ADVERTISEMENT

ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ: ನವೀನ್, ಸಾಲೋಣಿ ನಾಗಪ್ಪ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 6:46 IST
Last Updated 29 ಮಾರ್ಚ್ 2024, 6:46 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಕಾರಟಗಿ/ಕೊಪ್ಪಳ: ಕಾರಟಗಿ ಪಟ್ಟಣದಲ್ಲಿ ಬುಧವಾರ ನಡೆದ ಬಿಜೆಪಿ ಬೂತ್‌ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎನ್ನುವ ಆರೋಪದ ಮೇಲೆ ಮಾಜಿ ಸಚಿವ ಸಾಲೋಣಿ ನಾಗಪ್ಪ ಮತ್ತು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವೀನ ಗುಳಗಣ್ಣನವರ ವಿರುದ್ಧ ಚುನಾವಣಾಧಿಕಾರಿಗಳು ಕಾರಟಗಿ ಪೊಲೀಸ್‌ ಠಾಣೆಗೆ ಗುರುವಾರ ದೂರು ನೀಡಿದ್ದಾರೆ. ರಾತ್ರಿ ಎಫ್‌ಐಆರ್‌ ದಾಖಲಾಗಿದೆ.

ಸಾಲೋಣಿ ನಾಗಪ್ಪ ‘ಕಳ್ಳ ತಂಗಡಗಿಯವರು ಸಾಯುವ ತನಕವೂ ಗಟಾರ ತೊಳೆದರೂ ಈ ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯವಾಗುವುದಿಲ್ಲ’ ಎಂದು ಆವೇಶದಿಂದ ಮಾತನಾಡಿದ್ದಾರೆ. ನವೀನ ’ತಂಗಡಗಿಯವರ ಬಗ್ಗೆ ನಿಮ್ಮಂತ ಲಜ್ಜೆಗೆಟ್ಟ ವ್ಯಕ್ತಿ ಯಾರಾದರೂ ಇದ್ದಾರಾ? ಮನುಷ್ಯತ್ವ ಇದೆಯಾ? ಭಂಡ ತಂಗಡಗಿ ನಮ್ಮ ಹುಡುಗರನ್ನು ಮುಟ್ಟಲಿ ನೋಡೋಣ’ ಎಂದು ಆವೇಶದಿಂದ ಮಾತನಾಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ವೈಯಕ್ತಿಕ ಚಾರಿತ್ರಿಕ ನಡೆತೆಗೆ ಸಂಬಂಧಿಸಿ ಪ್ರಚೋದನೆ ನೀಡಿದ್ದಾರೆ ಎಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್‌ ತಂಡದ ಮುಖ್ಯಸ್ಥರಾಗಿರುವ ಗಂಗಾವತಿ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಗ್ಯಾನನಗೌಡ ನಂದನಗೌಡ ದೂರಿನಲ್ಲಿ ತಿಳಿಸಿದ್ದಾರೆ. ಇದೇ ಅಂಶ ಎಫ್‌ಐಆರ್‌ನಲ್ಲಿಯೂ ಉಲ್ಲೇಖಿಸಲಾಗಿದೆ. 

ಕೆಲ ದಿನಗಳ ಹಿಂದೆ ಕಾಂಗ್ರೆಸ್‌ ಪೂರ್ವಭಾವಿ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ ’ಮೋದಿ ಮೋದಿ ಎನ್ನುವ ಹುಡುಗರನ್ನು ಹೊಡೆಯಬೇಕು’ ಎಂದಿದ್ದರಿಂದ ಎಫ್‌ಐಆರ್‌ ದಾಖಲಾಗಿತ್ತು.

ADVERTISEMENT

ದೂರು (ಕೊಪ್ಪಳ ವರದಿ): ಸಚಿವ ಶಿವರಾಜ ತಂಗಡಗಿ ಹಾಗೂ ಅವರ ತಾಯಿ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿರುವ ಬಿಜೆಪಿ ಮುಖಂಡ ಸಿ.ಟಿ. ರವಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಾತಿನಿಂದನೆ ಪ್ರಕರಣ ದಾಖಲಿಸಬೇಕು ಎಂದು ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪೂಜಾರ ಕೊಪ್ಪಳ ನಗರ ಠಾಣೆ ಪೊಲೀಸರಿಗೆ ಗುರುವಾರ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.