೀರು ಸರಬರಾಜು ವಿಭಾಗದ ಎಂಜಿನಿಯರ್‌ ಜೊತೆ ಭೇಟಿ ನೀಡಿ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುವೆ.

-ನರಸಪ್ಪ ಎನ್‌., ತಾಲ್ಲೂಕು ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.