ಕೊಪ್ಪಳ: ರಸ್ತೆಗುಂಟ ಉರುಳಿ ಬಿದ್ದ ಗರಡಿ ಮನೆಯ ಕಟ್ಟಡದ ಅವಶೇಷಗಳು, ಪಾಳು ಬಿದ್ದಿರುವ ಒಳಗಿನ ಆವರಣ, ಗರಡಿ ಮನೆಯ ಗುರುತೇ ಸಿಗದಂತೆ ಆಗಿರುವ ಕಟ್ಟಡ, ಗರಡಿ ಮನೆ ಇತ್ತು ಎನ್ನುವ ಕುರುಹು ಉಳಿದಿರುವ ಪೈಲ್ವಾನರು ಪ್ರವೇಶಿಸುವ ಸಣ್ಣ ಪ್ರವೇಶದ್ವಾರ ಹಾಗೂ ಕಡಿಮೆಯಾದ ಪೈಲ್ವಾನರ ಸಂಖ್ಯೆ.
ಇದು ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿರುವ ಗರಡಿ ಮನೆಗಳ ಮತ್ತು ಪೈಲ್ವಾನರ ಸ್ಥಿತಿ. ಕುಸ್ತಿ ಕೇವಲ ಕ್ರೀಡೆಯದಲ್ಲದೇ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅನುಕೂಲಕಾರಿ ಎನ್ನುವ ಕಾರಣಕ್ಕಾಗಿ ಮೊದಲಿನಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರ ವ್ಯಾಪ್ತಿಯಲ್ಲಿ ತಾಲೀಮುಗಳು ನಡೆಯುತ್ತಿದ್ದವು. ಊರಿನ ದೇವಸ್ಥಾನದ ಆವರಣ, ಸಮುದಾಯ ಭವನದ ಮುಂಭಾಗ, ಶಾಲಾ ಆವರಣ ಹೀಗೆ ಅನೇಕ ಕಡೆ ಪೈಲ್ವಾನರು ತಮ್ಮ ಶಕ್ತಿ ಸಾಬೀತು ಮಾಡುತ್ತಿದ್ದರು.
ವಿಜಯನಗರ ಸಾಮ್ರಾಜ್ಯದಲ್ಲಿ ಖ್ಯಾತಿ ಪಡೆದಿದ್ದ ಕುಸ್ತಿಯ ಪ್ರಭಾವ ನೆರೆ ಜಿಲ್ಲೆ ಕೊಪ್ಪಳದಲ್ಲಿಯೂ ಇದೆ. ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಜಾತ್ರೆಗಳು ನಡೆದಾಗ ಕುಸ್ತಿ ಪಂದ್ಯಗಳನ್ನು ಆಡಿಸಲಾಗುತ್ತದೆ. ಎಂಟು ವರ್ಷಗಳ ಹಿಂದೆ ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆಯ ಸಮುಯದಲ್ಲಿ ಕುಸ್ತಿ ಆಡಿಸಿ ನಿಲ್ಲಿಸಲಾಗಿತ್ತು. ಇತ್ತೀಚೆಗಿನ ಎರಡು ವರ್ಷಗಳಿಂದ ನಿರಂತರವಾಗಿ ಸ್ಪರ್ಧೆಗಳು ನಡೆಯುತ್ತಿವೆ. ಪೈಲ್ವಾನರ ಪಟ್ಟು, ಮರುಪಟ್ಟು, ಚಿತ್, ಸಾಹಸ ಮನೋಭಾವ, ಅಂಕ ಗಳಿಸಲು ಮಾಡುತ್ತಿದ್ದ ಜಿದ್ದಾಜಿದ್ದು ಈ ಎಲ್ಲ ಹೋರಾಟಗಳಿಗೂ ಸಾಂಪ್ರದಾಯಿಕ ಮಣ್ಣಿನ ಅಖಾಡ ಸಾಕ್ಷಿಯಾಗುತ್ತಿತ್ತು.
ಕೊಪ್ಪಳದ ಹೆಸರಾಂತ ಪೈಲ್ವಾನರಲ್ಲಿ ಪ್ರಮುಖರಾದ ಭೀಮಸಿ ಗಾಳಿ 300ಕ್ಕೂ ಹೆಚ್ಚು ಪಂದ್ಯಗಳಲ್ಲಿ ಆಡಿದ್ದಾರೆ. 1977ರಲ್ಲಿ ಮೈಸೂರಿನಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಜಿಲ್ಲೆಯನ್ನು ಪ್ರತಿನಿಧಿಸಿ ಕುಸ್ತಿಯಾಡಿದ್ದರು. ಹಿರಿಯ ಪೈಲ್ವಾನರಾದ ನಜೀರಸಾಬ್, ಉಸ್ತಾದ್ ಹನುಮಂತಪ್ಪ, ಹೊನ್ನಪ್ಪ, ತೆಗ್ಗಿನಕೇರಿ ಬುಡೇನಸಾಬ್, ಈರಪ್ಪ ಜಿಲ್ಲೆ ಹಾಗೂ ನೆರೆಜಿಲ್ಲೆಗಳಲ್ಲಿ ಕುಸ್ತಿ ಆಡಿದ್ದಾರೆ.
