ADVERTISEMENT

ಕುಷ್ಟಗಿ | ಮುಂಗಾರಿಗೆ ಇಳೆ ಸಜ್ಜು; ಮಳೆಯತ್ತ ಚಿತ್ತ

ಮತ್ತೆ ಬಂತು ಮುಂಗಾರು; ಕೃತಿಕಾ ಮಳೆ ನಿರೀಕ್ಷೆಯಲ್ಲಿ ಅನ್ನದಾತ

ನಾರಾಯಣರಾವ ಕುಲಕರ್ಣಿ
Published 12 ಮೇ 2025, 6:12 IST
Last Updated 12 ಮೇ 2025, 6:12 IST
<div class="paragraphs"><p><strong>ಕುಷ್ಟಗಿ ಬಳಿ ರೈತ ಹೊಲಗಳನ್ನು ಹದಗೊಳಿಸುವಲ್ಲಿ ನಿರತನಾಗಿದ್ದು ಕಂಡುಬಂದಿತು</strong></p></div>

ಕುಷ್ಟಗಿ ಬಳಿ ರೈತ ಹೊಲಗಳನ್ನು ಹದಗೊಳಿಸುವಲ್ಲಿ ನಿರತನಾಗಿದ್ದು ಕಂಡುಬಂದಿತು

   

ಕುಷ್ಟಗಿ: ಬೇಸಿಗೆ ಬಿರುಬಿಸಿಲಿಗೆ ಮೈಯೊಡ್ಡಿ ಕಾಯ್ದ ಬಾಣಲೆಯಂತಾಗಿರುವ ಇಳೆ ಮಳೆಗಾಗಿ ಕಾತರಿಸುತ್ತಿದೆ. ಅದೇ ರೀತಿ ಜಾತ್ರೆ, ಹಬ್ಬ, ಮದುವೆ ಇತ್ಯಾದಿ ಕಾರ್ಯಕ್ರಮಗಳನ್ನು ಮುಗಿಸಿ ಕೆಲ ದಿನಗಳ ಬಿಡುವಿನ ನಂತರ ರೈತ ಮತ್ತೆ ಮುಂಗಾರು ಹಂಗಾಮಿನ ಮಳೆರಾಯನ ಕಡೆಗೆ ದೃಷ್ಟಿ ಹರಿಸಿ ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳತ್ತ ದೃಷ್ಟಿ ಹರಿಸಿದ್ದಾನೆ.

ಮುಂಗಾರು ಆರಂಭ ಕುರಿತಂತೆ ಸರ್ಕಾರಿ ಲೆಕ್ಕ ಏನೇ ಇರಲಿ ರೈತರಿಗೆ ಮಳೆ ನಕ್ಷತ್ರಗಳೇ ಮಾನದಂಡ. ಈಗಾಗಲೇ ಅಶ್ವಿನಿ, ಭರಣಿ ಮಳೆ ನಕ್ಷತ್ರಗಳ ಒಂದು ತಿಂಗಳ ಅವಧಿ ಮುಗಿದಿದ್ದು, ಮೇ 12ರಿಂದ ಕೃತ್ತಿಕಾ ನಕ್ಷತ್ರದ ಮಳೆ ಕಾಲಿಟ್ಟಿದೆ. ಹಾಗೆ ನೋಡಿದರೆ ಮುಂಗಾರಿನ ಮಳೆಯ ಅಬ್ಬರ ಕಡಿಮೆಯೇ ಇದೆ. ‘ಅಶ್ವಿನಿ ಮಳೆಯಾದರೆ ಶಿಶುವಿಗೂ ನೀರಿಲ್ಲ’ ಎಂಬ ಗಾದೆ ಈ ಭಾಗದ ರೈತ ವಲಯದಲ್ಲಿ ಚಾಲ್ತಿಯಲ್ಲಿದೆ. ಅಂದರೆ ಆರಂಭದಲ್ಲಿ ಅಶ್ವಿನಿ ಬಹಳಷ್ಟು ಸುರಿದರೆ ಬರುವ ಮಳೆಗಳು ಅಷ್ಟಕ್ಕಷ್ಟೆ ಎಂಬ ನಂಬಿಕೆ ಇದೆ.

