ADVERTISEMENT

ಕೊಪ್ಪಳ: ಜಿಲ್ಲೆಯಲ್ಲಿ ಜಾತ್ರೆ, ಸಮಾರಂಭ ರದ್ದು

ಪ್ರಗತಿ ಪರಿಶೀಲನಾ ಸಭೆ: ಕುಡಿಯುವ ನೀರಿನ ಯೋಜನೆಗೆ ಆದ್ಯತೆ –ಸಚಿವ ಪಾಟೀಲ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 9:05 IST
Last Updated 17 ಏಪ್ರಿಲ್ 2021, 9:05 IST
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಬಿ.ಸಿ.ಪಾಟೀಲ ಮಾತನಾಡಿದರು
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಬಿ.ಸಿ.ಪಾಟೀಲ ಮಾತನಾಡಿದರು   

ಕೊಪ್ಪಳ: ‘ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಜಾತ್ರೆ ಸೇರಿದಂತೆ ಹೆಚ್ಚು ಜನ ಸೇರುವ ಎಲ್ಲ ಸಭೆ, ಸಮಾರಂಭಗಳನ್ನು ರದ್ದುಪಡಿಸಿ ಆದೇಶ ಹೊರಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಅಳವಂಡಿ-ಬೆಟಗೇರಿ ಕುಡಿಯುವ ನೀರಿನ ಯೋಜನೆಗೆ ವಿದ್ಯುತ್ ಸಂಪರ್ಕ ಒದಗಿಸಬೇಕು. ಕಾಮಗಾರಿ ಪೂರ್ಣಗೊಂಡ ನಂತರ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು. ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಬೇಕು. ಕಳಪೆ ಕಾಮಗಾರಿ ಕೈಗೊಂಡಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಮುಂಡರಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಪೂರ್ಣಗೊಂಡ ಹಂತಗಳ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ನೀರು ಒದಗಿಸಬೇಕು. ಈ ಯೋಜನೆಯಲ್ಲಿ ಅಕ್ರಮವೆಸಗಿದವರ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಬೇಕು ಎಂದು ಈ ಹಿಂದಿನ ಕೆ.ಡಿ.ಪಿ ಸಭೆಯಲ್ಲಿ ಸೂಚನೆ ನೀಡಲಾಗಿತ್ತು. ಅದಕ್ಕೂ ಮೊದಲು ಇಲಾಖಾ ವಿಚಾರಣೆಗೆ ಕ್ರಮ ಕೈಗೊಳ್ಳಬೇಕು.

ADVERTISEMENT

ಇದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ವಿವರ ಸಹಿತ ಪತ್ರ ಬರೆದು, ಇಲಾಖಾ ವಿಚಾರಣೆಗೆ ಕ್ರಮ ಕೈಗೊಳ್ಳಿ’ ಎಂದು ಅವರು ಜಿ.ಪಂ. ಸಿಇಒಗೆ ಸೂಚನೆ ನೀಡಿದರು.

ಹೊಸಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಮಹಿಳೆಯರು ಗ್ರಾಮದ ಟೀ ಅಂಗಡಿಗಳಲ್ಲಿ, ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಯುವಕರು ದಾರಿ ತಪ್ಪುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

ಗ್ರಾಮದ ಎಲ್ಲ ಅಂಗಡಿಗಳಿಗೆ ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿಯಾಗಿ ಭೇಟಿ ನೀಡಿ ಮದ್ಯ ವಶಗೊಳಿಸಿಕೊಂಡು ಹೋಟೆಲ್ ಮಾಲೀಕರ ವಿರುದ್ಧ ಹಾಗೂ ಬಾಟಲ್‌ಗಳ ಮೇಲೆ ಮುದ್ರಿತಗೊಂಡ ಅಂಗಡಿ ಹೆಸರಿನ ಅಧಾರದಲ್ಲಿ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅವರು ಪೊಲೀಸ್ ಅಧೀಕ್ಷಕರಿಗೆ ಸೂಚನೆ ನೀಡಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯಿತಿ ಕೆ.ಡಿ.ಪಿ ಸದಸ್ಯ ಅಮರೇಶ ಕರಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಮೂರ್ತಿ, ಎಸ್‌ಪಿ ಟಿ.ಶ್ರೀಧರ್,ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು ಟಿ. ಅವರು ಈ ವೇಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.