ಕಾಲದ ಚಕ್ರ ಉರುಳಿದಂತೆ ಪೈಲ್ವಾನರ ಸಂಖ್ಯೆ ಕಡಿಮೆಯಾಗುತ್ತಲೇ ಹೋಗಿದ್ದು, ಯುವಜನತೆ ಕೂಡ ಕಲಿಯಲು ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ಗರಡಿ ಮನೆಗಳು ಅನಾಥವಾಗಿವೆ. ಕೊಪ್ಪಳದ ಮಿಟ್ಟಿಕೇರಿ ರಸ್ತೆಯಲ್ಲಿರುವ ಹಳೇ ಗರಡಿ ಮನೆಯನ್ನು ಮಾತ್ರ ಅಭಿವೃದ್ಧಿ ಮಾಡಲಾಗುತ್ತಿದ್ದು, ತೆಗ್ಗಿನಕೇರಿ ಓಣಿ, ಸರ್ದಾರ್ ಓಣಿ, ಮಿಟ್ಟಿಕೇರಿ, ಗೌರಿ ಅಂಗಳ, ದಿಡ್ಡಿಕೇರಿಗಳಲ್ಲಿ ಇರುವ ಗರಡಿ ಮನೆಗಳು ಕೂಡ ಅಭಿವೃದ್ಧಿಯಾಗಬೇಕಿದೆ. ದಿಡ್ಡಿಕೇರಿಯಲ್ಲಿ ಅವಸಾನದ ಅಂಚಿಗೆ ತಲುಪಿರುವ ಗರಡಿ ಮನೆಯನ್ನು ಸ್ಥಳೀಯರು ಹಣ ಹೊಂದಿಸಿ ಒಂದಷ್ಟು ಅಭಿವೃದ್ಧಿ ಮಾಡಿದ್ದಾರೆ. ಇನ್ನೂ ಸಾಕಷ್ಟು ಪ್ರಗತಿಯಾಗಬೇಕಿದೆ. ಮುಂದಿನ ದಿನಗಳಲ್ಲಿಯೂ ಮಾಡುವ ಗುರಿಯನ್ನು ಸ್ಥಳೀಯರು ಹೊಂದಿದ್ದಾರೆ.
ಹಿಂದಿನ ಎರಡು ವರ್ಷಗಳಿಂದ ಗವಿಮಠದ ಜಾತ್ರೆಯಲ್ಲಿ ನಡೆಯುತ್ತಿರುವ ಕುಸ್ತಿ ಸ್ಪರ್ಧೆಗಳಲ್ಲಿ ಗದಗ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಹಂಪಿ ಉತ್ಸವ ಮತ್ತು ಮೈಸೂರು ದಸರಾ ಸಂದರ್ಭದಲ್ಲಿ ಪಾಲ್ಗೊಂಡ ಹೆಸರಾಂತ ಪೈಲ್ವಾನರು ಭಾಗಿಯಾಗಿದ್ದರು. ಸ್ಥಳೀಯ ಪ್ರತಿಭೆಗಳಿಗೂ ಅವಕಾಶ ಕೊಡಲಾಗಿತ್ತು. ನಿರಂತರವಾಗಿ ಸ್ಪರ್ಧೆಗಳು ನಡೆದರೆ ಮಾತ್ರ ಯುವಜನತೆ ಅಖಾಡದ ಪಟ್ಟುಗಳನ್ನು ಕಲಿಯಲು ಬರುತ್ತಾರೆ. ಮೊಬೈಲ್, ಟಿವಿ ಜೊತೆಗೆ ಇನ್ನಿತರ ಕ್ರೀಡೆಗಳ ಬೆನ್ನು ಹೊತ್ತಿರುವ ಯುವಜನತೆ ಕುಸ್ತಿಯತ್ತಲೂ ಗಮನ ಹರಿಸಿದರೆ ಪೈಲ್ವಾನರು ಬೆಳೆಯುತ್ತಾರೆ, ಗರಡಿ ಮನೆಗಳು ಕೂಡ ಉಳಿಯುತ್ತವೆ.
