ADVERTISEMENT

ಗವಿಮಠ ಜಾತ್ರೆಗೆ ಚಾಲನೆ: ಬಸವಪಟ ಆರೋಹಣ

ಬಿಗಿ ಬಂದೋಬಸ್ತ್‌ಗೆ 5 ಸಾವಿರ ಸಿಬ್ಬಂದಿ, ದಾಸೋಹಕ್ಕೆ ಭಕ್ತರಿಂದ ಆಹಾರ ಪದಾರ್ಥ

ಸಿದ್ದನಗೌಡ ಪಾಟೀಲ
Published 18 ಜನವರಿ 2019, 14:18 IST
Last Updated 18 ಜನವರಿ 2019, 14:18 IST
ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಲಕ್ಷಾಂತರ ಭಕ್ತರಿಗೆ ಪ್ರಸಾದಕ್ಕೆ ಸಜ್ಜುಗೊಳಿಸಿರುವ ದಾಸೋಹ ಮಂಟಪ
ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಲಕ್ಷಾಂತರ ಭಕ್ತರಿಗೆ ಪ್ರಸಾದಕ್ಕೆ ಸಜ್ಜುಗೊಳಿಸಿರುವ ದಾಸೋಹ ಮಂಟಪ   

ಕೊಪ್ಪಳ: ಜನರ ಜಾತ್ರೆ ಎಂದೇ ಗುರುತಿಸಲಾದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಅಧಿಕೃತ ಚಾಲನೆ ದೊರೆಯಿತು.

ಬಸವಪಟ ಧ್ವಜಾರೋಹಣ ನೆರವೇರಿಸಿದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಮಠದ ಆವರಣದಲ್ಲಿರುವ ಅನ್ನಪೂರ್ಣೇಶ್ವರಿ ದೇವಿ ಮೂರ್ತಿಗೆ ಉಡಿ ತುಂಬಿ ಧಾರ್ಮಿಕ ಕಾರ್ಯ ಆರಂಭಗೊಳಿಸಿದರು.

ನಗರದ ಜಡೇಗೌಡರ ಮನೆತನದವರ ನೇತೃತ್ವದಲ್ಲಿ ಅರ್ಚಕರು ವಿವಿಧ ಮಂತ್ರಘೋಷ ಹೇಳಿದರು. ವಾದ್ಯ ಘೋಷನಡೆಯಿತು. ಕಳಸ ಹಿಡಿದುಕೊಂಡು ಮಹಿಳೆಯರು ಭಾಗವಹಿಸಿದ್ದರು.

ADVERTISEMENT

ಬಸವಪಟ ಹಿಡಿದುಕೊಂಡವರುಮಠದ ಗರ್ಭಗುಡಿಗೆ 5 ಸುತ್ತುಹಾಕಿ ಬಂದು ಇದೇ ಪ್ರದೇಶದ ಈಶಾನ್ಯ ದಿಕ್ಕಿನಲ್ಲಿರುವ ಕಂಬದ ಮೇಲೆ ಬಸವಪಟ ಏರಿಸಿದರು.

ಮಹಾದಾಸೋಹ ವಿಶೇಷ: ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಈ ಜಾತ್ರೆಯಲ್ಲಿ ಭಕ್ತರಿಗೆ ಪ್ರಸಾದಕ್ಕೆ ತೊಂದರೆ ಆಗದಂತೆವನಸ್ಪತಿ ಉದ್ಯಾನದಲ್ಲಿ ಅತ್ಯಾಧುನಿಕ ಮಹಾ ದಾಸೋಹ ಮಂಟಪ ತೆರೆಯಲಾಗಿದೆ. ಮರಗಳನ್ನು ಕಡಿಯದೇ ನೆರಳಿನಲ್ಲಿ ಭಕ್ತರು ಕೂತು ಪ್ರಸಾದ ಸವಿಯಲು ವ್ಯವಸ್ಥೆ ಮಾಡಲಾಗಿದೆ.

ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಗವಿಸಿದ್ಧೇಶ್ವರ ಟ್ರಸ್ಟ್ ಸಮಿತಿ, ದಾನಿಗಳು ಮತ್ತು ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಹಕರಿಸಿದ್ದಾರೆ. ಸ್ವಚ್ಛತೆ, ಆಹಾರ ಸುರಕ್ಷತೆ ದೃಷ್ಟಿಯಿಂದ ಪರೀಕ್ಷಾ ಸಿಬ್ಬಂದಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 1 ಲಕ್ಷಕ್ಕೂ ಹೆಚ್ಚು ರೊಟ್ಟಿ, ಲಾರಿಗಟ್ಟಲೇ ಬೂಂದಿ, ರವೆ ಉಂಡಿ, ಮಾದಲಿ, ಚಟ್ನಿ ಸೇರಿದಂತೆ ವಿವಿಧ ತರಹದ ಪದಾರ್ಥಗಳನ್ನು ಭಕ್ತರು ಪ್ರತಿ ದಿನ ನೀಡುತ್ತಿದ್ದಾರೆ.

10 ಸಾವಿರ ಜನರಿಗೆ ವಸತಿ,ತಾತ್ಕಾಲಿಕಶೌಚಾಲಯ, ಶುದ್ಧ ಕುಡಿಯುವ ನೀರು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗವಿಮಠದ ಗುಡ್ಡ, ಕೈಲಾಸ ಮಂಟಪ, ಶಾಲೆ, ಕಾಲೇಜುಗಳಿಗೆ ಅತ್ಯಾಕರ್ಷಕ ವಿದ್ಯುತ್ ದೀಪಾಲಂಕರ ಕಣ್ಮನ ಸೆಳೆಯುತ್ತಿದೆ. ಶನಿವಾರ ತೆಪ್ಪೋತ್ಸವ ಮಠದ ಕೆರೆಯಲ್ಲಿ ನಡೆಯಲಿದೆ.

ಜಾತ್ರಾ ಮಹೋತ್ಸವದ ಭದ್ರತೆಗೆ 3 ಸಾವಿರ ಪೊಲೀಸರು, 20 ಡಿಎಆರ್ ತುಕಡಿಗಳು, 10 ಕೆಎಸ್‌ಆರ್‌ಪಿ ಪ್ರಹಾರ ದಳ ತುಕಡಿ, 600 ಜನ ಗೃಹ ರಕ್ಷಕ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆಗೊಳಿಸಲಾಗಿದೆ. 60 ಜನ ನುರಿತ ಅಪರಾಧ ನಿಯಂತ್ರಣಕ್ಕೆ ಅಧಿಕಾರ ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ಅಪರಾಧ ನಿಯಂತ್ರಣ ಮತ್ತು ಪತ್ತೆ ತಂಡ ಮತ್ತು ತುರ್ತು ಪರಿಸ್ಥಿತಿ ನಿಭಾಯಿಸಲು 20 ಮೊಬೈಲ್ ಆಂಬುಲನ್ಸ್, ಅಗ್ನಿಶಾಮಕ ವಾಹನ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.