ADVERTISEMENT

ಅಶ್ವಿನಿ ಅಲ್ಲಲ್ಲಿ ಹನಿಸಿದ್ದನ್ನು ಬಿಟ್ಟರೆ ನೆಲ ತೇವಗೊಳ್ಳಲಿಲ್ಲ. ಭರಣಿ ಮಳೆ ಮಾತ್ರ ಅಲ್ಲಲ್ಲಿ ಒಂದಷ್ಟು ಉತ್ತಮ ರೀತಿಯಲ್ಲಿ ಸುರಿದಿದೆ. ಹಿಂದೆ ಮಳೆಯಾಶ್ರಯದಲ್ಲಿ ಮುಂಗಾರು ಜೋಳವೇ ಪ್ರಧಾನ ಬೆಳೆಯಾಗಿರುತ್ತಿತ್ತು. ಹಾಗಾಗಿ ರೋಹಿಣಿ ಮಳೆಯ ಬಗ್ಗೆ ರೈತರಲ್ಲಿ ಬಹಳಷ್ಟು ಭರವಸೆ ಇದೆ. ಆದ್ದರಿಂದ ‘ರೋಹಿಣಿ ಮಳೆಯಾದರೆ ಓಣಿ ತುಂಬ ಜೋಳ’ ಎಂಬ ಮಾತು ಕೇಳಿಬರುತ್ತಿತು. ಈಗ ಜೋಳದ ಬೀಜಗಳೇ ಇಲ್ಲದಿರುವುದು ಬೇರೆ ಮಾತು.

ಮುಂಗಾರು ಪೂರ್ವದಲ್ಲಿ ಮಳೆಯಾದರೆ ಕಸಕಡ್ಡಿ ಮುಕ್ತವಾಗಿ ಹಸನಾಗಿರುವ ಹೊಲಗಳನ್ನು ರಂಟೆ, ಕುಂಟೆ ಹೊಡೆದು ಹದಗೊಳಿಸಿಕೊಳ್ಳಲಾಗುತ್ತದೆ. ಆದ್ದರಿಂದ ಕೃತಿಕಾ, ರೋಹಿಣಿ ಮಳೆಯಾದ ಸಂದರ್ಭದಲ್ಲಿ ನೇರವಾಗಿ ಬಿತ್ತನೆಗೆ ಬಹಳಷ್ಟು ಪ್ರಶಸ್ತವಾಗುತ್ತಿತ್ತು. ಆದರೆ ಈವರೆಗೂ ಹೊಲಗಳನ್ನು ಬಿತ್ತನೆಗೆ ಸಜ್ಜುಗೊಳಿಸುವಷ್ಟರ ಮಟ್ಟಿಗೆ ಹದವರಿತ ಮಳೆಯಾಗಿಲ್ಲ. ಆದರೂ ರೈತರು ಹೊಲಗಳನ್ನು ಹರಗಿ ಬಿತ್ತನೆಗೆ ಸಜ್ಜುಗೊಳಿಸಿರುವುದು, ಕೊಟ್ಟಿಗೆ ಗೊಬ್ಬರಗಳನ್ನು ಹೊಲದಲ್ಲಿ ಸಂಗ್ರಹಿಸಿರುವುದು ಕಂಡುಬರುತ್ತಿದೆ. ಹೊಲಗಳು ಹದಗೊಂಡರೆ ಬಿಸಿಲಿಗೆ ಮಣ್ಣಿನಲ್ಲಿರುವ ಕೀಟಗಳು ಹೊರಬಿದ್ದು ಸಾಯುತ್ತವೆ. ಅಲ್ಲದೆ ಮಳೆ ನೀರು ಹರಿದುಹೋಗದೆ ಹೊಲದಲ್ಲೇ ಇಂಗಿ ಬಹುಕಾಲ ತೇವಾಂಶ ಉಳಿದು ಮುಂದೆ ಅಲ್ಪಸ್ವಲ್ಪ ಮಳೆಯಾದರೂ ಬೆಳೆಗಳಿಗೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಕೆ.ಬೋದೂರಿನ ರೈತ ಹನುಮಗೌಡ ಪಾಟೀಲ.

