ADVERTISEMENT

ಸಂಭ್ರಮ, ಸಡಗರದ ಹಿಂದೂ ಮಹಾಮಂಡಳಿ ಗಣೇಶ ಮೂರ್ತಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 5:33 IST
Last Updated 21 ಸೆಪ್ಟೆಂಬರ್ 2021, 5:33 IST
ಕೊಪ್ಪಳದಲ್ಲಿ ಭಾನುವಾರ ಹಿಂದೂ ಮಹಾಗಣಪತಿ ಮೆರವಣಿಗೆ ಗಡಿಯಾರ ಕಂಭ ವೃತ್ತದ ಮೂಲಕ ತೆರಳಿತು
ಕೊಪ್ಪಳದಲ್ಲಿ ಭಾನುವಾರ ಹಿಂದೂ ಮಹಾಗಣಪತಿ ಮೆರವಣಿಗೆ ಗಡಿಯಾರ ಕಂಭ ವೃತ್ತದ ಮೂಲಕ ತೆರಳಿತು   

ಕೊಪ್ಪಳ: ಭಾನುವಾರ ರಾತ್ರಿ 9ಕ್ಕೆ ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆ ಈಶ್ವರ ಪಾರ್ಕ್‌ನಿಂದ ಆರಂಭವಾಗಿ ಸೋಮವಾರ 11 ಗಂಟೆಯವರೆಗೆ ನಡೆಯಿತು.

ಇದರಿಂದ ಎಲ್ಲ ರಸ್ತೆಗಳಲ್ಲಿ ಯುವಕರೇ ಕಂಡು ಬಂದರು. ಗಂಜ್‌ ವೃತ್ತ ಹಾಗೂ ಅಶೋಕ ವೃತ್ತದಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿತ್ತು. ಎಲ್ಲಂದರಲ್ಲಿ ಜನ ಕಂಡು ಬಂದು ಸರ್ಕಾರದ ಮಾರ್ಗಸೂಚಿ ಏನು ಎನ್ನುವುದೇ ಗೊಂದಲವಾಯಿತು. ಡಿಜೆ ಸದ್ದಿನ ಅಬ್ಬರ ಸೇರಿದಂತೆ ಪ್ರತಿವರ್ಷ ನಡೆದ ಎಲ್ಲ ರೀತಿಯ ಮೆರವಣಿಗೆ ಕಂಡು ಬಂತು. ಇದಕ್ಕೆ ಸಂಬಂಧಿಸಿದ ಆಡಳಿತ ಅನುಮತಿ ಕೂಡಾ ನೀಡಲಾಗಿದೆ ಎಂದು ತಿಳಿದುಬಂತು. ಇದಕ್ಕಾಗಿ ಮೆರವಣಿಗೆ ವಿಳಂಬವಾಗಿ ಆರಂಭವಾಯಿತು.

ಕೊಪ್ಪಳದ ಹಿಂದೂ ಮಹಾಮಂಡಳಿಯ ಗಣೇಶ ವಿಸರ್ಜನೆ ಒಂದು ದಿನ ಮೊದಲೇ ಅಂದರೆ ಭಾನುವಾರ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದರು. ಅದರಂತೆ ಡಿಜೆ ತರಿಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮನೆಯ ಕಾಂಪೌಂಡ್ ಒಂದರ ಒಳಗೆ ಇಡಲಾಗಿತ್ತು. ಆದರೆ ಪೊಲೀಸ್ ಇಲಾಖೆಯಿಂದ ಡಿಜೆಗೆ ಅನುಮತಿ ಇಲ್ಲ. ಆದ್ದರಿಂದ ಅದನ್ನು ಬಳಸಬಾರದು ಎಂದು ತಿಳಿಸಲಾಯಿತು. ಅಲ್ಲದೆ ಡಿಜೆ ಇಡಲಾಗಿದ್ದ ಆ ಮನೆಯ ಕಾಂಪೌಡ್ ಗೇಟಿಗೆ ಬೀಗ ಜಡಿಯಲಾಗಿತ್ತು. ಸ್ಥಳದಲ್ಲಿ ಕೊಪ್ಪಳ ತಹಶೀಲ್ದಾರ್ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭದ್ರತೆ ಒದಗಿಸಿದ್ದರು.

ADVERTISEMENT

ಬಳಿಕ ಸ್ಥಳಕ್ಕೆ ಬಂದ ಸಂಘಟಕರು ಅವರಿಗೆ, ಇವರಿಗೆ ಫೋನ್ ಮಾಡಿ ಡಿಜೆಗೆ ಅನುಮತಿ ಪಡೆದುಕೊಳ್ಳುವ ಧಾವಂತದಲ್ಲಿದ್ದದ್ದು ಕಂಡು ಬಂತು. ಮೊದಲು ಮೊದಲು ಒಪ್ಪದ ಪೊಲೀಸ್ ಅಧಿಕಾರಿಗಳು ಒತ್ತಡದಿಂದಾಗಿ ಕೊನೆಗೂ ಡಿಜೆ ಬಳಸಲು ಅನುಮತಿ ನೀಡಿದರು. ಈ ವೇಳೆ ಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದನ್ನು ಸರಿಪಡಿಸಲು ಪೊಲೀಸರು ಸಾಕಷ್ಟು ಪರಿಶ್ರಮ ಪಟ್ಟರು.

ಸುಮಾರು 12 ಗಂಟೆ ಸುಮಾರಿಗೆ ಆರಂಭವಾದ ಡಿಜೆ ಯೊಂದಿಗಿನ ರಂಗಿನ ಮೆರವಣಿಗೆ ಸೋಮವಾರ ಬೆಳಿಗ್ಗೆ 6.30 ರವರೆಗೂ ನಡೆಯಿತು. ಈ ಬಾರಿ ಗಣೇಶ ವಿಸರ್ಜನೆ ವೇಳೆ ಡಿಜೆ ಅನುಮತಿ ಪಡೆದ ಏಕೈಕ ಗಣಪತಿ ಇದಾಗಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರು. ಬೆಳಗಿನವರೆಗೂ ಅವರೆಲ್ಲ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.

ಜನರನ್ನು ನಿಯಂತ್ರಿಸಲು ಇಡೀ ದಿನ ಪೊಲೀಸರು ಹೈರಾಣಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.