ಕೊಪ್ಪಳದಲ್ಲಿ ಅವನತಿ ಅಂಚಿಗೆ ತಲುಪಿರುವ ಗರಡಿ ಮನೆಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಕೊಡಬೇಕು. ಹೊಸದಾಗಿ ಕುಸ್ತಿ ಕಲಿಯಲು ಬರುವ ಮಕ್ಕಳಿಗೆ ನೆರವಾಗಬೇಕು.– ಸಾಧಿಕ್ ಅಲಿ ದಫೇದಾರ್ ಅದರ್ಶ ಕುಸ್ತಿ ಕ್ರೀಡಾಪಟುಗಳ ಸಂಘದ ಅಧ್ಯಕ್ಷ
ಹಾಳಾಗಿರುವ ಗರಡಿ ಮನೆಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿ ಪಡಿಸಬೇಕು. ಇದರಿಂದ ಮಕ್ಕಳಿಗೂ ಕುಸ್ತಿ ಕಲಿಸಲು ಸಾಧ್ಯವಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು.- ಭೀಮಸಿ ಗಾಳಿ, ಹಿರಿಯ ಪೈಲ್ವಾನ್
ಒಂದು ಗರಡಿ ಮನೆ ಅಭಿವೃದ್ಧಿ
ಕೊಪ್ಪಳ: ಜಿಲ್ಲಾಕೇಂದ್ರದಲ್ಲಿ ಹಳೆಯ ಕಾಲದ ಒಟ್ಟು ಆರು ಗರಡಿ ಮನೆಗಳು ಇದ್ದು ಇದರಲ್ಲಿ 2024–25ನೇ ಶಾಸಕ ರಾಘವೇಂದ್ರ ಹಿಟ್ನಾಳ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಿಟ್ಟಿಕೇರಿ ರಸ್ತೆಯಲ್ಲಿರುವ ಹಳೆ ಗರಡಿ ಮನೆಯನ್ನು ಅಭಿವೃದ್ಧಿ ಪಡಿಸಲು ₹5 ಲಕ್ಷ ಅನುದಾನ ನೀಡಿದ್ದಾರೆ. ನಿರ್ಮಿತಿ ಕೇಂದ್ರ ಈ ಕಾಮಗಾರಿ ಮಾಡುತ್ತಿದ್ದು ಇದಕ್ಕೆ ‘ಯುವಕ ಭವನ’ ಎಂದು ಹೆಸರಿಡಲಾಗಿದೆ.
ಈ ಗರಡಿ ಮನೆಗೆ ಪ್ರವೇಶದ ಗೋಡೆ ಕಟ್ಟಲಾಗಿದ್ದು ಕಬ್ಬಿಣದ ಸರಳುಗಳನ್ನು ಅಳವಡಿಸಲಾಗಿದೆ. ಪೇಂಟ್ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಖಾಡದಲ್ಲಿ ಹೊಸದಾಗಿ ಮಣ್ಣು ಹಾಕಲಾಗುತ್ತಿದ್ದು ಕುಸ್ತಿ ಸ್ಪರ್ಧೆಗೂ ಮೊದಲು ದೈಹಿಕ ತಾಲೀಮು ಮಾಡಲು ವಿವಿಧ ತೂಕಗಳ ಹಾಗೂ ಅಳತೆಗಳ ಕಟ್ಟಿಗೆಗಳನ್ನು ತಯಾರಿಸಲಾಗುತ್ತಿದೆ.
‘ಹಂತಹಂತವಾಗಿ ಅಭಿವೃದ್ಧಿ ಕ್ರಮ’
ಕೊಪ್ಪಳ: ಶಾಸಕರ ಅನುದಾನದಲ್ಲಿ ಒಂದು ಗರಡಿ ಮನೆ ಈಗ ಅಭಿವೃದ್ಧಿ ಮಾಡಲಾಗುತ್ತಿದ್ದು ಉಳಿದ ಗರಡಿ ಮನೆಗಳ ಅಭಿವೃದ್ಧಿಗೂ ಹಂತಹಂತವಾಗಿ ಕ್ರಮ ವಹಿಸಲಾಗುವುದು. ಕ್ರೀಡಾ ಇಲಾಖೆಯಿಂದಲೂ ಸಹಕಾರ ನೀಡಲಾಗುವುದು ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಹೇಳಿದರು.
‘ಹಿಂದಿನ 12 ವರ್ಷಗಳಿಂದ ಜಿಲ್ಲೆಯ ಒಬ್ಬ ಪೈಲ್ವಾನರಿಗೂ ಮಾಸಾಶನ ಸಿಕ್ಕಿರಲಿಲ್ಲ. ಈ ವರ್ಷ ಆರು ಜನರಿಗೆ ಲಭಿಸಿದೆ. ನಿರಂತರವಾಗಿ ಕುಸ್ತಿ ಸ್ಪರ್ಧೆಗಳು ನಡೆದರೆ ಅಖಾಡಗಳು ಉಳಿಯುತ್ತವೆ. ಹೊಸ ಪೈಲ್ವಾನರೂ ಬರುತ್ತಾರೆ. ಈ ನಿಟ್ಟಿನಲ್ಲಿನಲ್ಲಿಯೂ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.