ಬದಲಾದ ಬೆಳೆ: ಇತ್ತೀಚಿನ ದಿನಗಳಲ್ಲಿ ರೈತರು ಆಹಾರ ಧಾನ್ಯದ ಬದಲು ಹೆಚ್ಚು ಹಣ ತರುವ ಬೆಳೆಗಳತ್ತ ಗಮನಹರಿಸಿರುವುದು ಸಾಮಾನ್ಯವಾಗಿದೆ. ಹಿಂದೆ ಮುಂಗಾರಿನಲ್ಲಿ ಎರೆ ಜಮೀನಾದರೆ ಇಡಿ ಪ್ರದೇಶ ಅಲ್ಪಾವಧಿ ಹೆಸರು ಬಿತ್ತನೆ ಮಾಡುತ್ತಿದ್ದರು. ಮಸಾರಿ ಜಮೀನಿನಲ್ಲೂ ಹೆಸರು ಬೆಳೆಯಲಾಗುತ್ತಿತ್ತು. ಆದರೆ ಕಳೆದ ವರ್ಷದಿಂದ ಹೆಸರಿನ ಪ್ರದೇಶ ಶೇ 25ಕ್ಕಿಂತಲೂ ಕಡಿಮೆಯಾಗಿದ್ದು ಬಹುತೇಕ ರೈತರ ಚಿತ್ತ ತೊಗರಿಯತ್ತ ಇದೆ. ಇದು ವರ್ಷಪೂರ್ತಿ ಒಂದೇ ಬೆಳೆಯಾಗಿದ್ದು ಕಳೆದ ವರ್ಷ ತೊಗರಿ ಬಿತ್ತಿದ ರೈತರು ಉತ್ತಮ ಆದಾಯ ಪಡೆದುಕೊಂಡಿದ್ದರು. ಹಾಗಾಗಿ ಈ ಬಾರಿ ತೊಗರಿ ಕ್ಷೇತ್ರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನಂತರ ಪ್ರಮುಖ ಬೆಳೆ ಮೆಕ್ಕೆಜೋಳದ್ದು. ಕೆಲ ವರ್ಷಗಳ ಹಿಂದೆ ಮುಖ್ಯಬೆಳೆಯಾಗಿದ್ದ ಸಜ್ಜೆಯತ್ತ ರೈತರು ಹಿಂದೇಟು ಹಾಕುತ್ತಿರುವುದು ಸಾಮಾನ್ಯ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.

ಬೆಳೆ ಯಾವುದಾದರೂ ಆಗಲಿ ಈ ಬಾರಿಯೂ ಅಗತ್ಯಕ್ಕೆ ತಕ್ಕಂತೆ ಮಳೆ ಬಂದರೆ ಸಾಕು ಉತ್ತಮ ಫಸಲು ಕೈಗೆ ಬರುತ್ತದೆ ಎಂಬ ಭರವಸೆಯ ನಿರೀಕ್ಷೆಯಲ್ಲಿ ರೈತ ಮುಂಗಾರಿನ ಸ್ವಾಗತಕ್ಕೆ ಸಜ್ಜಾಗಿದ್ದಾನೆ.

ಹೆಸರು ಕ್ಷೇತ್ರ ಆವರಿಸಿದ ತೊಗರಿ

‘ಹಿಂದಿನಂತೆ ಈಗ ಹೆಸರು ಕಾಯಿ (ಬುಡ್ಡಿ) ಬಿಡಿಸುವವರೇ ಸಿಗುವುದಿಲ್ಲ. ಮಳೆ ಬರುತ್ತಿದ್ದರೆ ಹೊಲದಲ್ಲಿ ಬುಡ್ಡಿ ಬಿಡಿಸಲಾಗದೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಹ ಉದಾಹರಣೆಗಳಿವೆ. ಆ ರಗಳೆಯೇ ಬೇಡ ಎಂದು ಒಂದೇ ಬೆಳೆಯಾದರೂ ತೊಗರಿ ಬೆಳೆಗೇ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ಹಿರೇಮನ್ನಾಪುರದ ರೈತ ಲಕ್ಷ್ಮಣ ಚಾಮಲಾಪುರ ಹೇಳಿದರು.

ಕೂಲಿಕಾರ್ಮಿಕರ ಸಮಸ್ಯೆ ಹೆಚ್ಚುತ್ತಿರುವುದನ್ನು ಅವರು ಪರೋಕ್ಷವಾಗಿ ವಿವರಿಸಿದರು. ಕಳೆದ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಮೆಕ್ಕೆಜೋಳ, ತೊಗರಿ, ಸಜ್ಜೆ, ಕಡಲೆ ಇತರೆ ಬೆಳೆಗಳು ರೈತರ ಕೈಹಿಡಿದು ಹಿಂದಿನ ವರ್ಷಗಳ ಕಹಿ ನೆನಪನ್ನು ಮರೆಯಿಸಿದ್ದವು ಎನ್ನುತ್ತಾರೆ ರೈತರು.

ಹೊಲ ಹದ ಮಾಡಿ ಬಿತ್ತನೆಗೆ ಸಜ್ಜುಗೊಳಿಸಿದ್ದೇವೆ. ಒಂದೆರಡು ಮಳೆಯಾಗಿ ತಂಪಾದರೆ ಬಿತ್ತನೆ ಆರಂಭವಾಗುತ್ತದೆ. ಇನ್ನೇನು ಮಳೆರಾಯನ ಕೃಪೆಯಾಗಬೇಕಷ್ಟೆ.
ನಡುಗಡ್ಡೆಪ್ಪ ಜಗ್ಗಲರ, ತೆಗ್ಗಿಹಾಳ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.