ADVERTISEMENT

ಜಿಲ್ಲಾ ವನಮಹೋತ್ಸವಕ್ಕೆ ಚಾಲನೆ

ವಿಶ್ವ ಪರಿಸರ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಭಾಗಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 20:06 IST
Last Updated 5 ಜೂನ್ 2020, 20:06 IST
ಕೊಪ್ಪಳದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಎಲ್‌. ವಿಜಯಲಕ್ಷ್ಮೀ ದೇವಿ ಅವರು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು
ಕೊಪ್ಪಳದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಎಲ್‌. ವಿಜಯಲಕ್ಷ್ಮೀ ದೇವಿ ಅವರು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು   

ಕೊಪ್ಪಳ: ವಿಶ್ವ ಪರಿಸರ ದಿನದ ಅಂಗವಾಗಿ ಜಿಲ್ಲಾ ಅರಣ್ಯ ಇಲಾಖೆಯಿಂದ ಶುಕ್ರವಾರ ನಗರದ ಕಿನ್ನಾಳ ರಸ್ತೆಯ ಬಸವೇಶ್ವರ ಸರ್ಕಲ್‌ನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ಬಳಿಕ ಬ್ಯಾನರ್ ಮೇಲೆ ‘ಪರಿಸರ ಇದ್ದಲ್ಲಿ ಮಾತ್ರ ಮಾನವ ಜನಾಂಗ ಉಳಿಯುತ್ತೆ‘ ಎಂಬ ಘೋಷ ವಾಕ್ಯ ಬರೆದ ಸಚಿವರು, ‘ಸಸ್ಯ ಸಂಕುಲದಿಂದಲೇ ನಾವೆಲ್ಲ ಬದುಕಿದ್ದೇವೆ. ನಾವು ಉಸಿರಾಡುವ ಗಾಳಿ ಸಸ್ಯಗಳಿಂದ ಮಾತ್ರ ಉತ್ಪಾದಿಸಲು ಸಾಧ್ಯ. ಆದ್ದರಿಂದ ನಾವೆಲ್ಲ ಗಿಡಗಳನ್ನು ನೆಡೋಣ, ರಾಜ್ಯವನ್ನು ಹಸಿರಾಗಿಸೋಣ‘ ಎಂದರು.

ಜಿಲ್ಲೆಯ ಉಪಅರಣ್ಯ ಸಂರಕ್ಷಣಾಧಿಕಾರಿ ಯಶ್‌ಪಾಲ್ ಕ್ಷೀರಸಾಗರ ಮಾತನಾಡಿ, ಜಿಲ್ಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರ ಹಸಿರೀಕರಣ ಯೋಜನೆಯಡಿ 3 ಹೆಕ್ಟೇರ್ ಪ್ರದೇಶದಲ್ಲಿ 900 ಸಸಿಗಳನ್ನು ನೆಡುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದರು.

ADVERTISEMENT

ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸ್ಗೂರು, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ್ ಪಾಟೀಲ್, ತಾಲ್ಲೂಕು ಅರಣ್ಯಾಧಿಕಾರಿ ಎ.ಎಚ್.ಮುಲ್ಲಾ ಇದ್ದರು.

ನ್ಯಾಯಾಲಯ ಆವರಣದಲ್ಲಿ ವಿಶ್ವ ಪರಿಸರ ದಿನ

ಕೊಪ್ಪಳದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಇತರೆ ಸಂಘ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಎಲ್‌. ವಿಜಯಲಕ್ಷ್ಮೀ ದೇವಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಜಿಲ್ಲಾ ಹೆಚ್ಚುವರಿ, ಸೆಷನ್ಸ್‌ ಮತ್ತು ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಶಂಕರ ಎಂ.ಜಾಲವಾದಿ, ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್‌.ರೇಖಾ, ಹಿರಿಯ ಸಿವಿಲ್‌ ನ್ಯಾಯಾಧೀಶ ಟಿ.ಶ್ರೀನಿವಾಸ, ಮುಖ್ಯ ನಾಯಕ ದಂಡಾಧಿಕಾರಿ ಎಸ್‌.ಕುಮಾರ, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಮನು ಶರ್ಮ, ಪ್ರಾಧಿಕಾರದ ಆಡಳಿತ ಸಹಾಯಕ ಜಿ.ಶಿವಕುಮಾರ ಸೇರಿದಂತೆ ವಕೀಲರು, ನಗರಸಭೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

ಬಳಿಕ ಪರಿಸರ ದಿನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.